ಪಾಲಿಕೆ ಸ್ಥಾಯಿ ಸಮಿತಿಗಳಿಗೆ ಸಂಪೂರ್ಣ ಅಧಿಕಾರ ನೀಡಿ: ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ
ಬೆಂಗಳೂರು,ಜೂ.28: ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ವಾರ್ಡ್ ಕಮಿಟಿಗಳ ಮಾದರಿಯಲ್ಲಿ ಸಂಪೂರ್ಣ ಅಧಿಕಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.
ಬಿಬಿಎಂಪಿ ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ಸಭೆಯಲ್ಲಿ ಸಿಬ್ಬಂದಿ ಮತ್ತು ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ್, ನಮ್ಮ ಸಮಿತಿಗೆ ಅಧಿಕಾರಿಗಳು ಯಾವುದೇ ಕಡತ ಕಳುಹಿಸುತ್ತಿಲ್ಲ. ಹಾಗಾಗಿ ನಮ್ಮ ಸಮಿತಿ ಇದ್ದರೂ ಇಲ್ಲದಂತಾಗಿದೆ ಎಂದು ಗಮನ ಸೆಳೆದಿದ್ದರು. ಹಾಗಾಗಿ ಸ್ಥಾಯಿ ಸಮಿತಿಗಳಿಗೆ ಸಂಪೂರ್ಣ ಅಧಿಕಾರ ಸಿಗುವಂತಾಗಬೇಕು ಎಂದು ಹೇಳಿದರು.
ಪಾಲಿಕೆಯಲ್ಲಿ 12 ಸ್ಥಾಯಿ ಸಮಿತಿಗಳಿವೆ. ಇವುಗಳಿಗೆ ಅಧಿಕಾರ ಚಲಾಯಿಸಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವೇ ಇಲ್ಲ. ಅಧಿಕಾರಿಗಳು ಕಡತ ಕಳುಹಿಸಬೇಕೆಂಬ ಕಾನೂನಿಲ್ಲ. ಕೌನ್ಸಿಲ್ ಮತ್ತು ಸ್ಥಾಯಿ ಸಮಿತಿಗಳಿಗೆ ಅಧಿಕಾರ ಇಲ್ಲದೆ ಇರುವುದು ಆಶ್ಚರ್ಯ. ಹೀಗಾಗಿ, ಕೂಡಲೇ ಕಾಯ್ದೆಗೆ ತಿದ್ದುಪಡಿ ತಂದು ಸ್ಥಾಯಿ ಸಮಿತಿಗಳಿಗೆ ಅಧಿಕಾರ ಕೊಡಬೇಕು ಎಂದು ಸಲಹೆ ನೀಡಿದರು.
ಒಂದು ಕಮಿಟಿಯವರು ತಮಗೆ ಅಧಿಕಾರ ಕೊಡಿ ಎಂದು ಒತ್ತಾಯಿಸುತ್ತಾರೆ. ಇನ್ನೊಂದು ಕಮಿಟಿಯವರು ಅಧಿಕಾರ ವಹಿಸಿಕೊಂಡು 8 ತಿಂಗಳು ಕಳೆದರೂ ಒಂದೇ ಒಂದು ಸಭೆ ನಡೆಸಿಲ್ಲ. ಪಕ್ಷೇತರ ಸದಸ್ಯ ರಮೇಶ್‌ರೆಡ್ಡಿ ಅವರನ್ನು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, ಅವರು ಈವರೆಗೆ ಒಂದೂ ಸಭೆ ನಡೆಸಿಲ್ಲ.
ಸತತವಾಗಿ ಮೂರು ಸಭೆ ನಡೆಸದೇ ಇದ್ದರೆ ಅವರು ಅಧಿಕಾರ ಕಳೆದು ಕೊಳ್ಳಬೇಕಾಗುತ್ತೆ. ಹಾಗಾಗಿ ರಮೇಶ್ ವಿರುದ್ದ ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪದ್ಮನಾಭರೆಡ್ಡಿ ಪ್ರಶ್ನಿಸಿದರು. ಇದನ್ನೆಲ್ಲ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಮೇಯರ್ ಸಂಪತ್‌ರಾಜ್ ಭರವಸೆ ನೀಡಿದರು.