3 ಹಂತಗಳ ಆಡಳಿತ ವ್ಯವಸ್ಥೆಗೆ ಸಮಿತಿ ಶಿಫಾರಸ್ಸು: ಬಿಬಿಎಂಪಿ ಪುನರ್‌ರಚನೆ ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್
ಬೆಂಗಳೂರು, ಜೂ.28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಯನ್ನು ಮೂರು ಹಂತಗಳಲ್ಲಿ ಪುನರ್ ರಚನೆ ಮಾಡಲು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಬಿಬಿಎಂಪಿ ಪುನರ್‌ರಚನೆ ಸಮಿತಿಯ ಅಧ್ಯಕ್ಷ ಬಿ.ಎಸ್.ಪಾಟೀಲ್ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜೊತೆ ನಡೆಸಿದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಗ್ರೇಟರ್ ಬೆಂಗಳೂರು ಅಥಾರಿಟಿ, ಬಹು ಪಾಲಿಕೆಗಳು ಹಾಗೂ ವಾರ್ಡ್ ಮಟ್ಟದಲ್ಲಿ ಆಡಳಿತ ನಡೆಸುವ ಸಂಬಂಧ ಸರಕಾರಕ್ಕೆ ವರದಿ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಿಸಿದರೆ, ನಮ್ಮ ಬೆಂಗಳೂರಿನಷ್ಟು ದೊಡ್ಡ ಪ್ರದೇಶವನ್ನು ಹೊಂದಿರುವ ಮತ್ತೊಂದು ಪಾಲಿಕೆ ಇಲ್ಲ. ವಿಶ್ವದ ವಿವಿಧ ನಗರಗಳನ್ನು ಹಲವಾರು ಪಾಲಿಕೆಗಳನ್ನಾಗಿ ವಿಭಜಿಸಿ ಆಡಳಿತ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 22 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದ್ದರೂ ಕೇವಲ 13-14 ಲಕ್ಷ ಆಸ್ತಿಗಳಿಂದ ಮಾತ್ರ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ 3 ವಾರ್ಡುಗಳಲ್ಲಿ ಪ್ರಾಯೋಗಿಕವಾಗಿ ಅಧ್ಯಯನ ನಡೆಸಿದ್ದು, ಎಷ್ಟು ತೆರಿಗೆ ಸಂಗ್ರಹಿಸಲಾಗುತ್ತಿದೆ, ಎಷ್ಟು ಸಂಗ್ರಹ ಮಾಡಬಹುದು ಎಂಬ ಮಾಹಿತಿಯನ್ನು ವರದಿಯಲ್ಲಿ ತಿಳಿಸಿದ್ದೇವೆ ಎಂದು ಅವರು ಹೇಳಿದರು.
ಸಮಿತಿಯ ಸದಸ್ಯ ಹಾಗೂ ಬಿಬಿಎಂಪಿ ಮಾಜಿ ಆಯುಕ್ತ ಸಿದ್ದಯ್ಯ ಮಾತನಾಡಿ, ಲಂಡನ್, ಪ್ಯಾರಿಸ್, ಜೋಹಾನ್ಸ್‌ಬರ್ಗ್ ಸೇರಿದಂತೆ ಪ್ರಮುಖ ನಗರ ಆಡಳಿತ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಿದ್ದೇವೆ. ಲಂಡನ್ ನಗರದಲ್ಲಿ 80 ಲಕ್ಷ ಜನಸಂಖ್ಯೆಯಿದ್ದು 32 ಪಾಲಿಕೆಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಆಡಳಿತ ವ್ಯವಸ್ಥೆಯನ್ನು ಸಂಪೂರ್ಣವಾಗಿ ವಿಕೇಂದ್ರೀಕರಣಗೊಳಿಸಲಾಗಿದೆ ಎಂದರು.
ನಮ್ಮ ದೇಶದಲ್ಲಿಯೂ ಜನಸಂಖ್ಯೆಗೆ ಅನುಗುಣವಾಗಿ ಪ್ರಮುಖ ನಗರಗಳಲ್ಲಿ ಒಂದಕ್ಕಿಂತ ಹೆಚ್ಚು ಪಾಲಿಕೆಗಳು ಕಾರ್ಯನಿರ್ವಹಿಸುತ್ತಿವೆ. ಕೋಲ್ಕತ್ತಾದಲ್ಲಿ 32, ದಿಲ್ಲಿಯಲ್ಲಿ 3 ಹಾಗೂ ಮುಂಬೈನಲ್ಲಿ 8 ಪಾಲಿಕೆಗಳನ್ನಾಗಿ ವಿಭಜಿಸಿ ಆಡಳಿತ ನಡೆಸಲಾಗುತ್ತಿದೆ. ನಮ್ಮ ನಗರದ ಜನತೆಗೂ ವ್ಯವಸ್ಥಿತವಾದ ಆಡಳಿತ, ಸೌಲಭ್ಯಗಳು ಸಿಗಬೇಕು, ತೆರಿಗೆ ಸಂಗ್ರಹ ಸಮರ್ಪಕವಾಗಿ ಆಗಬೇಕು ಎಂಬುದು ಸಮಿತಿಯ ಶಿಫಾರಸ್ಸು ಆಗಿದೆ ಎಂದು ಅವರು ಹೇಳಿದರು.
ವಾರ್ಡ್‌ಮಟ್ಟದಲ್ಲಿ ಕಾರ್ಪೋರೇಟರ್ ಅಧ್ಯಕ್ಷತೆಯಲ್ಲಿ 20 ಮಂದಿ ಸದಸ್ಯರ ಸಮಿತಿಯು ಆಯಾ ವಾರ್ಡುಗಳ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿದೆ. ಆಯಾ ವಾರ್ಡುಗಳ ಬೇಕು, ಬೇಡಗಳ ಕುರಿತು ನಿರ್ಧರಿಸುವ ಅಧಿಕಾರವನ್ನು ಆ ಸಮಿತಿಗಳಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಪಾಲಿಕೆಗಳ ವ್ಯಾಪ್ತಿಯಲ್ಲಿ ಇರಬೇಕಾದ ಪ್ರದೇಶ, ಆಸ್ತಿಗಳ ಸಂಖ್ಯೆ, ಆದಾಯದ ಪ್ರಮಾಣ, ಜನಸಂಖ್ಯೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಮಧ್ಯದ ಹಂತದಲ್ಲಿ ಐದು ಪಾಲಿಕೆಗಳನ್ನು ರಚಿಸುವಂತೆ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ಬೆಂಗಳೂರು 721 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, 1 ಕೋಟಿ ಜನಸಂಖ್ಯೆಯನ್ನು ಹೊಂದಿದೆ ಎಂದು ಸಿದ್ದಯ್ಯ ಹೇಳಿದರು.
ನಾವು ಬಿಬಿಎಂಪಿ ಆಡಳಿತ ವ್ಯವಸ್ಥೆಯನ್ನು ವಿಭಜನೆ ಮಾಡಲು ಶಿಫಾರಸ್ಸು ಮಾಡುತ್ತಿದ್ದೆವೆಯೆ ಹೊರತು, ಬೆಂಗಳೂರು ನಗರವನ್ನು ವಿಭಜನೆ ಮಾಡುತ್ತಿಲ್ಲ. ಬೆಂಗಳೂರು ಬ್ರಾಂಡ್ ಉಳಿಸಿಕೊಳ್ಳುವ ಉದ್ದೇಶದಿಂದಲೇ ಗ್ರೇಟರ್ ಬೆಂಗಳೂರು ಅಥಾರಿಟಿ ರಚಿಸಲು ಶಿಫಾರಸ್ಸು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದು ಇಡೀ ನಗರಕ್ಕೆ ಸಂಬಂಧಿಸಿದ ದೊಡ್ಡ ಯೋಜನೆಗಳೂ, ನೀತಿಗಳು, ತೆರಿಗೆ ಸಂಗ್ರಹ, ಬೆಂಗಳೂರು ಜಲಮಂಡಳಿ, ಬಿಎಂಟಿಸಿ, ಬಿಡಿಎ, ಬಿಎಂಆರ್‌ಡಿಎ ಎಲ್ಲವನ್ನೂ ಒಂದೇ ವೇದಿಕೆಯಲ್ಲಿ ತಂದು, ಅವುಗಳ ಸ್ವಾತಂತ್ರಕ್ಕೆ ಯಾವುದೆ ಧಕ್ಕೆ ಬಾರದಂತೆ ಗ್ರೇಟರ್ ಬೆಂಗಳೂರು ಅಥಾರಿಟಿ ಕಾರ್ಯನಿರ್ವಹಿಸಲಿದೆ ಎಂದು ಸಿದ್ದಯ್ಯ ಹೇಳಿದರು.
ಬೆಂಗಳೂರು ನಗರದಲ್ಲಿ ಶೇ.40ರಷ್ಟು ತೆರಿಗೆಯನ್ನು ನಾವು ಸಂಗ್ರಹಿಸುತ್ತಿಲ್ಲ. ಆಸ್ತಿಗಳ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಹಾಗೂ ಬಿಡಿಎಯಲ್ಲಿರುವ ಅಂಕಿ ಅಂಶಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಸಮರ್ಪಕವಾಗಿ ತೆರಿಗೆ ಸಂಗ್ರಹ ಮಾಡಿದರೆ ಪಾಲಿಕೆಗೆ 5-7 ಸಾವಿರ ಕೋಟಿ ರೂ.ಗಳು ಆದಾಯ ಬರುತ್ತದೆ ಎಂದು ಸಿದ್ದಯ್ಯ ಹೇಳಿದರು.
ವಾರ್ಡುಗಳ ಪುನರ್ರಚನೆ ಅಗತ್ಯ: ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಿರುವ ವಾರ್ಡುಗಳ ಮಿತಿಯು ಅವೈಜ್ಞಾನಿಕವಾಗಿದೆ. ಒಂದು ವಾರ್ಡ್‌ನಲ್ಲಿ 21 ಸಾವಿರ ಜನಸಂಖ್ಯೆ ಯಿದ್ದರೆ, ಇನ್ನೊಂದು ವಾರ್ಡಿನಲ್ಲಿ 1 ಲಕ್ಷ ಜನಸಂಖ್ಯೆಯಿದೆ. ಆದರೆ, ಬಜೆಟ್ ಅನುದಾನ ಮಾತ್ರ ಸಮಾನವಾಗಿ ಹಂಚಿಕೆಯಾಗುತ್ತದೆ. ಇದರಿಂದ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಸಾಧ್ಯವಿಲ್ಲ. ಆದುದರಿಂದ, ನಗರದ ಒಳಗಡೆ 30 ಸಾವಿರ ಜನಸಂಖ್ಯೆಗೆ ಒಂದು ವಾರ್ಡು, ನಗರದ ಹೊರವಲಯದ ವಾರ್ಡುಗಳಲ್ಲಿ 20 ಸಾವಿರ ಜನಸಂಖ್ಯೆಗೆ ಒಂದು ವಾರ್ಡು ರಚನೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಬಿಬಿಎಂಪಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಅಲ್ಲದೆ, ಈ ಬಗ್ಗೆ ಕರಡು ಸಿದ್ಧಪಡಿಸಿ ಸರಕಾರಕ್ಕೆ ವರದಿ ರೂಪದಲ್ಲಿ ಸಲ್ಲಿಸಲಾಗಿದೆ. ಪೌರ ಕಾರ್ಮಿಕ ಹುದ್ದೆ ಹೊರತುಪಡಿಸಿ ಎಲ್ಲ ಹುದ್ದೆಗಳಿಗೂ ಲಿಖಿತ ಪರೀಕ್ಷೆ ಕಡ್ಡಾಯ ಮಾಡಬೇಕು, ಯಾವ ಹಂತದಲ್ಲಿಯೂ ಸಂದರ್ಶನ ವ್ಯವಸ್ಥೆ ಬೇಡ ಎಂದು ಅವರು ಹೇಳಿದರು.
ಮೇಯರ್ ಅವಧಿ ಐದು ವರ್ಷ ಇರಲಿದ್ದು, ಅವರು ನೇರವಾಗಿ ಜನರಿಂದಲೇ ಆಯ್ಕೆಯಾಗಲಿದ್ದಾರೆ. ಗ್ರೇಟರ್ ಬೆಂಗಳೂರು ಅಥಾರಿಟಿಯ ಮುಖ್ಯಸ್ಥರಾಗಿ ಮೊದಲ ಅವಧಿಗೆ ಮುಖ್ಯಮಂತ್ರಿ ಮುಂದುವರೆಯಲಿದ್ದಾರೆ. ಪಾಲಿಕೆಯ ಆಯುಕ್ತರು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿರಲಿದ್ದಾರೆ. ಪಾಲಿಕೆಗಳ ವ್ಯಾಪ್ತಿಯಲ್ಲಿ ಕಾರ್ಪೋರೇಟರ್‌ಗಳು ಮೇಯರ್ ಅನ್ನು ಆಯ್ಕೆ ಮಾಡಲಿದ್ದಾರೆ. ವಾರ್ಡುಗಳ ಮಟ್ಟದಲ್ಲಿ ಕಾರ್ಪೋರೇಟರ್ ಅಧ್ಯಕ್ಷತೆಯ ಸಮಿತಿ ಕಾರ್ಯನಿರ್ವಹಿಸಲಿದೆ.
-ಸಿದ್ದಯ್ಯ, ಬಿಬಿಎಂಪಿ ಪುನರ್ ರಚನೆ ಸಮಿತಿ ಸದಸ್ಯ