ಕುರುಬ ಅಧಿಕಾರಿಗಳನ್ನು ಮರುನಿಯುಕ್ತಿಗೊಳಿಸಿ: ಕುರುಬರ ಸಂಘಒತ್ತಾಯ

Update: 2018-06-28 16:08 GMT

ಬೆಂಗಳೂರು, ಜೂ.28: ನೂತನ ಸರಕಾರ ಕುರುಬ ಸಮುದಾಯದ ಅಧಿಕಾರಿಗಳ ವರ್ಗಾವಣೆ ನಿಲ್ಲಿಸಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಒತ್ತಾಯಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ರಾಜೇಂದ್ರ ಯಮನಪ್ಪ ಸಣ್ಣಕ್ಕಿ, ನೂತನ ಸಮ್ಮಿಶ್ರ ಸರಕಾರ ಕುರುಬ ಸಮುದಾಯಕ್ಕೆ ಸೇರಿದ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದೆ. ಒಂದೇ ದಿನ ಕುರುಬ ಸಮುದಾಯಕ್ಕೆ ಸೇರಿದ 6 ಅಧಿಕಾರಿಗಳ ವರ್ಗಾವಣೆ ಮಾಡಿದೆ ಎಂದು ಹೇಳಿದರು.

ಕುರುಬ ಸಮುದಾಯದ ಅಧಿಕಾರಿಗಳನ್ನು ಅವಧಿಪೂರ್ಣ ವರ್ಗಾವಣೆ ಮಾಡುತ್ತಿರುವುದು ಸರಕಾರದ ಸೇಡಿನ ಕ್ರಮವಾಗಿದೆ. ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ 52 ಕ್ಕೂ ಅಧಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಹೀಗಾಗಿ, ಕೂಡಲೇ ವರ್ಗಾವಣೆಗೊಂಡಿರುವ ಅಧಿಕಾರಿಗಳನ್ನು ಮರು ನಿಯುಕ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳು ಕುರುಬ ಸಮುದಾಯದವರು ಎಂಬ ಕಾರಣಕ್ಕಾಗಿ ಮನಸೋಇಚ್ಛೆ ವರ್ಗಾವಣೆ ಮಾಡುತ್ತಿರುವುದರಿಂದ ಸಮ್ಮಿಶ್ರ ಸರಕಾರದ ವೌಲ್ಯ ಕಳೆದುಕೊಳ್ಳುತ್ತಿದೆ. ಎಂಜಿನಿಯರುಗಳನ್ನು ಮತ್ತು ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳನ್ನು ಸಮನ್ವಯ ಸಮಿತಿ ಗಮನಕ್ಕೆ ತರದೇ ವರ್ಗಾವಣೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳ ವರ್ಗಾವಣೆ ಗಮನಿಸಿದರೆ ಸಮ್ಮಿಶ್ರ ಸರಕಾರ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News