ಇಬ್ಬರು ಗಾಂಜಾ ಮಾರಾಟಗಾರರ ಬಂಧನ; 1 ಕೆಜಿ ಗಾಂಜಾ ವಶ
Update: 2018-07-01 20:01 IST
ಬೆಂಗಳೂರು, ಜು.1: ಮಾದಕ ವಸ್ತು ಗಾಂಜಾ ಮಾರಾಟ ಆರೋಪದ ಮೇಲೆ ಇಬ್ಬರನ್ನು ಬಂಧಿಸಿ 1 ಕೆಜಿ ಗಾಂಜಾ ವಶಕ್ಕೆ ಪಡೆಯುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ನಿವಾಸಿಗಳಾದ ಅಪ್ಸರ್ ಪಾಷಾ(37), ಮುಬಾರಕ್(25) ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ರಾಮಮೂರ್ತಿ ನಗರದ ರೈಲು ನಿಲ್ದಾಣದ ಎದುರು ಗಾಂಜಾವನ್ನಿಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಇವರ ವಶದಲ್ಲಿದ್ದ 1 ಕೆಜಿ ಗಾಂಜಾ ಪಡೆಯಲಾಗಿದೆ ಎಂದು ಸಿಸಿಬಿ ತಿಳಿಸಿದೆ.
ಬಂಧಿತರು ಸಂಘಟಿತ ರೀತಿಯಲ್ಲಿ ವ್ಯವಸ್ಥಿತವಾಗಿ ಗಾಂಜಾ ಖರೀದಿ ಮಾಡಿಕೊಂಡು ಬಂದು ತಮ್ಮ ವಶದಲ್ಲಿಟ್ಟುಕೊಂಡು ಪರಿಚಿತ ಗಿರಾಕಿಗಳಿಗೆ ಪ್ಯಾಕೇಟುಗಳನ್ನಾಗಿ ಮಾಡಿಕೊಂಡು, ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವ ಅಂಶ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.