15 ದಿನದೊಳಗೆ ರಸ್ತೆ ಗುಂಡಿ ಮುಚ್ಚಲು ಕಟ್ಟುನಿಟ್ಟಿನ ಸೂಚನೆ: ಮೇಯರ್ ಸಂಪತ್‌ ರಾಜ್

Update: 2018-06-28 13:39 GMT

ಬೆಂಗಳೂರು, ಜೂ.28: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಸ ನಿರ್ವಹಣೆ ಮತ್ತು ರಸ್ತೆ ಗುಂಡಿಗಳನ್ನು ಮುಚ್ಚುವ ಬಗ್ಗೆ ಗಮನಹರಿಸಲು ಇಂಜಿನಿಯರ್‌ಗಳನ್ನು ನೇಮಕ ಮಾಡಲಾಗುವುದೆಂದು ಬಿಬಿಎಂಪಿ ಮೇಯರ್ ಆರ್.ಸಂಪತ್‌ರಾಜ್ ಹೇಳಿದರು.

ಗುರುವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇದೇ ಉದ್ದೇಶಕ್ಕಾಗಿ ಬೇರೆ ಇಲಾಖೆಯಿಂದ ಯರವಲು ಪಡೆದುಕೊಳ್ಳುವುದಿಲ್ಲ. ಬಿಬಿಎಂಪಿಯಲ್ಲಿರುವ ದಕ್ಷ ಇಂಜಿನಿಯರ್ ಅವರನ್ನೇ ನಿಯೋಜಿಸಲಾಗುವುದು ಎಂದು ಹೇಳಿದರು.
15 ದಿನಗಳೊಳಗಾಗಿ ಗುಂಡಿಗಳನ್ನು ಮುಚ್ಚುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಗುಂಡಿ ಇರುತ್ತವೋ ಅವುಗಳನ್ನು ತಮ್ಮ ಗಮನಕ್ಕೆ ತರುವ ಹೊಣೆ ಆಯಾ ವಲಯದ ಇಂಜಿನಿಯರ್‌ಗಳ ಜವಾಬ್ದಾರಿ ಎಂದು ಹೇಳಿದರು.

ಕಳೆದ ಬಾರಿಯ ಸಭೆಯಲ್ಲಿ ಸಿಬ್ಬಂದಿ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ್, ನಮ್ಮ ಸಮಿತಿಗೆ ಅಧಿಕಾರಿಗಳು ಯಾವುದೇ ಕಡತ ಕಳುಹಿಸುತ್ತಿಲ್ಲ. ಹಾಗಾಗಿ ನಮ್ಮ ಸಮಿತಿ ಇದ್ದರೂ ಇಲ್ಲದಂತಾಗಿದೆ ಎಂದು ಗಮನ ಸೆಳೆದಿದ್ದರು. ಹೀಗಾಗಿ, ಸ್ಥಾಯಿ ಸಮಿತಿಗಳಿಗೆ ಸಂಪೂರ್ಣ ಅಧಿಕಾರ ಸಿಗುವಂತಾಗಬೇಕು ಎಂದು ಪ್ರತಿ ಪಕ್ಷ ನಾಯಕ ಪದ್ಮನಾಭರೆಡ್ಡಿ ತಿಳಿಸಿದರು.

ಪಾಲಿಕೆಯಲ್ಲಿ 12 ಸ್ಥಾಯಿ ಸಮಿತಿಗಳಿವೆ. ಇವುಗಳಿಗೆ ಅಧಿಕಾರ ಚಲಾಯಿಸಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವೇ ಇಲ್ಲ. ಅಧಿಕಾರಿಗಳು ಕಡತ ಕಳುಹಿಸಬೇಕೆಂಬ ಕಾನೂನಿಲ್ಲ. ಕೌನ್ಸಿಲ್ ಮತ್ತು ಸ್ಥಾಯಿ ಸಮಿತಿಗಳಿಗೆ ಅಧಿಕಾರ ಇಲ್ಲದೆ ಇರುವುದು ಆಶ್ಚರ್ಯ. ಹಾಗಾಗಿ ಕೂಡಲೇ ಕಾಯ್ದೆಗೆ ತಿದ್ದುಪಡಿ ತಂದು ಸ್ಥಾಯಿ ಸಮಿತಿಗಳಿಗೆ ಅಧಿಕಾರ ಕೊಡಬೇಕು ಎಂದು ಪದ್ಮನಾಭರೆಡ್ಡಿ ಸಲಹೆ ನೀಡಿದರು.

ಒಂದು ಕಮಿಟಿಯವರು ತಮಗೆ ಅಧಿಕಾರ ಕೊಡಿ ಎಂದು ಒತ್ತಾಯಿಸುತ್ತಾರೆ. ಆದರೆ, ಇನ್ನೊಂದು ಕಮಿಟಿಯವರು ಅಧಿಕಾರ ವಹಿಸಿಕೊಂಡು 8 ತಿಂಗಳು ಕಳೆದರೂ ಒಂದೇ ಒಂದು ಸಭೆ ನಡೆಸಿಲ್ಲ. ಪಕ್ಷೇತರ ಸದಸ್ಯ ರಮೇಶ್ ರೆಡ್ಡಿ ಅವರನ್ನು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದ ನಂತರ ಈವರೆಗೆ ಒಂದು ಸಭೆ ಕೂಡಾ ನಡೆಸಿಲ್ಲ. ಸತತವಾಗಿ ಮೂರು ಸಭೆ ನಡೆಸದೆ ಇದ್ದರೆ ಅವರು ಅಧಿಕಾರ ಕಳೆದು ಕೊಳ್ಳಬೇಕಾಗುತ್ತೆ. ರಮೇಶ್ ವಿರುದ್ದ ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ರೆಡ್ಡಿ ಸಭೆಯಲ್ಲಿ ಪ್ರಶ್ನಿಸಿದರು. ಬಳಿಕ, ಉತ್ತರಿಸಿದ ಮೇಯರ್ ಇದನ್ನೆಲ್ಲ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಸುಳ್ಳು ಲೆಕ್ಕಕ್ಕೆ ಅಸಮಾಧಾನ: ತ್ಯಾಜ್ಯ ವಿಲೇವಾರಿ ಮಾಡುವ ಆಟೋ ಟಿಪ್ಪರ್ ಮತ್ತು ಕಾಂಪ್ಯಾಕ್ಟರ್‌ಗಳ ಬಗ್ಗೆ ಸುಳ್ಳು ಲೆಕ್ಕ ಹೇಳಲಾಗುತ್ತಿದೆ ಎಂದು ಕಾಂಗ್ರೆಸ್‌ನ ಮಂಜುನಾಥ್ ರೆಡ್ಡಿ, ಬಿಜೆಪಿ ಉಮೇಶ್ ಶೆಟ್ಟಿ ಸೇರಿ ಇನ್ನಿತರೆ ಸದಸ್ಯರು ಒಕ್ಕೊರಲಿನಿಂದ ಸಭೆಯಲ್ಲಿ ಹೇಳಿದರು. ಸದಸ್ಯರು ವಿಷಯ ಪ್ರಸ್ತಾಪಿಸಿ, ಸುಳ್ಳು ಲೆಕ್ಕದಿಂದಾಗಿ ನಾಗರಿಕರು ಬಿಬಿಎಂಪಿ ಸದಸ್ಯರ ಮೇಲೆ ಅನುಮಾನ ಪಡುವಂತಾಗಿದೆ ಎಂದು ದೂರಿದರು.

ಸುಳ್ಳು ಲೆಕ್ಕ ನೀಡುವ ಯಾರೇ ಆಗಿರಬಹುದು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಈಗಾಗಲೇ ಬಿಬಿಎಂಪಿ ಎಂದರೆ ಭ್ರಷ್ಟಾಚಾರ ಎಂಬ ಭಾವನೆಯಿದೆ. ಈ ಹಗರಣದಿಂದ ಘನತೆಗೆ ಧಕ್ಕೆ ಉಂಟಾಗುತ್ತದೆ ಎಂದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News