ಬೆಂಗಳೂರು: ವಾರಾಂತ್ಯದಲ್ಲಿ 6 ಬೋಗಿಯ ಮೆಟ್ರೊ ಸಂಚಾರವಿಲ್ಲ

Update: 2018-06-28 16:07 GMT

ಬೆಂಗಳೂರು, ಜೂ.28: ಬೆಂಗಳೂರು ಮೆಟ್ರೊ ರೈಲು ನಿಗಮದ ಮೊದಲ 6 ಬೋಗಿಗಳ ರೈಲಿನ ಸಂಚಾರ ಸಮಯ ಬದಲಾವಣೆ ಮಾಡಿದ್ದು, ವಾರಾಂತ್ಯಗಳಲ್ಲಿ ಈ 6 ಬೋಗಿಗಳ ಮೆಟ್ರೊ ರೈಲು ಸಂಚರಿಸುವುದಿಲ್ಲ.

ಶನಿವಾರ ಹಾಗೂ ರವಿವಾರ ಐಟಿ-ಬಿಟಿ ಉದ್ಯೋಗಿಗಳಿಗೆ ರಜೆ ಇರಲಿದೆ. ಹಾಗೂ ರವಿವಾರ ಬಹುತೇಕ ಸರಕಾರಿ-ಖಾಸಗಿ ಉದ್ಯೋಗಿಗಳಿಗೆ ರಜೆ ಇರುತ್ತದೆ. ಈ ದಿನಗಳಲ್ಲಿ ಮೆಟ್ರೊ ಸಂಚಾರದಲ್ಲಿ ಜನದಟ್ಟಣೆ ಇರುವುದಿಲ್ಲ. ಹೀಗಾಗಿ 6ಬೋಗಿಯ ಮೆಟ್ರೋ ರೈಲು ಸಂಚಾರ ರದ್ದು ಪಡಿಸಲಾಗಿದೆ.

ಆರು ಬೋಗಿಗಳ ರೈಲಿನ ಸಂಚಾರದಲ್ಲಿ ಬೆಳಗಿನ ಹೊತ್ತು ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯವರೆಗೆ ನೇರಳೆ ಬಣ್ಣದ ಮಾರ್ಗದಲ್ಲಿ ಸಂಪೂರ್ಣ ಎರಡು ಸುತ್ತು ಸಂಚರಿಸಲಿದೆ. ಈ ಮೊದಲು ಪಶ್ಚಿಮ ದಿಕ್ಕಿಗೆ ಈ ನೇರಳೆ ಬಣ್ಣದ ಮೆಟ್ರೊ ರೈಲು ವಿಜಯನಗರದವರೆಗೆ ಮಾತ್ರ ಸಂಚರಿಸುತ್ತಿತ್ತು. ಮತ್ತೊಂದು ಬದಲಾವಣೆಯೆಂದರೆ ಒಂದು ಸುತ್ತಿನ ಪ್ರಯಾಣ ವಿಸ್ತರಣೆಯಾಗಿದೆ.

ವಿಜಯನಗರ ಮತ್ತು ಎಂಜಿ ರಸ್ತೆಯ ನಡುವೆ ಸಂಚರಿಸುವ ಬದಲು ಇನ್ನು ಮುಂದೆ ವಿಜಯನಗರ ಮತ್ತು ಬೈಯಪ್ಪನಹಳ್ಳಿ ಮಧ್ಯೆ ಎರಡೂ ಮಾರ್ಗಗಳಲ್ಲಿ ರೈಲು ಸಂಚರಿಸಲಿದೆ. ಬೆಳಗ್ಗೆ ಮತ್ತು ಸಾಯಂಕಾಲ ಹೊತ್ತು ರೌಂಡ್ ಟ್ರಿಪ್‌ನಲ್ಲಿ ಬದಲಾವಣೆಯಾಗಿದ್ದು, ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆ.

ಮೆಟ್ರೊ ಸಂಚಾರದ ವೇಳಾಪಟ್ಟಿಯಲ್ಲಿ ಆಗಿಂದಾಗ್ಗೆ ಬದಲಾವಣೆಯಾಗಲಿದೆ. ಜನರ ಬೇಡಿಕೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಬದಲಾಗಬಹುದು. ಒಂದು ವಾರ-ಹತ್ತು ದಿನಗಳ ಕಾಲ ನೋಡಿಕೊಂಡು ನಂತರ ಮತ್ತೊಂದು ವೇಳಾಪಟ್ಟಿ ನಿಗದಿಪಡಿಸಲಾಗುವುದು ಎಂದು ಮೆಟ್ರೊ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತ್‌ರಾವ್ ತಿಳಿಸಿದ್ದಾರೆ.

ಹಲವು ಮಹಿಳೆಯರು ಮಹಿಳಾ ಬೋಗಿಗಳಿಗೆ ಹತ್ತದೆ ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಮಹಿಳಾ ಬೋಗಿಗಳನ್ನು ಮಹಿಳೆಯರು ಹೆಚ್ಚೆಚ್ಚು ಬಳಸಿದರೆ ಸಾಮಾನ್ಯ ಬೋಗಿಗಳಲ್ಲಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದು. ಪ್ರಸ್ತುತ ಆರು ಬೋಗಿಗಳ ರೈಲಿನಲ್ಲಿ 1500ರಿಂದ 1600 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಸ್ಥಳವನ್ನು ಸೂಕ್ತವಾಗಿ ಬಳಸಿಕೊಂಡರೆ 2 ಸಾವಿರಕ್ಕೆ ಅಧಿಕ ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News