ಮೈತ್ರಿ ಧಿಕ್ಕರಿಸಲು ಬಿಜೆಪಿ ಸಂಕಲ್ಪ: ಅರವಿಂದ ಲಿಂಬಾವಳಿ
ಬೆಂಗಳೂರು, ಜೂ.28: ಜನಾದೇಶಕ್ಕೆ ವಿರುದ್ಧವಾಗಿ ರಚನೆಯಾಗಿರುವ ಜೆಡಿಎಸ್-ಕಾಂಗ್ರೆಸ್‌ನ ಅಪವಿತ್ರ ಮೈತ್ರಿ ಧಿಕ್ಕರಿಸಲು ಬಿಜೆಪಿ ಸಂಕಲ್ಪತೊಟ್ಟಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಬಿಟ್ಟು, ಕಾಳಜಿಯಿಂದ ಆಡಳಿತ ಆರಂಭಿಸದಿದ್ದರೆ ಹೋರಾಟ ನಡೆಸಲಾಗುವುದು. ರಾಜ್ಯ ಸರಕಾರ ಇನ್ನೂ ಟೇಕ್‌ಆಫ್ ಆಗಿಲ್ಲ. ರೈತರ, ನೇಕಾರರ, ಮೀನಗಾರರ, ಮಹಿಳಾ ಸ್ವಸಹಾಯ ಸಂಘದ ಸಾಲಮನ್ನಾ ಜೊತೆ ರೈತರ ಖಾಸಗಿ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಆದರೆ ಈಗ ಬರೀ ಬೆಳೆ ಸಾಲಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಸಮ್ಮಿಶ್ರ ಸರಕಾರದ ನಡೆಯನ್ನು ಟೀಕಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ಬಜೆಟ್‌ಗೆ ವಿರೋಧಿಸಿದ್ದಾರೆ. ಬಿಜೆಪಿ ಕೂಡ ಬೆಂಬಲ ನೀಡಿಲ್ಲ. ಕೇವಲ 37 ಶಾಸಕರಿಗೋಸ್ಕರ ಬಜೆಟ್ ಮಂಡಿಸುವ ದುಸ್ಸಾಹಸಕ್ಕೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಸಮ್ಮಿಶ್ರ ಸರಕಾರ ಬೀಳಿಸುವ ಕೆಲಸಕ್ಕೆ ಬಿಜೆಪಿ ಮುಂದಾಗುವುದಿಲ್ಲ ಎಂದು ತಿಳಿಸಿದರು.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಆರ್ಥಿಕ ಸ್ಥಿತಿ ಸುಧಾರಿಸುವ ಸಲುವಾಗಿ ಎಲ್ಲ ಹಂತದ ಕ್ರಮಗಳನ್ನು ಕೈಗೊಂಡಿದ್ದಾರೆ. ಜಿಎಸ್‌ಟಿ ಜಾರಿಗೊಳಿಸಿ ಜನರ ಆರ್ಥಿಕ ಮಟ್ಟ ಹೆಚ್ಚು ಮಾಡಲು ಅನೇಕ ಸವಲತ್ತುಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಗಡಿ ರಕ್ಷಣೆ ಮಾಡುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆ. ರಸ್ತೆಗಳ ಅಭಿವೃದ್ಧಿ ಮಾಡಿದ್ದಾರೆ. ಹಿಂದಿನ ಸರಕಾರದ ಅವಧಿಯಲ್ಲಿನ ದಿನಕ್ಕೆ 12ಕಿಮೀ ರಸ್ತೆ ನಿರ್ಮಾಣವಾಗುತ್ತಿತ್ತು. ಆದರೆ ಈಗ 27 ಕಿ.ಮೀ ಆಗುತ್ತಿದೆ. 1.69 ಲಕ್ಷದಷ್ಟು ಗ್ರಾಮೀಣ ರಸ್ತೆಗಳು ನಿರ್ಮಾಣವಾಗಿದ್ದು, ಕೇಂದ್ರದ ಸಾಧನೆ ಅಭಿನಂದನೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು ಎಂದರು.
ಬಿಜೆಪಿ ಸೇರ್ಪಡೆ: ಚುನಾವಣಾ ಸಮದಯಲ್ಲಿ ಬೇರೆ ಪಕ್ಷಗಳ ಸಾಕಷ್ಟು ನಾಯಕರು ಬಿಜೆಪಿ ಸೇರಲು ಬಂದಿದ್ದರು. ಈಗಲೂ ಮೋದಿ ಕೆಲಸ ಮೆಚ್ಚಿ ಮಾಜಿ ಎಂಪಿ, ಮಾಜಿ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಜೊತೆಗೆ, ಹಾಲಿ ಸದಸ್ಯರು ಬರುವುದನ್ನು ಅಲ್ಲಗಳೆಯುವಂತಿಲ್ಲ ಎಂದು ಲಿಂಬಾವಳಿ ಹೇಳಿದರು.
37 ಶಾಸಕರಿಗೋಸ್ಕರ ಬಜೆಟ್ ಮಂಡಿಸುವ ದುಸ್ಸಾಹಸಕ್ಕೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಹೀಗಾಗಿ ಇದು ಮೈನಾರಿಟಿ ಬಜೆಟ್. ಅಲ್ಲದೆ, ಹಿಂದೂಗಳ ಮಾರಣ ಹೋಮ ಮಾಡಿದ್ದ ಕನ್ನಡ ವಿರೋಧಿ ಟಿಪ್ಪುಹೆಸರನ್ನು ಹಜ್ ಭವನಕ್ಕಿಡುವ ಸಚಿವರ ಹೇಳಿಕೆಗೆ ಬಿಜೆಪಿ ವಿರೋಧಿಸುತ್ತದೆ.
-ಅರವಿಂದ ಲಿಂಬಾವಳಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ
ನೇಮಕ: ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಉಡುಪಿಯ ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಸಚೇತಕರಾಗಿ ಬೆಳಗಾವಿಯ ಮಹಾಂತೇಶ್ ಕವಟಗಿಮಠ್ ಅವರನ್ನು ನೇಮಿಸಲಾಗಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.