ನಿಮಗೆ ಮಧುಮೇಹವಿದ್ದರೆ ಮೂತ್ರಪಿಂಡಗಳ ಕಾಯಿಲೆ ಬರದಂತೆ ನೋಡಿಕೊಳ್ಳಿ

Update: 2018-06-29 11:08 GMT

ಮಧುಮೇಹದಿಂದ ಬಳಲುತ್ತಿರುವವರಲ್ಲಿ ಮೂತ್ರಪಿಂಡಗಳಿಗೆ ಹಾನಿಯುಂಟಾಗುವುದು ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದೆ. ಭಾರತದಲ್ಲಿ ಶೇ 40ರಿಂದ ಶೇ.60ರಷ್ಟು ದೀರ್ಘಕಾಲೀನ ಮೂತ್ರಪಿಂಡ ರೋಗ(ಸಿಕೆಡಿ)ಗಳಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾರಣವಾಗಿವೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಸಿಕೆಡಿಯು ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗುತ್ತದೆ.

ರಕ್ತದಲ್ಲಿ ಅತಿಯಾದ ಗ್ಲುಕೋಸ್ ಮಟ್ಟ ಮೂತ್ರಪಿಂಡಗಳಿಗೆ ಹೇಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ದೀರ್ಘಕಾಲೀನ ಮೂತ್ರಪಿಂಡ ರೋಗಗಳನ್ನು ಹೇಗೆ ತಡೆಗಟ್ಟಬಹುದು ಎನ್ನುವುದರ ಕುರಿತು ಮಾಹಿತಿಗಳಿಲ್ಲಿವೆ...

ಮಧುಮೇಹ ಮೂತ್ರಪಿಂಡಗಳಿಗೆ ಹೇಗೆ ಹಾನಿಯನ್ನುಂಟು ಮಾಡುತ್ತದೆ?

ನೀವು ಸುದೀರ್ಘ ಕಾಲದಿಂದ ಮಧುಮೇಹದಿಂದ ಬಳಲುತ್ತಿದ್ದರೆ ಅಥವಾ ಅದನ್ನು ನಿಯಂತ್ರಿಸಿರದಿದ್ದರೆ ಅದು ಸಿಕೆಡಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಕ್ತದಲ್ಲಿನ ಅತಿಯಾದ ಗ್ಲುಕೋಸ್ ಮಟ್ಟವು ಮೂತ್ರಪಿಂಡಗಳಲ್ಲಿ ರಕ್ತನಾಳಗಳನ್ನು ದಪ್ಪವಾಗಿಸುತ್ತದೆ. ಅದು ಮೂತ್ರಪಿಂಡಗಳ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಫಿಲ್ಟರ್ ಅಥವಾ ಶೋಧಕಗಳಾದ ‘ಗ್ಲೊಮೆರುಲಸ್’ಗಳ ಊತವನ್ನು ಸಹ ಉಂಟು ಮಾಡುತ್ತದೆ ಮತ್ತು ತನ್ಮೂಲಕ ಮೂತ್ರಪಿಂಡಗಳ ಸಹಜ ಕಾರ್ಯ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಆರೋಗ್ಯವಂತ ಮೂತ್ರಪಿಂಡಗಳು ಹೆಚ್ಚುವರಿ ಪ್ರೋಟಿನ್‌ಗಳನ್ನು ಫಿಲ್ಟರ್‌ಗಳ ಮೂಲಕ ಹಾದುಹೋಗಲು ಅವಕಾಶ ನೀಡುವುದಿಲ್ಲ. ಆದರೆ ಸೋಸುವಿಕೆ ಪ್ರಕ್ರಿಯೆಯಲ್ಲಿ ಅಡಚಣೆಯಾದಾಗ ಒಂದು ವಿಧದ ಪ್ರೋಟಿನ್ ಆಗಿರುವ ‘ಮೈಕ್ರೋಅಲ್ಬುಮಿನ್’ ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತದೆ. ಇದು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಸಿಕೆಡಿ ಮತ್ತು ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗುತ್ತದೆ.

ರಕ್ತದಲ್ಲಿ ಗ್ಲುಕೋಸ್ ಮಟ್ಟವು ನಿರಂತರವಾಗಿ ಅಧಿಕವಾಗಿದ್ದರೆ,ಹೆಚ್ಚಿನ ರಕ್ತದೊತ್ತಡವಿದ್ದರೆ,ಮೂತ್ರಪಿಂಡ ಕಾಯಿಲೆ/ಅಧಿಕ ರಕ್ತದೊತ್ತಡದ ಕುಟುಂಬದ ಇತಿಹಾಸವಿದ್ದರೆ, ಬೊಜ್ಜುದೇಹವನ್ನು ಹೊಂದಿದ್ದರೆ ಮತ್ತು ಧೂಮ್ರಪಾನದ ಚಟವಿದ್ದರೆ ವ್ಯಕ್ತಿಯು ಸಿಕೆಡಿಗೆ ಗುರಿಯಾಗುವ ಅಪಾಯ ಹೆಚ್ಚಾಗಿರುತ್ತದೆ.

ಸಿಕೆಡಿಯ ಲಕ್ಷಣಗಳು

 ಸಾಮಾನ್ಯವಾಗಿ ಸಿಕೆಡಿಯು ಮುನ್ಸೂಚನೆಯ ಲಕ್ಷಣಗಳನ್ನು ತೋರಿಸುವುದಿಲ್ಲ. ಮೂತ್ರಪಿಂಡಗಳ ಕಾರ್ಯ ನಿರ್ವಹಣೆ ಹದಗೆಡಲು ಆರಂಭಗೊಂಡಾಗಲಷ್ಟೇ ಲಕ್ಷಣಗಳು ಕಂಡುಬರುತ್ತವೆ ಮತ್ತು ಮಧುಮೇಹಿಗಳಲ್ಲಿ ಈ ಲಕ್ಷಣಗಳು ತಡವಾಗಿ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಸಿಕೆಡಿ ಪ್ರಕರಣಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವಾಗ ಮೂತ್ರಪಿಂಡಗಳ ಕಾರ್ಯ ನಿರ್ವಹಣೆಯು ಶೇ.70ರಷ್ಟು ಹದಗೆಟ್ಟಿರುತ್ತದೆ.

ಊದಿಕೊಂಡ ಕೈಕಾಲುಗಳು ಮತ್ತು ಮುಖ,ಹಸಿವು ಕ್ಷೀಣಗೊಳ್ಳುವುದು ಮತ್ತು ನಿಶ್ಶಕ್ತಿ,ತುರಿಕೆ ಮತ್ತು ಒಣ ಚರ್ಮ,ನಿದ್ರಾಹೀನತೆ,ಸ್ನಾಯು ಸೆಳೆತ,ತಲೆಸುತ್ತುವಿಕೆ ಇವು ಸಿಕೆಡಿಯ ಕೆಲವು ಸಾಮಾನ್ಯ ಲಕ್ಷಣಗಳಾಗಿವೆ.

ಸಿಕೆಡಿ ರೋಗನಿರ್ಣಯ

ಮೂತ್ರದಲ್ಲಿ ಮೈಕ್ರೋಅಲ್ಬುಮಿನ್ ತಪಾಸಣೆಯನ್ನು ನಿಯಮಿತವಾಗಿ ಮಾಡಿಸುವುದು ದೀರ್ಘಕಾಲೀನ ಮೂತ್ರಪಿಂಡ ರೋಗಗಳನ್ನು ಪತ್ತೆ ಹಚ್ಚಲು ಅತ್ಯುತ್ತಮ ಮಾರ್ಗಗಳಲ್ಲೊಂದಾಗಿದೆ. ಮೈಕ್ರೋಅಲ್ಬುಮಿನ್ ಮಧುಮೇಹದಿಂದ ಮೂತ್ರಪಿಂಡಗಳಿಗೆ ಹಾನಿಯುಂಟಾಗಿದೆ ಎನ್ನುವುದನ್ನು ಸೂಚಿಸುವ ಮೊದಲ ಸಂಕೇತಗಳಲ್ಲಿ ಒಂದಾಗಿದೆ ಮತ್ತು ಮಧುಮೇಹದ ಸಮಸ್ಯೆಗಳನ್ನು ತಡೆಯಲು ನೆರವಾಗಬಲ್ಲುದು.

ಹೀಗಾಗಿ ನೀವು ಎರಡು ವರ್ಷಗಳಿಗೂ ಅಧಿಕ ಸಮಯದಿಂದ ಮಧುಮೇಹದಿಂದ ಬಳಲುತ್ತಿದ್ದರೆ ವರ್ಷಕ್ಕೊಮ್ಮೆ ಅಥವಾ ನಿಮ್ಮ ವೈದ್ಯರು ಸೂಚಿಸಿರುವಂತೆ ಮೈಕ್ರೋಅಲ್ಬುಮಿನ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ನೀವು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಔಷಧಿಗಳನ್ನು ಸೇವಿಸುತ್ತಿದ್ದರೂ,ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೂ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.

ಸಿಕೆಡಿಯನ್ನು ತಡೆಯುವುದು ಹೇಗೆ?

ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುವುದರಿಂದ ಮತ್ತು ಸೂಕ್ತ ಆಹಾರ,ಔಷಧಿಗಳು ಮತ್ತು ವ್ಯಾಯಾಮದೊಂದಿಗೆ ಮಧುಮೇಹ ಸಂಬಂಧಿತ ಮೂತ್ರಪಿಂಡ ಕಾಯಿಲೆಗಳನ್ನು ತಡೆಗಟ್ಟಬಹುದು. ನಿಮ್ಮ ವಯಸ್ಸು 40 ವರ್ಷಗಳನ್ನು ದಾಟಿದ್ದರೆ ಪ್ರತಿ ವರ್ಷ ಅಥವಾ ನಿಮ್ಮ ವೈದ್ಯರು ಸೂಚಿಸಿದಂತೆ ರಕ್ತದಲ್ಲಿಯ ಗ್ಲುಕೋಸ್,ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ತಪಾಸಣೆ ಮಾಡಿಸಿಕೊಳ್ಳಬೇಕು.

ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ನಿಮ್ಮ ರಕ್ತದೊತ್ತಡವು 130/80 ಎಂಜಿ ಎಚ್‌ಜಿ ಮಿತಿಯೊಳಗಿರಬೇಕು.

ನೀವು ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಅಥವಾ ಎರಡನ್ನೂ ಹೊಂದಿದ್ದರೆ ಮೂತ್ರಪಿಂಡಗಳಿಗೆ ಹಾನಿಯನ್ನು ಮೊದಲೇ ತಿಳಿದುಕೊಳ್ಳಲು ಪ್ರತಿ ವರ್ಷ ಮೈಕ್ರೋಅಲ್ಬುಮಿನ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ.

ನಿಮಗೆ ಮೂತ್ರಪಿಂಡದ ಕಾಯಿಲೆಯಿರುವುದು ಪತ್ತೆಯಾದರೆ ಎಲ್ಲ ಅಪಾಯದ ಅಂಶಗಳು ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಿ ಮತ್ತು ಮೂತ್ರಪಿಂಡದ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸಲು ನಿಮ್ಮ ವೈದ್ಯರು ಸೂಚಿಸಿರುವ ಔಷಧಿಗಳನ್ನು ನಿಯಮಿತವಾಗಿ ಸೇವಿಸಿ.

ಮೂತ್ರಪಿಂಡ ಕಾಯಿಲೆಯ ಚಿಕಿತ್ಸೆಗಾಗಿ ಔಷಧಿಗಳನ್ನು ಸೇವಿಸುತ್ತಿದ್ದರೆ ನಿಮ್ಮ ಆಹಾರದಲ್ಲಿ ಪ್ರೋಟಿನ್‌ಗಳು,ಕೊಬ್ಬು ಮತ್ತು ಉಪ್ಪು ಕಡಿಮೆ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News