ವಿಶ್ವಕಪ್ ಪಂದ್ಯ ನೋಡಲು ಮರಡೋನಾಗೆ ದಿನವೊಂದಕ್ಕೆ ಸಿಗುವ ಸಂಭಾವನೆ ಎಷ್ಟು ಸಾವಿರ ಪೌಂಡ್ ಗೊತ್ತೇ ?

Update: 2018-06-30 12:47 GMT

ಮಾಸ್ಕೋ,ಜೂ.30 : ಆರ್ಜೆಂಟೀನಾದ ಮಾಜಿ ಫುಟ್ಬಾಲ್ ಆಟಗಾರ ಡೀಗೋ ಮರಡೋನಾ ಅವರು ಫುಟ್ಬಾಲ್ ಪ್ರೇಮಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದವರು. ಆದರೆ  ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್ ಫುಟ್ಬಾಲ್ ಚಾಂಪಿಯನ್‍ಶಿಪ್ ನಡೆಯುವ ಸ್ಥಳದಲ್ಲಿ ಹಾಜರಿರುವ  ಮರಡೋನಾ ತಮ್ಮ ವಿಚಿತ್ರ ಹಾಗೂ ಬಾಲಿಶ ನಡವಳಿಕೆಯಿಂದ ಹಲವರ ಹುಬ್ಬೇರುವಂತೆ ಮಾಡಿದ್ದಾರೆ. ವಿಶ್ವ ಕಪ್ ಪಂದ್ಯಾಟದಲ್ಲಿ ಹಾಜರಿರಲೆಂದೇ ಫಿಫಾ ಅವರಿಗೆ ದೊಡ್ಡ ಮೊತ್ತವನ್ನೂ ನೀಡುತ್ತಿದೆ.

ಅಂತೆಯೇ  ಆರ್ಜೆಂಟೀನ ತಂಡ ಭಾಗವಹಿಸುವ ಪ್ರತಿ ಪಂದ್ಯಾಟದಲ್ಲೂ ಅವರು ನಿಯಮಿತವಾಗಿ ಹಾಜರಾಗುತ್ತಿದ್ದಾರೆ. ಆರ್ಜೆಂಟೀನ ಇರುವ ಗ್ರೂಪ್ ನ ನಿರ್ಣಾಯಕ ಪಂದ್ಯವೊಂದರಲ್ಲಿ ಆರ್ಜೆಂಟೀನಾ ನೈಜಿರಿಯಾವನ್ನು ಸೋಲಿಸಿತ್ತು. ಆದರೆ ಈ ಪಂದ್ಯದ ಮೊದಲು ಹಾಗೂ ಪಂದ್ಯದ ವೇಳೆ ವೈನ್ ಸೇವಿಸಿ ನಂತರ ಆಸ್ಪತ್ರೆಗೆ ದಾಖಲಾಗಿದ್ದನ್ನು ಅವರೇ ಒಪ್ಪಿಕೊಳ್ಳುತ್ತಾರೆ.

ವಿಶ್ವಕಪ್ ಪಂದ್ಯಾಟದ ವೇಳೆ ಕೇವಲ ಹಾಜರಿ ಹಾಕಲೆಂದೇ ಈ 58 ವರ್ಷದ ಫುಟ್ಬಾಲಿಗನಿಗೆ ಫಿಫಾ ಬರೋಬ್ಬರಿ ಪ್ರತಿ ದಿನವೊಂದಕ್ಕೆ 10,000 ಪೌಂಡ್ ನೀಡುತ್ತಿದೆ. ಯುವಜನತೆಯನ್ನು ಫುಟ್ಬಾಲಿನತ್ತ ಆಕರ್ಷಿಸುವುದು ಫಿಫಾ ಅಧ್ಯಕ್ಷ ಜಿಯನ್ನಿ ಇನ್ಫೇಂಟಿನೋ ಅವರ ಉದ್ದೇಶ ಒಪ್ಪತಕ್ಕಂತಹುದಾಗಿದ್ದರೂ ಯಾವತ್ತೂ ವಿವಾದವನ್ನು ಮೈಗೆಳೆದುಕೊಳ್ಳುವಲ್ಲಿ ಸಿದ್ಧಹಸ್ತರಾಗಿರುವ ಮರಡೋನಾ ಐಸ್ ಲ್ಯಾಂಡ್ ಎದುರು ಆರ್ಜೆಂಟಿನಾದ ಮೊದಲ ಟೈ ಸಂದರ್ಭ ಸಿಗಾರ್ ಎಳೆದಿದ್ದರೆ,  ಅಂತಿಮ ಗ್ರೂಪ್ ಪಂದ್ಯಾಟದ  ಕೊನೆಯ ವೇಳೆ ಅಶ್ಲೀಲ ಸಂಜ್ಞೆಗಳನ್ನೂ ಮಾಡಿದ್ದರು.

ವಿಶ್ವಕಪ್ ಪಂದ್ಯಾವಳಿಯಲ್ಲಿ ಹಾಜರಿರಲು  ಇತರ ಫುಟ್ಬಾಲ್ ದಂತಕಥೆಗಳಾದ ರೊನಾಲ್ಡೋ, ಕಾರ್ಲೋಸ್ ಪುಯೊಲ್, ಕ್ಸವಿ ಹಾಗೂ ಸಾಮುವೆಲ್ ಎಟೋ ಅವರಿಗೆ ನೀಡುವ ಸಂಭಾವನೆಗಿಂತಲೂ ಅಧಿಕ ಸಂಭಾವನೆ ಡೀಗೋ ಮರಡೋನಾ ಅವರಿಗೆ ನೀಡಲಾಗುತ್ತಿರುವುದು ಅಚ್ಚರಿಯ ವಿಚಾರ. ಆದರೆ ಅವರಿಗೆ ನೀಡಲಾಗುವ ಸಂಭಾವನೆಯ ಮೊತ್ತದಲ್ಲಿ ಅವರ ಪ್ರಯಾಣ, ವಾಸ್ತವ್ಯ ಮತ್ತಿತರ ವೆಚ್ಚಗಳು ಸೇರಿಲ್ಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News