×
Ad

ಸ್ನಾತಕೋತ್ತರ ಪದವಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ

Update: 2018-06-30 21:45 IST

ಬೆಂಗಳೂರು, ಜೂ.30: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೆಂಗಳೂರು ವಿಶ್ವವಿದ್ಯಾಲಯ ಅವಕಾಶ ಕಲ್ಪಿಸಿದೆ. ಇದರಿಂದಾಗಿ ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸಲು ಪರದಾಡುವುದು ತಪ್ಪಿದಂತಾಗಿದೆ.

ಪಾರದರ್ಶಕತೆಯನ್ನು ಕಾಪಾಡುವ ಸಲುವಾಗಿ ಹಾಗೂ ಅರ್ಜಿ ಸಲ್ಲಿಕೆ ವೇಳೆ ಎದುರಾಗುತ್ತಿದ್ದ ಸಮಸ್ಯೆಗಳನ್ನು ದೂರ ಮಾಡುವ ಸಲುವಾಗಿ ವಿಶ್ವವಿದ್ಯಾಲಯ ವಿವಿಧ ಕ್ರಮಗಳನ್ನು ಕೈಗೊಂಡಿದ್ದು, ಅರ್ಜಿ ಸಲ್ಲಿಸುವುದರ ಜೊತೆಗೆ ವಿದ್ಯಾರ್ಥಿಗಳ ಹಣ ಪಾವತಿ ಹಾಗೂ ಆಯ್ಕೆ ಪಟ್ಟಿಗಳೂ ಆನ್‌ಲೈನ್‌ನಲ್ಲಿಯೇ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಕಾನೂನು ಪದವಿಗಳಿಗೆ ಆನ್‌ಲೈನ್ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು. ಈ ವೇಳೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸ್ನಾತಕೋತ್ತರ ಪದವಿಗಳಿಗೂ ಆನ್‌ಲೈನ್ ಪ್ರಕ್ರಿಯೆ ಅಳವಡಿಸಿಕೊಳ್ಳಲು ವಿವಿ ಮುಂದಾಗಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಬೆಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ಆನ್‌ಲೈನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ತಾಂತ್ರಿಕ ದೋಷಗಳು ಎದುರಾಗಾದ ಆಫ್‌ಲೈನ್ ಆಯ್ಕೆಯನ್ನೂ ಮುಂದುವರಿಸಲಾಗುತ್ತದೆ. ಆನ್‌ಲೈನ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆಯೇ ಈ ರೀತಿಯ ಪ್ರಯತ್ನಗಳನ್ನು ಮಾಡಲಾಗಿತ್ತು. ಕಾಲೇಜುಗಳ ಸಂಖ್ಯೆ ಹೆಚ್ಚಾಗಿದ್ದರಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಈ ಬಾರಿ ನಾವು ಸಂಪೂರ್ಣವಾಗಿ ಎಲ್ಲಾ ರೀತಿಯಲ್ಲಿಯೂ ಸಿದ್ಧತೆಗಳನ್ನು ನಡೆಸಲಾಗಿದೆ. ಸ್ನಾತಕೋತ್ತರ ಕಾನೂನು ಪದವಿ ಪ್ರವೇಶದ ವೇಳೆ ಆನ್‌ಲೈನ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದವು. ವಿದ್ಯಾರ್ಥಿಗಳ ಅಭಿಪ್ರಾಯ ಪಡೆದ ಬಳಿಕ ನಾವು ಈ ನಿರ್ಧಾರ ಕೈಗೊಂಡಿದ್ದೇವೆಂದು ರಿಜಿಸ್ಟ್ರಾರ್ ಪ್ರೊ.ಶಿವರಾಜು ಹೇಳಿದ್ದಾರೆ.

ವೆಬ್‌ಸೈಟ್‌ನಲ್ಲಿ ಲಭ್ಯ ಮೆರಿಟ್ ಪಟ್ಟಿ: ಆನ್‌ಲೈನ್ ಮೂಲಕ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮೆರಿಟ್ ಪಟ್ಟಿ ಆನ್‌ಲೈನ್‌ನಲ್ಲಿಯೇ ಲಭ್ಯವಾಗಲಿದೆ. ಆನಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಅದನ್ನು ಇಲಾಖೆ ಪರಿಶೀಲನೆ ನಡೆಸಿ, ಮೆರಿಟ್ ಪಟ್ಟಿ ಬಿಡುಗಡೆ ಮಾಡಲು ಸಹಾಯವಾಗುತ್ತದೆ. ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಬಳಿಕ ವಿವಿ ಮೆರಿಟ್ ಪಟ್ಟಿಯನ್ನು ತನ್ನ ವೆಬ್ ಸೈಟ್‌ನಲ್ಲಿಯೇ ಪ್ರಕಟಿಸಲಿದೆ. ಬಳಿಕ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿಯೇ ವಿಶ್ವವಿದ್ಯಾಲಯ ಕೌನ್ಸಿಲಿಂಗ್ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News