ಮಾಸಾಶನ ಹೆಚ್ಚಳಕ್ಕೆ ಕುಸ್ತಿ ಪಟುಗಳ ಒತ್ತಾಯ
ಬೆಂಗಳೂರು, ಜೂ. 28: ಕುಸ್ತಿ ಪಟುಗಳ ಮಾಸಾಶನವನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ನೂರಕ್ಕೂ ಹೆಚ್ಚು ಮಾಜಿ ಪೈಲ್ವಾನರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
ಗುರುವಾರ ಬೆಳಗ್ಗೆ ಇಲ್ಲಿನ ಜೆಪಿ ನಗರದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲು ಯತ್ನಿಸಿದ ಮಾಜಿ ಪೈಲ್ವಾನರಿಗೆ ನಿರಾಸೆ ಮೂಡಿಸಿತು. ಉಪ ರಾಷ್ಟ್ರಪತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಯಾರೊಬ್ಬರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಪೈಲ್ವಾನರು, ರಾಷ್ಟ್ರ, ಅಂತಾರಾಜ್ಯ ಹಾಗೂ ರಾಜ್ಯ ಮಟ್ಟದಲ್ಲಿ ಕುಸ್ತಿ ಅಖಾಡದಲ್ಲಿ ರಾಜ್ಯದ ಕೀರ್ತಿ ಎತ್ತಿಹಿಡಿದ ಕುಸ್ತಿ ಪಟುಗಳು ಆರ್ಥಿಕ ಸಂಕಷ್ಟದಲ್ಲಿ ಬದುಕು ದೂಡುತ್ತಿದ್ದು, ರಾಜ್ಯ ಸರಕಾರ ಅವರಿಗೆ ಸೂಕ್ತ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಕುಸ್ತಿಪಟುಗಳಿಗೆ ರಾಜ್ಯ ಸರಕಾರ 2,500ರೂ., ರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳಿಗೆ 3 ಸಾವಿರ ರೂ. ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳಿಗೆ 4 ಸಾವಿರ ರೂ. ಮಾಸಾಶನ ನೀಡುತ್ತಿದೆ. ಪ್ರಸಕ್ತ ಪರಿಸ್ಥಿತಿಯಲ್ಲಿ ಈ ಮೊತ್ತ ಸಾಕಾಗುತ್ತಿಲ್ಲ. ಆದುದರಿಂದ ಈ ಮೊತ್ತವನ್ನು ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಕುಸ್ತಿ ಪಟುಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಆಗಮಿಸಿದ್ದರು. ಆದರೆ, ಮಾಜಿ ಪೈಲ್ವಾನರಿಗೆ ಸಿಎಂ ಭೇಟಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ‘ಬಂದ ದಾರಿಗೆ ಸುಂಕವಿಲ್ಲ ಎಂಬಂತೆ’ ತಮ್ಮ ಊರುಗಳಿಗೆ ಹಿಂದಿರುಗಬೇಕಾಯಿತು.