×
Ad

ಟೆಕ್ಕಿ ಅಜಿತಾಬ್ ಅಪಹರಣ ಪ್ರಕರಣ : ತನಿಖೆ ಸಿಬಿಐಗೆ ಒಪ್ಪಿಸಲು ಕುಟುಂಬಸ್ಥರ ಆಗ್ರಹ

Update: 2018-06-29 23:29 IST

ಬೆಂಗಳೂರು, ಜೂ.29: ಟೆಕ್ಕಿ ಕುಮಾರ್ ಅಜಿತಾಬ್ ಅಪಹರಣ ಪ್ರಕರಣ ಸಮಗ್ರ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಬೇಕೆಂದು ಅಜಿತಾಬ್ ಕುಟುಂಬದ ಸದಸ್ಯರು ಇಂದಿಲ್ಲಿ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಜಿತಾಬ್ ಸಹೋದರಿ ಪ್ರಗ್ಯಾ ಸಿನ್ಹಾ, 2017ರ ಡಿ.18ರ ಸಂಜೆ ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟ ಮಾಡಲು ಹೋಗಿ ವೈಟ್‌ಫೀಲ್ಡ್‌ನಿಂದ ಕಾಣೆಯಾಗಿದ್ದಾರೆ. ಡಿ. 20ರಂದು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆ ಎಂಬ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ, ಡಿ.22ರಂದು ಅಪಹರಣದ ಬಗ್ಗೆ ಮಾಹಿತಿ ತಿಳಿದು ಸಹ ಡಿ.29ರಂದು ಅಪಹರಣವಾಗಿದೆ ಎಂದು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ನಮ್ಮ ತಂದೆ ಅಶೋಕ್‌ಕುಮಾರ್ ಸಿನ್ಹಾ ಇಲ್ಲಿಯವರೆಗೂ ಡಿಸಿಪಿ, ಐಜಿಪಿ, ಡಿಜಿಪಿ ಸೇರಿದಂತೆ ಎಲ್ಲ ಸಚಿವರು, ಇಲಾಖಾ ಅಧಿಕಾರಿಗಳ ಮನೆ ಬಾಗಿಲಿಗೆ ಹೋದರೂ, ಇದುವರೆಗೂ ಯಾವುದೇ ತನಿಖೆ ಕೈಗೊಂಡಿಲ್ಲ. ಸಹೋದರನ ಬಗ್ಗೆ ಯಾವುದೇ ಮಾಹಿತಿ ದೊರೆಯದೆ ಕುಟುಂಬದ ಸದಸ್ಯರು ಮಾನಸಿಕವಾಗಿ ಜರ್ಜರಿತರಾಗಿದ್ದೇವೆ. ಹಾಗಾಗಿ ಪ್ರಕರಣದ ಪಕ್ಷಪಾತ, ತ್ವರಿತ ತನಿಖೆಗಾಗಿ ಸಿಬಿಐಗೆ ವಹಿಸಬೇಕು ಎಂದು ಕಣ್ಣೀರಿಟ್ಟರು.

ಜೂ.1ರಂದು ಹೈಕೋರ್ಟ್ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಸರಿಯಾದ ತನಿಖೆ ನಡೆಸುತ್ತಿಲ್ಲ. ಸಾಮಾನ್ಯ ಪ್ರಕರಣದಲ್ಲಿ ತನಿಖೆ ನಡೆಸುವಂತೆ ನಡೆಸಲಾಗುತ್ತಿದೆ. ವೈಟ್‌ಫೀಲ್ಡ್ ಪೊಲೀಸರು ತನಿಖೆ ಮಾಡಿದ್ದನ್ನು ಹೊರತುಪಡಿಸಿ ಕಿಂಚಿತ್ತೂ ಹೆಚ್ಚಿನ ಮಾಹಿತಿ ಸಂಗ್ರಹಿಸಿಲ್ಲ ಎಂದು ದೂರಿದರು.

ಕಾಣೆಯಾದ ಅಥವಾ ಅಪಹರಣವಾದ ವ್ಯಕ್ತಿಗಳ ಮಾಹಿತಿಯನ್ನು ಸರಕಾರಿ ವೆಬ್‌ಸೈಟ್ ಆದ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋದಲ್ಲಿ ಲಗತ್ತಿಸಬೇಕು. ಆದರೆ, ಇದುವರೆಗೂ ಅಜಿತಾಬ್‌ನ ಅಪಹರಣದ ಪ್ರಕರಣ ವಿಚಾರವಾಗಿ ಅಧಿಕಾರಿಗಳು ಇಲಾಖೆಯ ವೆಬ್‌ಸೈಟ್, ಫೇಸ್‌ಬುಕ್, ಟ್ವಿಟ್ಟರ್ ಹಾಗೂ ಅಂತರ್ಜಾಲ ಮೂಲಗಳಲ್ಲಿ ಮಾಹಿತಿ ಕೊಟ್ಟಿಲ್ಲ. ವಾಹನ ಕಳುವಿನ ಬಗ್ಗೆಯೂ ಮಿನಿಸ್ಟರಿ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಅಂಡ್ ಹೈವೇಸ್ ವೆಬ್‌ಸೈಟ್‌ನಲ್ಲಿ  ಮಾಹಿತಿ ಲಗತ್ತಿಸಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಮನೆ ಮುಂದೆ ಧರಣಿ
ಜು.2ರಂದು ಕೋರ್ಟ್‌ನಲ್ಲಿ ವಿಚಾರಣೆ ಇದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೂರಕ ಮಾಹಿತಿಗಳನ್ನು ಕೋರ್ಟಿಗೆ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನೆ ಮುಂದೆ ಕುಟುಂಬದ ಸದಸ್ಯರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಪ್ರಗ್ಯಾ ಸಿನ್ಹಾ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News