ಬಳ್ಳಾರಿಯಲ್ಲಿ ದಲಿತರ ಮೇಲೆ ದೌರ್ಜನ್ಯ: ಪರಿಹಾರ, ಸೂಕ್ತ ಭದ್ರತೆಗೆ ಆಗ್ರಹಿಸಿ ಬೆಂಗಳೂರು ಚಲೋ

Update: 2018-06-27 15:15 GMT

ಬೆಂಗಳೂರು, ಜೂ.27: ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಗೋನಾಳ್‌ನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯದ ವೇಳೆ ಮಾರಣಾಂತಿಕ ಹಲ್ಲೆಗೆ ಗುರಿಯಾದ ದೊಡ್ಡ ದ್ಯಾವಣ್ಣ ಎಂಬುವರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಡಿಎಚ್‌ಎಸ್ ನೇತೃತ್ವದಲ್ಲಿ ಬೆಂಗಳೂರು ಚಲೋ ನಡೆಸಲಾಯಿತು.

ಬುಧವಾರ ನಗರದ ಸಿಟಿ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ದಲಿತರ ಸಂಘಟನೆಗಳು, ಗೋನಾಳ್ ಗ್ರಾಮದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಶ್ರೀರಾಂರೆಡ್ಡಿ, ಗೋನಾಳ್ ಗ್ರಾಮದಲ್ಲಿ ಹಲ್ಲೆಗೊಳಾದ ದಲಿತ ಸಮುದಾಯದ ದೊಡ್ಡ ದ್ಯಾವಣ್ಣನಿಗೆ 25ಲಕ್ಷ ರೂ. ಪರಿಹಾರ ಜೊತೆಗೆ ಸರಕಾರಿ ಹುದ್ದೆ ನೀಡಬೇಕೆಂದು ಒತ್ತಾಯಿಸಿದರು.

ಗೋನಾಳ್ ಗ್ರಾಮದಲ್ಲಿ ದಲಿತರ ಮೇಲೆ 2012ರಿಂದ ಇತ್ತೀಚೆಗೆ ದಿನಗಳ ವರೆಗೂ ದಲಿತರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುವಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಮಸಿ ಬಳಿಯುವುದು, ಚಪ್ಪಲಿ ಹಾರ ಹಾಕುವುದು ಸೇರಿದಂತೆ ಇನ್ನಿತರ ಘಟನೆಗಳು ನಡೆಯುತ್ತಿದ್ದು, ಪೊಲೀಸರು ಇದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಡಿಎಚ್‌ಎಸ್ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಿ, ಈ ಗ್ರಾಮಗಳಲ್ಲಿ ನಡೆದಿರುವ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಪ್ರತಿ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ, ಪ್ರತಿಭಟನೆ ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು ಪ್ರತಿಭಟನೆಯಲ್ಲಿ ಬಿ.ಮಾಳಮ್ಮ, ವಿ.ಎಸ್.ಶಿವಶಂಕರ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News