ಅತಿಯಾದ ಪರಭಾಷಿಕರ ಹಾವಳಿ: ವಾಟಾಳ್ ನಾಗರಾಜ್

Update: 2018-06-28 13:32 GMT

ಬೆಂಗಳೂರು, ಜೂ.28: ಕರ್ನಾಟದಲ್ಲಿ ಕನ್ನಡಿಗರ ಮೇಲೆ ಪರಭಾಷಿಕರ ಹಾವಳಿ ಹೆಚ್ಚಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಇಂದಿಲ್ಲಿ ಹೇಳಿದರು.

ಗುರುವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವಿನಾಯಕ ನಕ್ಷತ್ರ ಮಂಡಳಿ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ, ವೀರಸೇನಾನಿ ಮ.ರಾಮಮೂರ್ತಿ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಮ್ಮ ರಾಜ್ಯದಲ್ಲಿ ದಿನೇ ದಿನೇ ಪರಭಾಷಿಕರ ಹಾವಳಿ ಹೆಚ್ಚಾಗುತ್ತಲೇ ಇದೆ. ಪರಭಾಷಿಕರು ಕನ್ನಡ ಕಲಿಯಲು ಮುಂದಾಗುತ್ತಿಲ್ಲ. ಬದಲಾಗಿ, ಅವರ ಭಾಷೆಯನ್ನೇ ನಮ್ಮ ಮೇಲೆ ಹೇರಲಾಗುತ್ತಿದೆ. ಈ ಬಗ್ಗೆ ಕನ್ನಡಪರ ಹೋರಾಟಗಳನ್ನು ತೀವ್ರಗೊಳಿಸಬೇಕು. ಜೊತೆಗೆ ಜಾಗೃತಿ ಮೂಡಿಸುವಂತಹ ಅಭಿಯಾನಗಳನ್ನು ಆಯೋಜಿಸಬೇಕಾಗಿದೆ ಎಂದರು.

ಕನ್ನಡ ಕಲಿಕೆ ಕೈಬಿಟ್ಟು ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ರಾಜಧಾನಿ ಬೆಂಗಳೂರು ಕನ್ನಡಿಗರ ಕೈ ತಪ್ಪುವ ಕಾಲ ಸನ್ನಿಹಿತವಾಗಬಾರದೆಂದರೆ, ಪರಭಾಷಿಕರಿಂದ ಮುಕ್ತಿ ಸಿಗಬೇಕು. ಈ ನಿಟ್ಟಿನಲ್ಲಿ ಮತ್ತೆ ಕನ್ನಡ ಪರ ಚಟುವಟಿಕೆಗಳು ತೀವ್ರ ಸ್ವರೂಪದಲ್ಲಿ ಹೋರಾಟ ನಡೆಸಬೇಕಿದೆ ಎಂದು ವಾಟಾಳ್ ನುಡಿದರು.

ಕನ್ನಡ ಮಾಧ್ಯಮದಲ್ಲೇ ಓದಿದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ, ಉದ್ಯೋಗಗಳ ಮೀಸಲಾತಿಗಾಗಿ ಹೋರಾಟ ನಡೆಸಬೇಕಿದೆ ಎಂದ ಅವರು, ಸಿನಿಮಾ, ಧಾರಾವಾಹಿಗಳ ಡಬ್ಬಿಂಗ್ ನಿಲ್ಲಬೇಕು. ಕಾಲಾ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿದ ರಾಜ್ಯ ಸರಕಾರದ ನಡೆ ನಾಚಿಕೆಗೇಡಿನ ಸಂಗತಿ ಎಂದು ವಾಟಾಳ್ ವಾಗ್ದಾಳಿ ನಡೆಸಿದರು. ಕಾರ್ಯಕ್ರಮದಲ್ಲಿ ಕಮಲಮ್ಮ ರಾಮಮೂರ್ತಿ ಅವರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News