ಶಿಕ್ಷಣದಲ್ಲಿ 'ತಜ್ಞ ತಿಳುವಳಿ'ಕೆಗಳ ಮಹತ್ವ

Update: 2018-07-01 12:47 GMT

ಸ್ವಾತಂತ್ರ್ಯಾ ನಂತರದ ಸಶಕ್ತ ಶಿಕ್ಷಣ ನೀತಿಗಳು ಎರಡು. ಮೊದಲಿನದು ರಾಜೀವ್ ಗಾಂಧಿ ಅವರ ಸರಕಾರ ಜಾರಿಗೆ ತಂದ 1986ರ ರಾಷ್ಟ್ರೀಯ ಶಿಕ್ಷಣ ನೀತಿ. ಎರಡನೆ ಯದು ಈಗ ಜಾರಿಯಲ್ಲಿರುವ ವಾಜಪೇಯಿ ಅವರ ಸರಕಾರ ಜಾರಿಗೊಳಿಸಿದ ಸರ್ವಶಿಕ್ಷಣ ಅಭಿಯಾನ. ಇವೆರಡರಲ್ಲಿ ಶಿಕ್ಷಣಕ್ಕೆ ಹೆಚ್ಚು ಭೌತಿಕ ಮೂಲ ಸೌಕರ್ಯಗಳನ್ನು ಒದಗಿಸಿದ್ದು ಸರ್ವಶಿಕ್ಷಣ ಅಭಿಯಾನವೆ. ಆದರೆ ಬೌದ್ಧಿಕವಾಗಿ ಹೆಚ್ಚು ಸಶಕ್ತವಾಗಿರುವುದು ರಾಷ್ಟ್ರೀಯ ಶಿಕ್ಷಣ ನೀತಿ.

ಶಿಕ್ಷಣದಲ್ಲಿ ತಜ್ಞ ತಿಳುವಳಿಕೆಗಳ ಅನುಷ್ಠಾನದ ಕುರಿತ ಚರ್ಚೆ ಒಳ್ಳೆಯದು. ಆದರೆ ಅದು ಕಡ್ಡಾಯ ಆಗಬಾರದು. ಇದೂ ಕೂಡ ಒಂದು ಸಾಧ್ಯತೆ; ಪ್ರಯತ್ನಿಸಿ ನೋಡಿ ಎನ್ನುವಂತಿರಬೇಕೇ ಹೊರತು ಇದನ್ನೇ ಮಾಡಿ; ಇದನ್ನು ಮಾಡದಿದ್ದರೆ ಅವನು ಅಯೋಗ್ಯ ಎನ್ನುವಂತಾಗಬಾರದು. ಕಡೆಗೂ ಕಡ್ಡಾಯವಾಗಬೇಕಾದ್ದು ಕಾನೂನೇ ಹೊರತು ಸಂಶೋಧನೆಗಳಲ್ಲ.

ಶೈಕ್ಷಣಿಕ ಕಾನೂನುಗಳು ಭಾರತದ ಸಂಕೀರ್ಣ ಸಮಾಜದಲ್ಲಿ ಆದರ್ಶವನ್ನು ಗೆಲ್ಲಿಸಿಕೊಂಡು ಬರುವ ರೂಪದಲ್ಲಿ ಇರಬೇಕಾಗುತ್ತದೆ. ಬಹಳ ಮಂದಿ ಮೆಕಾಲೆ ವರದಿಯ ಬಗ್ಗೆ ಮಾತನಾಡುತ್ತಾರೆ. ಆದರೆ ಮೆಕಾಲೆ ವರದಿ ಆಧಾರಿತ ಕಾನೂನಿಗೆ ತನ್ನನ್ನು ತಾನು ಗೆಲ್ಲಿಸಿಕೊಳ್ಳಲು ಹೆಚ್ಚೇನೂ ಆಗಲಿಲ್ಲ. ಮೇಲು ಜಾತಿಗಳ ಮಧ್ಯಮ ವರ್ಗಕ್ಕಷ್ಟೇ ಅದರಿಂದ ಉಪಯೋಗವಾಯಿತು. ವ್ಯಾಪಕವಾಗಿ ತನ್ನನ್ನು ತಾನು ಗೆಲ್ಲಿಸಿಕೊಳ್ಳಲು ಸಾಧ್ಯವಾದದ್ದು 1854ರ ಚಾರ್ಲ್ಸ್ ವುಡ್ ವರದಿಯನ್ನು ಆಧರಿಸಿದ ಶೈಕ್ಷಣಿಕ ಕಾನೂನುಗಳಿಗೆ ಮತ್ತು 1880ರ ಹಂಟರ್ ಆಯೋಗದ ವರದಿ ಆಧರಿಸಿದ ಶಿಕ್ಷಣಕ್ಕೆ. ಏಕೆಂದರೆ ಇವು ದೇಶೀಯ ಭಾಷಾ ಶಿಕ್ಷಣವನ್ನು ಎತ್ತಿ ಹಿಡಿದವು.

 ಸ್ವಾತಂತ್ರಾ ನಂತರದ ಸಶಕ್ತ ಶಿಕ್ಷಣ ನೀತಿಗಳು ಎರಡು. ಮೊದಲಿನದು ರಾಜೀವ್ ಗಾಂಧಿ ಅವರ ಸರಕಾರ ಜಾರಿಗೆ ತಂದ 1986ರ ರಾಷ್ಟ್ರೀಯ ಶಿಕ್ಷಣ ನೀತಿ. ಎರಡನೆ ಯದು ಈಗ ಜಾರಿಯಲ್ಲಿರುವ ವಾಜಪೇಯಿ ಅವರ ಸರಕಾರ ಜಾರಿಗೊಳಿಸಿದ ಸರ್ವಶಿಕ್ಷಣ ಅಭಿಯಾನ. ಇವೆರಡರಲ್ಲಿ ಶಿಕ್ಷಣಕ್ಕೆ ಹೆಚ್ಚು ಭೌತಿಕ ಮೂಲ ಸೌಕರ್ಯಗಳನ್ನು ಒದಗಿಸಿದ್ದು ಸರ್ವಶಿಕ್ಷಣ ಅಭಿಯಾನವೆ. ಆದರೆ ಬೌದ್ಧಿಕವಾಗಿ ಹೆಚ್ಚು ಸಶಕ್ತವಾಗಿರುವುದು ರಾಷ್ಟ್ರೀಯ ಶಿಕ್ಷಣ ನೀತಿ. ಇದರಲ್ಲೊಂದು ಸ್ವಾರಸ್ಯವಿದೆ. ಬಿಜೆಪಿ ನೇತೃತ್ವದ ಸರಕಾರ ಗಳು ಬ್ರಿಡ್ಜ್, ಡ್ಯಾಮ್, ರಸ್ತೆ ಮುಂತಾದ ಭೌತಿಕ ಅಗತ್ಯಗಳನ್ನು ಚೆನ್ನಾಗಿ ನಿರ್ವಹಿಸುತ್ತವೆ. ಪ್ರತಿದಿನ ಕಾರ್ಯಕ್ರಮ ನಡೆಯುವ ಒಂದು ಭವನವನ್ನು ಯಾವ ಗುಣ ಮಟ್ಟದಲ್ಲಿ ಬೆಂಗಳೂರಿನಲ್ಲಿ ಕಟ್ಟಲಾಗುತ್ತದೊ ಅದೇ ಗುಣ ಮಟ್ಟದಲ್ಲಿ ಅವರು ಹಳ್ಳಿಯಲ್ಲಿಯೂ ಕಟ್ಟಬಲ್ಲರು. ಕಾಂಗ್ರೆಸ್‌ಮತ್ತು ಕಾಂಗ್ರೆಸ್ ನೇತೃತ್ವದ ಸರಕಾರಗಳು ಗೋಚರವಾಗುವ ರಸ್ತೆ, ಚರಂಡಿ, ಕರೆಂಟ್ ಕಂಬ ಇಂತಹದ್ದರಲ್ಲಿ ಸ್ವಲ್ಪ ಹಿಂದುಳಿ ಯುತ್ತವೆ. ಆದರೆ ಮನುಷ್ಯನ ನಿರ್ವಹಣೆಗೆ ಸಂಬಂಧಿಸಿದ ಕಾನೂನುಗಳನ್ನು ಬಹಳ ಚೆನ್ನಾಗಿ ಮಾಡುತ್ತವೆ. ಮನುಷ್ಯನ ಸಣ್ಣತನಗಳು, ಜನಸಾಮಾನ್ಯರ ಸಣ್ಣ ಪುಟ್ಟ ದುರಾಸೆಗಳು, ಸಣ್ಣ ಸಣ್ಣ ಅಪ್ರಾಮಾಣಿಕತೆಗಳು ಇವೆಲ್ಲದರ ಅರಿವು ಇಟ್ಟುಕೊಂಡ ಕಾನೂನುಗಳಾಗಿ ಅವು ಕೆಲಸ ಮಾಡುತ್ತವೆ. ನಿರ್ಭಯಾ ಪ್ರಕರಣದಲ್ಲಿ ಬಾಲಾಪರಾಧಿ ಬಿಡುಗಡೆಯಾದಾಗ ಬಾಲಾಪರಾಧದ ವಯಸ್ಸನ್ನು ವಾಜಪೇಯಿ ಸರಕಾರ ಏರಿಸಿದ್ದರ ಪರಿಣಾಮ ಏನು, ರಾಜೀವ್ ಗಾಂಧಿ ಯವರ ಸರಕಾರ ನಿರ್ಧರಿಸಿದ್ದ ವಯೋಮಿತಿಯನ್ನೇ ಉಳಿಸಿಕೊಂಡಿ ದ್ದರೆ ಅದರ ಪರಿಣಾಮವೇನು ಎಂದು ಸ್ಪಷ್ಟವಾಗಿ ಗೊತ್ತಾಗಿತ್ತು. ಸರ್ವಶಿಕ್ಷಣ ಅಭಿಯಾನ ಜಾರಿಗೆ ಬಂದ ಹೊಸದರಲ್ಲಿ ಶಿಕ್ಷಕರಿಗೆ ಯಾವ ಸ್ವಾತಂತ್ರವೂ ಇಲ್ಲ ಎನ್ನುವ ರೀತಿಯ ಕಾನೂನುಗಳು ಬಂದವು. ನಂತರ ಮನಮೋಹನ್ ಸಿಂಗ್ ಸರಕಾರ ಜಾರಿಗೊಳಿಸಿದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಆಧರಿಸಿ ಬಂದ ಆದೇಶ, ಒಂದರಿಂದ ಒಂಬತ್ತನೆ ಯ ತರಗತಿಯ ವರೆಗೆ ತಾನು ಮಾಡಿದ ಪಾಠದ ಮೇಲೆ ತಾನೇ ಪ್ರಶ್ನೆ ತೆಗೆದು ಮೌಲ್ಯಮಾಪನ ಮಾಡುವ ಸ್ವಾತಂತ್ರವನ್ನು ಶಿಕ್ಷಕರಿಗೆ ಕೊಟ್ಟಿತು. ಕಾಂಗ್ರೆಸ್ ಮತ್ತು ಕಾಂಗ್ರೆಸ್ ನೇತೃತ್ವದ ಸರಕಾರಗಳ ಶಿಕ್ಷಣ ನೀತಿಗಳಲ್ಲಿ ತಜ್ಞ ತಿಳುವಳಿಕೆಗಳೆಲ್ಲ ಇದ್ದಾಗ್ಯೂ ಲೋಕಲ್ ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳಲು ಒಂದು ಸಣ್ಣ ಸ್ಪೇಸ್ ಅನ್ನು ಬಿಡಲಾಗಿರುತ್ತದೆ. ಇದೇನು ಬಹಳ ದೊಡ್ಡ ಪ್ರಮಾಣದ್ದಲ್ಲ. ‘‘ಹೀಗೆಯೇ ಮಾಡು. ಒಂದು ವೇಳೆ ಹಾಗೆ ಆಗದಿದ್ದರೆ ನಿನಗೆ ಬೇಕಾದ ಹಾಗೆ ಮಾಡಿಕೊ ಮಾರಾಯ ತೊಂದರೆ ಇಲ್ಲ, ಒಟ್ಟಿನಲ್ಲಿ ಇಷ್ಟನ್ನು ಸಾಧಿಸು’’ ಎಂದು ಶಿಕ್ಷಕರಿಗೆ ಹೇಳುವ ಶೈಲಿಯಲ್ಲಿ ಈ ಕಾನೂನುಗಳು ಇರುತ್ತವೆ.

 ರಾಷ್ಟ್ರೀಯ ಶಿಕ್ಷಣ ನೀತಿಗೆ ಇರುವ ಈ ಸ್ವರೂಪ ಸರ್ವಶಿಕ್ಷಣ ಅಭಿಯಾನದ ಬೌದ್ಧಿಕ ರಚನೆಗೆ ಇಲ್ಲ. ಅದರಲ್ಲಿ ತಜ್ಞ ತಿಳುವಳಿಕೆಗಳ ಭಾರ ಬಹಳ. ಈ ತಜ್ಞ ತಿಳುವಳಿಕೆಗಳ ಮೂಲ ವಿಶ್ವ ಸಂಸ್ಥೆಯೇ. ಆದ್ದರಿಂದಲೆಯೋ ಏನೊ ಭಾರತದಲ್ಲಿ ಕಾಂಗ್ರೆಸ್ಸೇತರ ಸರಕಾರಗಳೇ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದೆಂದು ವಿಶ್ವಸಂಸ್ಥೆಯ ಒಂದು ವರದಿ 2004ರಲ್ಲಿ ಹೇಳಿದೆ. ಏಕೆಂದರೆ ಅವರ ಮಾರ್ಗದರ್ಶನವನ್ನು ಇವರು ಯಥಾ ರೀತಿ ಮಾಡುತ್ತಾರೆ, ಯುನೆಸ್ಕೊದವರಿಗೆ ಶೈಕ್ಷಣಿಕ ಕಾನೂನುಗಳಲ್ಲಿ ಲೋಕಲ್ ಅಡ್ಜೆಸ್ಟ್‌ಮೆಂಟಿಗೆ ಸ್ವಲ್ಪ ಸ್ಪೇಸ್ ಕೊಟ್ಟರೆ ಅಷ್ಟು ಸಮಾಧಾನವಾಗುವುದಿಲ್ಲ. ಅಂದರೆ ಸರ್ವಶಿಕ್ಷಣ ಅಭಿಯಾನದ ಆಶಯಗಳು ಒಳ್ಳೆಯದಲ್ಲವೆಂದಲ್ಲ. ಅವೆಲ್ಲ ಉನ್ನತ ಆದರ್ಶಗಳೆ. ಆದರೆ ಅದನ್ನು ಸಾಧಿಸಬೇಕಾದರೆ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಬೇಕು. ಉದಾಹರಣೆಗೆ ಶಿಕ್ಷಣಕ್ಕೆ ಹಣದ ಕೊರತೆಯನ್ನು ಸರ್ವಶಿಕ್ಷಣ ಅಭಿಯಾನವು ಸಾಕಷ್ಟು ಮಟ್ಟಿಗೆ ನೀಗಿಸಿತು. ಅಷ್ಟು ಹಣ ಶಾಲೆಗೆ ಬಂದಾಗ ಲೆಕ್ಕಪತ್ರ ಗಳನ್ನು ನಿರ್ವಹಿಸಲು ಅಕೌಂಟೆಂಟ್ ಹುದ್ದೆ ಸೃಷ್ಟಿ ಯಾಗಬೇಕು ಮತ್ತು ಅದಕ್ಕೆ ನೇಮಕಾತಿ ಆಗಬೇಕು. ಆಗಿಲ್ಲ. ಆಗಿಲ್ಲದೆ ಇದ್ದಾಗ ಲೆಕ್ಕಪತ್ರದ ನಿರ್ವಹಣೆಯ ಜವಾ ಬ್ದಾರಿ ಶಿಕ್ಷಕರದ್ದಾಗಿರುತ್ತದೆ. ಆಗ ಶಿಕ್ಷಣಕ್ಕಾಗಿ ಇರುವ ಅವರ ಸಮ ಯವನ್ನೇ ಇದಕ್ಕೆ ಬಳಸಬೇಕು.

 ಶಾಲೆಗಳಲ್ಲಿ ಎಂಟು ಪಿರಿಯೆಡ್‌ಗಳಿವೆ. ಒಂದು ಪಿರಿಯೆಡ್‌ನ ಪಾಠವನ್ನು ಉತ್ತಮವಾಗಿ ನಿರ್ವಹಿಸಬೇಕಾದರೆ ಒಂದು ಪಿರಿಯೆಡ್ ಫ್ರೀ ಇರಬೇಕು. ಆಗ ಮುಂದಿನ ಪಿರಿಯೆಡ್‌ಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಹೋಗಲು ಆಗುತ್ತದೆ. ಎಂಟಕ್ಕೆ ಏಳೂ ಪಿರಿಯೆಡ್ ಪಾಠ ಮಾಡಬೇಕಾದಾಗ? ಫ್ರೀ ಪಿರಿಯೆಡ್ ಇದ್ದಾಗ ಲೆಕ್ಕಾಚಾರದ ಕೆಲಸವೇ ಆಗಿಬಿಟ್ಟರೆ? ಪಾಠ ಮುಗಿಸಲು ಸಾಧ್ಯವೇ ಹೊರತು ಆದರ್ಶವನ್ನು ಸಾಧಿಸಲು ಸಾಧ್ಯವಿಲ್ಲ. ಶಿಕ್ಷಣ ಎನ್ನುವುದು ಶಿಕ್ಷಕರನ್ನು ಮಾತ್ರ ಅವಲಂಬಿಸಿರುವುದಿಲ್ಲ. ಶೈಕ್ಷಣಿಕ ಆಡಳಿತವೂ ಅದರ ಪ್ರಮುಖ ನಿಯೋಗಿಯೆ ಆಗಿರುತ್ತದೆ. ಅಂತಹ ಶೈಕ್ಷಣಿಕ ಆಡಳಿತ ಹೇಗಿರಬೇಕು ಎಂಬ ಬಗ್ಗೆ ತಜ್ಞ ತಿಳುವಳಿಕೆಗಳು ಹೆಚ್ಚು ಮಾರ್ಗದರ್ಶನವನ್ನು ಮಾಡುವುದಿಲ್ಲ. ಆಗ ಏನಾಗುತ್ತದೆ? ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲೆಲ್ಲ ಆಡಳಿತಾತ್ಮಕ ಹುದ್ದೆಗಳು ಹೆಚ್ಚಾಗುತ್ತವೆ. ಹೆಚ್ಚಿಸಲ್ಪಟ್ಟ ಎಲ್ಲ ಹುದ್ದೆಯವರದೂ ಅಂತಿಮ ಗುರಿ ಶಾಲೆಯೇ ಆಗಿರುತ್ತದೆ. ಶಾಲೆಯಲ್ಲಿ ಮಾತ್ರ ಹುದ್ದೆಗಳು ಹೆಚ್ಚುವುದಿಲ್ಲ. ಆಗ ಹೆಚ್ಚಿಸಲ್ಪಟ್ಟ ಎಲ್ಲ ಆಡಳಿತಾತ್ಮಕ ಹುದ್ದೆಗಳಿಗೆ ಬೇಕಾದ್ದನ್ನು ಒದಗಿಸಬೇಕಾದವರು ಶಾಲೆಯಲ್ಲಿರುವ ಶಿಕ್ಷಕರುಗಳೇ. ಆಗ ಕಲಿಕಾ ಪ್ರಕ್ರಿಯೆಯ ಬಗ್ಗೆ ಯೋಚಿಸಲು ಅವರಿಗಿರುವ ಸಮಯ ಇನ್ನೂ ಕಡಿಮೆಯಾಯಿತು. ಮಕ್ಕಳು ಮತ್ತು ಪಾಲಕರು ಕೂಡ ಶಿಕ್ಷಣದ ಮುಖ್ಯ ನಿಯೋಗಿಗಳೇ. ಹತಾಶ ಕುಟುಂಬದಿಂದ ಬಂದ ಮಕ್ಕಳು, ತೀವ್ರ ಸಾಮಾಜಿಕ ಹಿಂದುಳಿಯುವಿಕೆಯಿಂದ ಬಂದ ಮಕ್ಕಳೆಲ್ಲ ಇರುತ್ತಾರೆ. ಲಭ್ಯ ದಾಖಲೆಯ ಪ್ರಕಾರ ಭಾರತದಲ್ಲಿ ಕಲಿಕಾ ಹಿಂದುಳಿಯುವಿಕೆಯ ಶೇಕಡ ಎಂಬತ್ತರಷ್ಟು ಕಾರಣ ಸಾಮಾಜಿಕ ಹಿಂದುಳಿಯುವಿಕೆಯಾಗಿರುತ್ತದೆ. ಅವರಿಗೆ ಗುರಿ ಮುಖ್ಯವೇ ಹೊರತು ವಿಧಾನ ಅಲ್ಲ. ಅವರಿಗೆ ಒಂದು ಒಳ್ಳೆಯ ಭವಿಷ್ಯ ಬೇಕು ಹೊರತು ಆ ಭವಿಷ್ಯವನ್ನು ಅತ್ಯಂತ ಆದರ್ಶಾತ್ಮಕವಾದ ವಿಧಾನದಲ್ಲೇ ರೂಪುಗೊಳ್ಳಬೇಕೆನ್ನುವುದು ಮುಖ್ಯವಾಗಿರುವುದಿಲ್ಲ. ಅನೇಕ ವಿಚಾರಗಳಲ್ಲಿ ಸಂಘರ್ಷಗಳು ಉದ್ಭವಿಸುವುದು ಸಾಮಾಜಿಕ ಮೌಲ್ಯಗಳು ಮತ್ತು ಶೈಕ್ಷಣಿಕ ಆದರ್ಶಗಳ ನಡುವೆ. ಒಬ್ಬ ಹುಡುಗ ಒಬ್ಬ ಹುಡುಗಿಯ ಬಗ್ಗೆ ಕೆಟ್ಟದಾಗಿ ನಡೆದುಕೊಂಡರೆ ಶೈಕ್ಷಣಿಕ ತತ್ವಶಾಸ್ತ್ರ ಅದನ್ನು ಸಹಜ ಎಂದು ತೆಗೆದುಕೊಂಡು ಆಪ್ತ ಸಲಹೆಯ ಮೂಲಕ ಸರಿಪಡಿಸಬೇಕೆಂದು ಬಯಸುತ್ತದೆ. ಆದರೆ ಪೋಷಕರು ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತಾರೆ. ಮೇಜರ್ ಅಲ್ಲದ ಮಕ್ಕಳ ವಿಚಾರದಲ್ಲಿ ಪಾಲಕರಿಗಿರುವ ಅಧಿಕಾರ ಪ್ರಶ್ನಾತೀತ. ಆಗ ಶಾಲೆಗಳು ಈ ಎರಡು ಮೌಲ್ಯಗಳ ನಡುವೆ ಸಮನ್ವಯದ ದಾರಿಯೊಂದನ್ನು ಕಂಡುಕೊಳ್ಳಬೇಕಾಗುತ್ತದೆ ಹೊರತು ಶೈಕ್ಷಣಿಕ ಆದರ್ಶಕ್ಕೇನೇ ಬದ್ಧರಾಗಿರುತ್ತೇವೆ ಎನ್ನಲು ಬರುವುದಿಲ್ಲ. ಸಾಹಿತಿಗಳು, ಕಲಾವಿದರು, ಚಿಂತಕರು ಎಲ್ಲರೂ ಸಮಾಜವನ್ನು ಬದಲಾಗಬೇಕೆಂದು ಹೇಳುತ್ತಾ ಬಂದಿದ್ದಾರೆ. ಆದರೆ ಸಮಾಜ ಬದಲಾಯಿತಾ? ಶಿಕ್ಷಕರು, ಮಕ್ಕಳು, ಶಿಕ್ಷಣ ಅಧಿಕಾರಿಗಳು, ರಾಜಕಾರಣಿ ಗಳು ಎಲ್ಲರೂ ಈ ಸಮಾಜದ ಭಾಗಗಳೆ. ‘‘ಶಿಕ್ಷಕರು ಅವರ ಏಜ್ ಓಲ್ಡ್ ಚಿಂತನೆಗಳಿಂದ ಹೊರಗೆ ಬರುವುದಿಲ್ಲ’’ ಎಂದು ಟೀಕಿಸಬಹುದು. ಆದರೆ ಇಡೀ ಸಮಾಜವೇ ಏಜ್ ಓಲ್ಡ್ ಥಿಯರಿಗಳಿಂದ ಹೊರಬಂದಿರುವುದಿಲ್ಲ;ಆದ್ದರಿಂದ ಶಿಕ್ಷಕರೂ ಹೊರಬಂದಿರುವುದಿಲ್ಲ ಅಷ್ಟೆ. ಅದರರ್ಥ ಹಾಗಾದರೆ ಇದೆಲ್ಲ ಹಾಗೇ ಇರಲಿ ಎಂದಲ್ಲ. ಶಿಕ್ಷಣದಲ್ಲಿ ಸುಧಾರಣೆಯಾಗುವ ಮೂಲಕವೇ ಸಮಾಜದಲ್ಲೂ ಸುಧಾರಣೆಯಾಗಲು ಸಾಧ್ಯ. ಶಿಕ್ಷಣದಲ್ಲಿ ಸುಧಾರಣೆಯಾಗಬೇಕಾದರೆ ಶಿಕ್ಷಕ ಸುಧಾರಣೆಯಾಗಬೇಕು. ನಮ್ಮ ದೇಶದಲ್ಲಿ ಕಾನೂನು ಮಾಡಿಸುವ ಮೂಲಕ ಸಮಾಜದಲ್ಲಿ ಸುಧಾರಣೆಯನ್ನು ಕಾಣುವ ಹಂಬಲವನ್ನು ವಿಚಾರವಂತ ಬುದ್ಧಿಜೀವಿಗಳು ಹೊಂದಿರುವ ಹಾಗೆಯೆ ಶಿಕ್ಷಣ ತಜ್ಞರುಗಳು ಆದೇಶಗಳನ್ನು ಮಾಡಿಸುವ ಮೂಲಕ ಶಿಕ್ಷಣದಲ್ಲಿ ಸುಧಾರಣೆಯನ್ನು ಮಾಡಿಸುವ ಹಂಬಲ ಹೊಂದಿದ್ದಾರೆ. ಅದು ಆಗದೆ ಹೋದಾಗ ಶಿಕ್ಷಕರನ್ನು ಬೈಯ್ಯುವುದರಲ್ಲಿ ಸಮಾಧಾನ ಪಡೆಯುತ್ತಾರೆಯೇ ಹೊರತು ಶಿಕ್ಷಕರನ್ನಾಗಲಿ, ಪಾಲಕರನ್ನಾಗಲಿ ಮಾತನಾಡಿಸಲು ಹೋಗುವುದಿಲ್ಲ. ತಮ್ಮ ಹಾಗೆಯೆ ಶಿಕ್ಷಕರಿಗೂ ಮಕ್ಕಳ ಬಗ್ಗೆ ಕಾಳಜಿ ಇರುತ್ತದೆ, ಪೋಷಕರಿಗೂ ಕಾಳಜಿ ಇರುತ್ತದೆ; ಆದರೂ ಅವರಿಗೆ ತಾವು ಹೇಳಿದ್ದನ್ನು ಮಾಡಲು ಆಗುತ್ತಿಲ್ಲವೆಂದರೆ ಒಂದೋ ಅವರಿಗೆ ಜ್ಞಾನದ ಸಮಸ್ಯೆ ಇರಬಹುದು ಅಥವಾ ಮಾಡಲು ಆಗದಂತಹ ಸನ್ನಿವೇಶವಿರಬಹುದು ಅಥವಾ ತಾವು ಹೇಳುವುದರಲ್ಲೆ ಕೆಲವೊಂದು ದೋಷಗಳಿರಲೂಬಹುದು ಎಂದು ಯೋಚಿಸಲಿಕ್ಕೂ ನಮ್ಮಲ್ಲಿನ ತಜ್ಞರಿಗೆ ಆಗುವುದಿಲ್ಲ. ನಮ್ಮಲ್ಲಿ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಸಾಹಿತಿಗಳು, ಚಿಂತಕರು ಎಲ್ಲರೂ ಇನ್ನೊಬ್ಬನನ್ನು ವಿಲನ್ ಮಾಡುವುದರಲ್ಲಿ ಹೊಂದಿರುವ ಆಸಕ್ತಿಯನ್ನು ಸಮಸ್ಯೆಯನ್ನು ನಿರ್ವಹಿಸುವುದರಲ್ಲಿ ತೋರುವುದಿಲ್ಲ. ಶಿಕ್ಷಕರು ಮಾತನಾಡಿದ ಕೂಡಲೇ ಅದು ಸರಿಯಿಲ್ಲ ಎಂದೇ ಮಾತನಾಡಲು ತೊಡಗುವ ತಜ್ಞರು ಶಿಕ್ಷಕರು ಮಾತನಾಡದಂತೆ ಮಾಡುವುದರಲ್ಲಷ್ಟೇ ಯಶಸ್ವಿಯಾಗಬಲ್ಲರು ಹೊರತು ಶಿಕ್ಷಕರಿಂದ ತಜ್ಞ ವಿಚಾರಗಳನ್ನು ಆಗ ಮಾಡಿಸುವುದರಲ್ಲಲ್ಲ. ಆದರೆ ಕಲಿಕೆಯಲ್ಲಿ ತೊಡಗಿಕೊಳ್ಳದ ಮಗುವನ್ನು ಕಲಿಯುವಂತೆ ಮಾಡುವುದರಲ್ಲಿ ಶಿಕ್ಷಕರು ಹೇಗೆ ಸವಾಲನ್ನು ತೆಗೆದುಕೊಳ್ಳಬೇಕೆಂದು ತಜ್ಞರು ಭಾವಿಸುತ್ತಾರೊ ಹಾಗೆಯೆ ತಜ್ಞರ ವಿಚಾರವನ್ನು ಮಾಡಲು ಆಗುವುದಿಲ್ಲ ಎನ್ನುವ ಶಿಕ್ಷಕನಿಂದಲೇ ಅದನ್ನು ಆಗು ಮಾಡಿಸುವ ಸವಾಲನ್ನು ತಜ್ಞರೂ ತೆಗೆದುಕೊಳ್ಳಬೇಕಾಗುತ್ತದೆ. ಮತ್ತೆ ಸಂಬಳ ಕೊಡುವುದೇಕೆ ಎಂದರೆ ಸಂಬಳ ಕೊಡುವುದು ಗವರ್ನಮೆಂಟ್/ಆಡಳಿತ ಮಂಡಳಿ ಆದೇಶವನ್ನು ಪಾಲಿಸಲು,ಅದನ್ನು ಅವರು ಮಾಡ್ತಾನೇ ಇರ್ತಾರೆ ಎನ್ನುವುದಷ್ಟೆ ಉತ್ತರವಾದೀತು. ತಜ್ಞ ತಿಳುವಳಿಕೆಗಳಿಗೆ ಇನ್ನೂ ಒಂದು ಮಿತಿ ಇದೆ. ಒಬ್ಬ ತಜ್ಞನಿಗೂ ಇನ್ನೊಬ್ಬ ತಜ್ಞನಿಗೂ ವ್ಯತ್ಯಾಸವಿರುತ್ತದೆ. ಹ್ಯೂಮನಿಸ್ಟಿಕ್ ಅಪ್ರೋಚಿಗೂ, ಎಕ್ಸಿಸ್ಟೆನ್ಸಿಸಮ್‌ಗೂ ಕೊಂಚ ವ್ಯತ್ಯಾಸವಿದೆ. ಈ ಎಲ್ಲ ವ್ಯತ್ಯಾಸಗಳನ್ನೂ ಸಾಮಾಜಿಕ ಧೋರಣೆ ಮತ್ತು ಕಾನೂನಿನ ಚೌಕಟ್ಟಿನ ಒಳಗೆಯೆ ನಿಲ್ಲಿಸಿಕೊಂಡು ಮುಂದುವರಿಯಬೇಕಾಗುತ್ತದೆ. ಹಾಗೆಯೆ ಶಿವರಾಮ ಕಾರಂತರಂಥವರು ಶೈಕ್ಷಣಿಕ ಪ್ರಯೋಗ ಸಂಶೋಧನೆಗಳನ್ನು ಮಾಡಿದ್ದಾರೆ. ಆದರೆ ಅದು ಮಾಸ್ ಎಫೆಕ್ಟ್ ಆಗಲಿಲ್ಲ. ಎಂಟು ಹತ್ತು ವಿದ್ಯಾರ್ಥಿಗಳಷ್ಟೆ ಅಲ್ಲಿಗೆ ಬಂದದ್ದು. ವಿದೇಶಗಳಲ್ಲೂ ಕೂಡ ತಜ್ಞ ತಿಳುವಳಿಕೆಗಳೇ ಇಡೀ ಶಿಕ್ಷಣ ವ್ಯವಸ್ಥೆಯೇ ಹಾಗೆ ಇದೆಯೆಂದು ಅಲ್ಲ. ಅಮೆರಿಕದಂತಹ ಒಂದು ರಾಷ್ಟ್ರದಲ್ಲಿ ಶೋಷಿತ ವರ್ಗವಾದ ನೀಗ್ರೋಗಳು ಐ. ಕ್ಯೂ ಟೆಸ್ಟ್ ತಮ್ಮ ವಿರುದ್ಧ ಇದೆ ಎಂದು ಸುಪ್ರೀಂ ಕೋರ್ಟ್‌ನಿಂದ ಜಡ್ಜ್ ಮೆಂಟ್ ತೆಗೆದುಕೊಳ್ಳಬಲ್ಲರು. ಭಾರತದ ಶೋಷಿತ ವರ್ಗಗಳು ಇನ್ನೂ ತಮ್ಮ ರಾಜಕೀಯ ಹಕ್ಕುಗಳಿಗಾಗಿ ಹೋರಾಡುತ್ತಿವೆಯೇ ಹೊರತು ಶೈಕ್ಷಣಿಕವಾಗಿ ಹೋರಾಡುವಷ್ಟು ಬೆಳೆದಿಲ್ಲ. ಆದರೆ ಅಂತಹ ಅಮೆರಿಕದಲ್ಲೂ ಎಲ್ಲವೂ ತಜ್ಞ ತಿಳಿವಳಿಕೆಯಂತೆಯೇ ನಡೆಯುವುದಿಲ್ಲ. ಕುವೆಂಪು ಅವರು, ‘‘ಗುಡಿ, ಚರ್ಚು ಮಸೀದಿಗಳ ಬಿಟ್ಟು ಹೊರ ಬನ್ನಿ’’ ಎಂದರು. ಉದಾತ್ತ ಆಶಯ ಅದು. ಅಂದ ಮಾತ್ರಕ್ಕೆ ದೇವಸ್ಥಾನಕ್ಕೆ ಹೋದವನನ್ನು ವಿಲನ್ ಎಂದು ಹೇಳಲಿಲ್ಲ ಅವರು. ಏಕೆಂದರೆ ಅವರ ಆಶಯ ಸರಿಹೊತ್ತಿನ ಕಾನೂನಲ್ಲ. ಕಡ್ಡಾಯವಾಗಿ ಪಾಲಿಸಬೇಕಾದ್ದು ಕಾನೂನನ್ನು. ಆಶಯವನ್ನಲ್ಲ. ಹಾಗಾದರೆ ಆಶಯಕ್ಕೆ ಮಹತ್ವವಿಲ್ಲವೇ? ಖಂಡಿತಾ ಇದೆ. ಭವಿಷ್ಯವನ್ನು ರೂಪಿಸಬೇಕಾದ್ದು ಆಶಯವೇ.

ತುಘಲಕ್ ಜಾರಿಗೊಳಿಸಿದ ಚರ್ಮದ ನಾಣ್ಯಗಳು ಆಗ ಯಶಸ್ವಿಯಾಗಿಲ್ಲ. ಆದರೆ ಅವನ ಆಶಯವು ಆರು ನೂರು ವರ್ಷಗಳ ನಂತರ ಪೇಪರ್ ಕರೆನ್ಸಿಯಾಗಿ ಇಡೀ ಭಾರತದ ಆರ್ಥಿಕತೆಯ ನಿರ್ವಹಣೆ ಮಾಡುತ್ತಿರುವುದು ಕಣ್ಣೆದುರಿನ ಸತ್ಯ. ಶಿಕ್ಷಣ ತಜ್ಞರ ತಿಳುವಳಿಕೆಗಳಿಗೂ ಈ ಮಹತ್ವ ಇದ್ದೇ ಇದೆ. ಅದನ್ನು ಅನುಷ್ಠಾನಗೊಳಿಸಲು ಸೂಕ್ತವಾಗುವಂತೆ ವ್ಯವಸ್ಥೆಯನ್ನು ಪಕ್ವಗೊಳಿಸುವ ಪ್ರಕ್ರಿಯೆಗಿಳಿಯಬೇಕಾದರೆ ಸುಮಾರು ನೂರೈವತ್ತು ವರ್ಷಗಳಿಂದ ಇಡೀ ದೇಶದ ಶಿಕ್ಷಣವನ್ನು ಹಿಡಿದಿಟ್ಟುಕೊಂಡಿರುವ ಒಂದು ವ್ಯವಸ್ಥೆ ಕೂಡ ತೀರಾ ಕ್ಷುಲ್ಲಕವಲ್ಲ; ಅದಕ್ಕೂ ಒಂದು ಶಕ್ತಿ ಇರುತ್ತದೆ ಎಂಬ ಅರಿವು ಇರಬೇಕಾಗುತ್ತದೆ.

Writer - ಅರವಿಂದ ಚೊಕ್ಕ್ಕಾಡಿ

contributor

Editor - ಅರವಿಂದ ಚೊಕ್ಕ್ಕಾಡಿ

contributor

Similar News