ವರ್ಗಾವಣೆ ಕೇಳಿದ ಶಿಕ್ಷಕಿಗೆ ಬಂಧನಾದೇಶ ನೀಡಿದ ಸಿಎಂ

Update: 2018-06-30 12:27 GMT
ತ್ರಿವೇಂದ್ರ ರಾವತ್ 

ಹೊಸದಿಲ್ಲಿ,ಜೂ.30 : ಪತಿಯ ಸಾವಿನ ನಂತರ ತಮ್ಮ ಮಕ್ಕಳೊಂದಿಗೆ ಇರಲು ಅನುಕೂಲಕರವಾಗುತ್ತದೆಯೆಂದು ಹಳ್ಳಿಯೊಂದರಿಂದ 25 ವರ್ಷಗಳ ನಂತರ ಡೆಹ್ರಾಡೂನ್ ಗೆ ವರ್ಗಾವಣೆ ಕೋರಿದ ಶಿಕ್ಷಕಿಯ ಬೇಡಿಕೆಯನ್ನು ತಿರಸ್ಕರಿಸಿದ್ದೇ ಅಲ್ಲದೆ ಆಕೆ ತನ್ನೊಂದಿಗೆ ವಾಗ್ವಾದಕ್ಕಿಳಿದರೆಂದು ಆಕೆಯ ವಜಾ ಮತ್ತು ಬಂಧನಾದೇಶ  ನೀಡಿದ ಉತ್ತರಾಖಾಂಡ ಮುಖ್ಯಮಂತ್ರಿ ತ್ರಿವೇಂದ್ರ ರಾವತ್ ಸಾಕಷ್ಟು ಸುದ್ದಿಯಾಗಿದ್ದಾರೆ. ಆದರೆ ರಾವತ್ ಅವರ ಶಿಕ್ಷಕಿ ಪತ್ನಿ ಗ್ರಾಮೀಣ ಪ್ರದೇಶವೊಂದರಿಂದ ಕೇವಲ ನಾಲ್ಕೇ ವರ್ಷಗಳಲ್ಲಿ ಡೆಹ್ರಾಡೂನ್ ಗೆ ವರ್ಗಾವಣೆ ಪಡೆದುಕೊಂಡಿದ್ದರಲ್ಲದೆ  22 ವರ್ಷ ಯಾವುದೇ ವರ್ಗಾವಣೆಯಿಲ್ಲದೆ ಅಲ್ಲಿಯೇ ಸೇವೆ ಸಲ್ಲಿಸಿದ್ದಾರೆ. ಈ ವಿವರ ಆರ್‍ಟಿಐ ಅರ್ಜಿಯೊಂದಕ್ಕೆ ದೊರಕಿದ ಉತ್ತರದಿಂದ ತಿಳಿದು ಬಂದಿದೆ.

ಮುಖ್ಯಮಂತ್ರಿಯ ಪತ್ನಿ ಸುನೀತಾ ರಾವತ್ ಪೌಡಿ ಗಧ್ವಾಲ್ ಎಂಬಲ್ಲಿನ ಪ್ರಾಥಮಿಕ ಶಾಲೆಯಲ್ಲಿ 1992ರಲ್ಲಿ ಸೇವೆ ಆರಂಭಿಸಿದ್ದರು.  199ರಲ್ಲಿ ಅವರನ್ನು ಡೆಹ್ರಾಡೂನ್ ಗೆ ವರ್ಗಾಯಿಸಲಾಗಿದ್ದು ಅಂದಿನಿಂದ ಅವರು  ಅಲ್ಲೇ ಸೇವೆ ಸಲ್ಲಿಸುತ್ತಿದ್ದು 2008ರಲ್ಲಿ ಭಡ್ತಿ ಕೂಡ ಪಡೆದಿದ್ದಾರೆ.

ಆದರೆ ಮುಖ್ಯಮಂತ್ರಿಯ ಜತೆ ಜನತಾ ದರ್ಬಾರ್ ನಲ್ಲಿ ವಾಗ್ವಾದಕ್ಕಿಳಿದು ವಜಾಗೊಂಡು ಬಂಧನಕ್ಕೊಳಗಾದ 57 ವರ್ಷದ ಶಿಕ್ಷಕಿ ಉತ್ತರಾ ಬಹುಗುಣ 25 ವರ್ಷಗಳಿಂದ ಉತ್ತರಕಾಶಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ತಮ್ಮ ಪತಿಯ ಮರಣಾನಂತರ ಮಕ್ಕಳ ಜತೆಗಿರಬೇಕೆಂದು ಡೆಹ್ರಾಡೂನ್ ಗೆ ವರ್ಗ ಕೋರಿದ್ದರು.

"ಆದರೆ ಆಕೆಯ ವರ್ಗಾವಣೆ ಸಾಧ್ಯವಿಲ್ಲ. ಆಕೆಗಿಂತಲೂ  ಹೆಚ್ಚು  ಸಮಯ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿರುವ 58ಕ್ಕೂ ಅಧಿಕ ಮಂದಿಯಿದ್ದಾರೆ. ಆಕೆ ಈ ಸರತಿಯಲ್ಲಿ 59ನೇಯವರು,'' ಎಂದು ಶಿಕ್ಷಣ ಇಲಾಖೆಯ ಕಾರ್ಯದರ್ಶಿ  ಭೂಪಿಂದರ್ ಕೌರ್ ಔಲಖ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News