ರೈತರ ಸಾಲಮನ್ನಾಕ್ಕೆ ಸಮನ್ವಯ ಸಮಿತಿ ಒಪ್ಪಿಗೆ
ಬೆಂಗಳೂರು, ಜೂ.1: ರೈತರ ಸಾಲಮನ್ನಾ ಬಜೆಟ್‌ನಲ್ಲಿ ಘೋಷಣೆ, ನೀರಾವರಿಗೆ ಐದು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ.ಅನುದಾನ, 20 ಲಕ್ಷ ಮನೆ ನಿರ್ಮಾಣ, 1 ಕೋಟಿ ಉದ್ಯೋಗ ಸೃಷ್ಟಿಸುವುದು ಸೇರಿದಂತೆ ಮೈತ್ರಿಕೂಟ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಗೆ ಸಮನ್ವಯ ಸಮಿತಿ ಒಪ್ಪಿಗೆ ನೀಡಿದೆ.
ರವಿವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಮನ್ವಯ ಸಮಿತಿ ಸಂಚಾಲಕ ದಾನಿಶ್ ಅಲಿ ಪಾಲ್ಗೊಂಡಿದ್ದರು.
ಸಂಸದ ಡಾ.ಎಂ.ವೀರಪ್ಪಮೊಯ್ಲಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಸಲ್ಲಿಸಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕರಡು ವರದಿಯನ್ನು ಅಲ್ಪ ಬದಲಾವಣೆಯೊಂದಿಗೆ ಸಮನ್ವಯ ಸಮಿತಿ ಒಪ್ಪಿಗೆ ನೀಡಿದೆ ಎಂದು ಸಮನ್ವಯ ಸಮಿತಿಯ ಸಂಚಾಲಕ ದಾನಿಶ್ ಅಲಿ ಹೇಳಿದರು.
ಕಳೆದ ಬಾರಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ರಚಿಸಲಾಗಿದ್ದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕರಡು ಸಿದ್ಧತಾ ಸಮಿತಿಯು ನೀಡಿದ್ದ ವರದಿಯನ್ನು ಅಲ್ಪ ಬದಲಾವಣೆಯೊಂದಿಗೆ ಸಮನ್ವಯ ಸಮಿತಿಯು ಒಪ್ಪಿಕೊಂಡಿದ್ದು, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡಿದೆ. ಅಲ್ಲದೆ, ಈ ಕಾರ್ಯಕ್ರಮಗಳ ಮಾಹಿತಿಯನ್ನು ಒಂದು ಕಿರು ಪುಸ್ತಕದ ರೂಪದಲ್ಲಿ ಹೊರತರಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖಾಂಶಗಳು: ರೈತರ ಸಾಲಮನ್ನಾ ಮಾಡಲು ಸಮನ್ವಯ ಸಮಿತಿ ಒಪ್ಪಿಗೆ ನೀಡಿದ್ದು, ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಲಿದ್ದಾರೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಮುಂದಿನ 5 ವರ್ಷಗಳಲ್ಲಿ 1.25ಲಕ್ಷ ಕೋಟಿ ರೂ.ಗಳ ಅನುದಾನ ಒದಗಿಸಲು ನಿರ್ಧರಿಸಲಾಗಿದೆ ಎಂದು ದಾನಿಶ್ ಅಲಿ ಹೇಳಿದರು.
ರಾಜ್ಯದ ವಸತಿ ರಹಿತರಿಗಾಗಿ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಹೊಸ ಮನೆಗಳನ್ನು ನಿರ್ಮಿಸುವುದು. ಹೊಸ ಕ್ರೀಡಾ ನೀತಿ ರಚಿಸುವುದು, ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವ ಮೂಲಕ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು. ಮುಂದಿನ 5 ವರ್ಷಗಳಲಿ 1 ಕೋಟಿ ಉದ್ಯೋಗ ಸೃಷ್ಟಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಆರೋಗ್ಯ ಕರ್ನಾಟಕ ಯೋಜನೆಯನ್ನು ಮುಂದುವರೆಸುವುದು, ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಎಲ್ಲ ಪ್ರಮುಖ ಕಾರ್ಯಕ್ರಮಗಳು, ಯೋಜನೆಗಳು ಮುಂದುವರೆಯಲಿವೆ. ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ರೈತರ ಸಾಲ ಮನ್ನಾ ಆಗಲಿದೆ. ಇಲಾಖೆಗಳಿಗೆ ಅನುದಾನವನ್ನು ಕಡಿತ ಮಾಡುವುದಿಲ್ಲ ಎಂದು ದಾನಿಶ್ ಅಲಿ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಕ ಮಾಡುವ ಸಂಬಂಧ ಇಂದಿನ ಸಭೆಯಲ್ಲಿ ಯಾವುದೆ ಚರ್ಚೆ ಮಾಡಿಲ್ಲ. ನಾಳೆಯಿಂದ ವಿಧಾನಮಂಡಲದ ಅಧಿವೇಶನ ಆರಂಭಗೊಳ್ಳುತ್ತಿ ರುವುದರಿಂದ, ಈ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆಯಾಗಬಹುದು. ನಿಗಮ, ಮಂಡಳಿಗಳ ನೇಮಕಾತಿ ಪ್ರಕ್ರಿಯೆಯೂ ಶೀಘ್ರದಲ್ಲೆ ಆಗಲಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರು ಅಗತ್ಯವಿದ್ದಲ್ಲಿ ಎರಡು ಪಕ್ಷಗಳ ಜಂಟಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುತ್ತಾರೆ. ಸದ್ಯಕ್ಕೆ ಜಂಟಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಂಬಂಧ ಯಾವುದೆ ಚರ್ಚೆಯನ್ನು ನಡೆಸಿಲ್ಲ ಎಂದು ದಾನಿಶ್ ಅಲಿ ಹೇಳಿದರು.
ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಸಮಸ್ಯೆಗಳು ಇಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸರಕಾರ ಹಾಗೂ ಮುಖಂಡರ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಕುಮಾರಸ್ವಾಮಿ ನೇತೃತ್ವದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಅವರು ಪೂರ್ಣ ಪ್ರಮಾಣದ ಹೊಸ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ದಾನಿಶ್ ಅಲಿ ತಿಳಿಸಿದರು.
ಸಚಿವರಿಗೆ ಮಾರ್ಗಸೂಚಿ
‘ರೈತರ ಸಾಲಮನ್ನಾ ಮಾಡಲು ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡು ಪಕ್ಷಗಳು ಸಮ್ಮತಿಸಿವೆ. ಸಮ್ಮಿಶ್ರ ಸರಕಾರದಲ್ಲಿ ಯಾವುದೆ ತೊಂದರೆಯಿಲ್ಲ, ಇಂದಿನ ಸಭೆಯಲ್ಲಿ ಎಲ್ಲ ವಿಚಾರಗಳು ಸೌಹಾರ್ದಯುತವಾಗಿ ಚರ್ಚೆಯಾಗಿವೆ. ಸಚಿವರು ತಮ್ಮ ಖಾತೆಯ ವ್ಯಾಪ್ತಿ ಮೀರಿ ಹೇಳಿಕೆ ನೀಡಬಾರದು. ಸಚಿವರಿಗೆ ಮಾರ್ಗಸೂಚಿ ನೀಡಲಾಗುವುದು. ಸಂವಿಧಾನಾತ್ಮಕವಾಗಿ ಮುಖ್ಯ ಸಚೇತಕರ ಆಯ್ಕೆ ನಡೆಯಲಿದೆ. ಈ ಬಗ್ಗೆ ನಾಳೆ ಸಂಜೆ ನಿಮಗೆ ಮಾಹಿತಿ ನೀಡುತ್ತೇವೆ’
-ಕೆ.ಸಿ.ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ