ಬಿಎಂಆರ್‌ಸಿಎಲ್ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ: ಹೈಕೋರ್ಟ್‌ಗೆ ಮಾಹಿತಿ

Update: 2018-06-27 16:26 GMT

ಬೆಂಗಳೂರು, ಜೂ.27: ಬೆಂಗಳೂರು ಮೆಟ್ರೋ ರೈಲು ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ವೇತನ ಹೆಚ್ಚಳ, ನೌಕರರ ಸಂಘಕ್ಕೆ ಮಾನ್ಯತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಬಿಎಂಆರ್‌ಸಿಎಲ್ ನೌಕರರ ಸಂಘ ಕರೆ ನೀಡಿದ್ದ ಮುಷ್ಕರ ತಡೆಯುವಂತೆ ಕೋರಿ ಮೆಟ್ರೋ ರೈಲು ನಿಗಮ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠದಲ್ಲಿ ಬುಧವಾರ ನಡೆಯಿತು. ಈ ವೇಳೆ, ಮೆಟ್ರೋ ರೈಲು ನಿಗಮ ಹಾಗೂ ನೌಕರರ ಸಂಘದ ಪ್ರತಿನಿಧಿಗಳೊಂದಿಗೆ ಸರಕಾರ ನಡೆಸಿರುವ ತ್ರಿಪಕ್ಷೀಯ ಸಭೆಯ ನಡಾವಳಿಗೆ ಆಕ್ಷೇಪಣೆ ಸಲ್ಲಿಸಿದ ನೌಕರರ ಸಂಘದ ಪರ ವಕೀಲ ಲೀಲಾ ಕೃಷ್ಣನ್, ತ್ರಿಪಕ್ಷೀಯ ಸಭೆಯ ವೇಳೆ ಸರಕಾರದ ಮುಖ್ಯ ಕಾರ್ಯದರ್ಶಿ ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಯಾವುದೇ ಆಸಕ್ತಿ ತೋರಿಲ್ಲ ಎಂದು ದೂರಿದರು.

ಹೈಕೋರ್ಟ್ ನಿರ್ದೇಶನದಂತೆ ಜೂ. 8ರಂದು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದಶಿ ತ್ರಿಪಕ್ಷೀಯ ಸಭೆ ನಡೆಸಿದ್ದರು. ಅದಾದ ಬಳಿಕ ಜೂ. 15ರಂದು ಸಭೆ ನಡೆಸಿದ ಸರಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ನಮ್ಮ ಬೇಡಿಕೆಗಳನ್ನು ಆಲಿಸದೆ, ಬಿಎಂಆರ್‌ಸಿಎಲ್ ಯಾವ ಸೌಲಭ್ಯಗಳನ್ನುನೀಡಲಿದೆಯೋ ಅದನ್ನು ಒಪ್ಪಿಕೊಂಡು ಕೆಲಸ ಮಾಡಿ. ಇಲ್ಲವಾದರೆ ನಿಮಗಿಷ್ಟ ಬಂದಲ್ಲಿ ಕೆಲಸ ಮಾಡಬಹುದು. ಮೆಟ್ರೋ ನಿಗಮದಲ್ಲಿ ಕೆಲಸ ಮಾಡಲು ಲಕ್ಷಾಂತರ ಜನ ಕಾದು ಕುಳಿತಿದ್ದಾರೆ ಎಂದು ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆಂದು ದೂರಿದರು.

ಅಲ್ಲದೆ, ಮೆಟ್ರೋ ನೌಕರರ ಸಂಘ ಮುಷ್ಕರವನ್ನು ಹಿಂಪಡೆಯುವುದಾಗಿ ಭರವಸೆ ನೀಡಿದೆ ಎಂದು ದಾಖಲಿಸಿಕೊಂಡು ಮುಖ್ಯ ಕಾರ್ಯದರ್ಶಿಗಳು ಸಭೆಯನ್ನು ಮುಕ್ತಾಯಗೊಳಿಸಿದ್ದಾರೆ. ಆದರೆ ಅಂಥ ಯಾವುದೇ ಭರವಸೆಗಳನ್ನು ನೌಕರರ ಸಂಘ ನೀಡಿಲ್ಲ ಎಂದು ಆಕ್ಷೇಪಿಸಿದರು.

ಮೆಟ್ರೋ ರೈಲು ನಿಗಮದ ಪರ ವಕೀಲ ಸಂತೋಷ್ ನಾರಾಯಣ್ ವಾದಿಸಿ, ಬಿಎಂಆರ್‌ಸಿಎಲ್ ನೌಕರರ ಕೆಲ ಆರ್ಥಿಕ ಬೇಡಿಕೆಗಳನ್ನು ಪೂರೈಸಲು ಮಧ್ಯಂತರ ವ್ಯವಸ್ಥೆ ಮಾಡಲಾಗಿದೆ. ಕಾರ್ಯಾಚರಣೆ ಮತ್ತು ನಿರ್ವಹಣೆ (ಆಪರೇಷನ್ ಆ್ಯಂಡ್ ಮೇಂಟೆನೆನ್ಸ್) ವಿಭಾಗದ ಸಿಬ್ಬಂದಿಗೆ ರಾತ್ರಿ ಪಾಳಿ ಭತ್ತೆ, ಲೋಕೋ ಪೈಲೆಟ್‌ಗಳಲ್ಲಿ ಹಾರ್ಡ್ ಡ್ಯೂಟಿ ಭತ್ತೆ, ವಾಷಿಂಗ್ ಭತ್ತೆ, ಸಾರಿಗೆ ಭತ್ತೆ ನೀಡಲು ನಿಗಮ ನಿರ್ಧರಿಸಿದ್ದು, ಈ ಕುರಿತು ಜೂ. 22ರಂದು ಆದೇಶಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಂತಿಮವಾಗಿ, ಮುಖ್ಯ ಕಾರ್ಯದರ್ಶಿಗಳ ವರದಿಗೆ ಆಕ್ಷೇಪಣೆ ಸಲ್ಲಿಸಲು ಬಿಎಂಆರ್‌ಸಿಎಲ್ ಪರ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಒಂದು ವಾರ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News