ಎರಡು ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
ಬೆಂಗಳೂರು, ಜೂ.28: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಆತ್ಮಹತ್ಯೆ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಬಾಗಲೂರು: ಮನೆಯವರ ಕಿರುಕುಳದಿಂದ ಬೇಸತ್ತ ಕೂಲಿ ಕಾರ್ಮಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬಾಗಲೂರಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಬಾಗಲೂರಿನ ಮುನೇಗೌಡ (55) ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನಂಜಪ್ಪ, ಶ್ರೀನಿವಾಸ, ನರಸಿಂಹಮೂರ್ತಿಯನ್ನು ಬಾಗಲೂರು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಬಾಗಲೂರು ಬಳಿ ಮುನೇಗೌಡ ಜಲ್ಲಿ ಕ್ರಷರ್‌ವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಮಾಲಕರು ಲಾರಿ ಕಳುಹಿಸುವುದಾಗಿ ಹೇಳಿ ನಂತರ ಸುಮ್ಮನಾಗಿದ್ದರು. ಮನೆಯವರು ಕೂಡ ಜಗಳ ಮಾಡುತ್ತಿದ್ದರಿಂದ ಬೇಸತ್ತಿದ್ದ ಮುನೇಗೌಡ, ಬುಧವಾರ ರಾತ್ರಿ 9:30ರ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ರೋಗಿ ಆತ್ಮಹತ್ಯೆ: ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಮತ್ತಿಕೆರೆಯ ನೇತಾಜಿ ವೃತ್ತದಲ್ಲಿ ನಡೆದಿದೆ.
ನೇತಾಜಿ ವೃತ್ತ ನಿವಾಸಿ ಆಂಡ್ರೋ (22) ಮೃತಪಟ್ಟ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಆಂಡ್ರೋ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.