ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತೆರಿಗೆ ನಿಯಮಗಳಿರಬೇಕು: ನಿವೃತ್ತ ನ್ಯಾ. ಎಸ್.ರಾಜೇಂದ್ರಬಾಬು
ಬೆಂಗಳೂರು, ಜು.1: ತೆರಿಗೆ ಪಾವತಿಸುವವರಿಗೆ ಅರ್ಥವಾಗುವ ರೀತಿಯಲ್ಲಿ ತೆರಿಗೆ ನಿಯಮ, ಕಾನೂನುಗಳಿರಬೇಕು. ತೆರಿಗೆ ವ್ಯವಸ್ಥೆ ಸೂಕ್ತವಾಗಿ ಅನುಷ್ಠಾನವಾಗಬೇಕಾದರೆ ಸುಲಭ ರೀತಿಯ ಪಾವತಿ ವ್ಯವಸ್ಥೆ ಇರಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಸ್.ರಾಜೇಂದ್ರ ಬಾಬು ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಎಚ್‌ಎಎಲ್ ಸಭಾಂಗಣದಲ್ಲಿ ತೆರಿಗೆ ಇಲಾಖೆ ಆಯೋಜಿಸಿದ್ದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಜಾರಿಯಾಗಿ 1ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೆರಿಗೆ ವ್ಯವಸ್ಥೆ ಜಾರಿಗೆ ತಂದು, ಅದನ್ನು ಅನುಷ್ಟಾನಗೊಳಿಸುವುದು ಸುಲಭವಲ್ಲ. ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಹಾಗೂ ಸಮಗ್ರವಾಗಿ ಅನುಷ್ಟಾನಗೊಳ್ಳುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂದರು.
ನಾವು ಸರಳವಾದ ಕಾನೂನು ಅಥವಾ ವ್ಯವಸ್ಥೆ ಮಾಡುತ್ತಿಲ್ಲ. ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ತರುತ್ತಿರುತ್ತೇವೆ. ಸಾಮಾನ್ಯ ಜನರಿಗೆ ಅಥವಾ ಸಣ್ಣ ಉದ್ಯಮಿಗೂ ಅರ್ಥವಾಗುವ ರೀತಿಯಲ್ಲಿ ತೆರಿಗೆ ನಿಯಮವಿರಬೇಕು ಎಂದರು.
ಹಿಂದಿನ ತೆರಿಗೆ ಪದ್ಧತಿಯಲ್ಲಿ ಹಲವು ಗೊಂದಲಗಳಿದ್ದವು. ಜಿಎಸ್‌ಟಿ ಜಾರಿ ಸಂದರ್ಭದಲ್ಲಿ ಹಲವು ಸಮಸ್ಯೆ, ಗೊಂದಲ ಎದುರಾದವು. ಎಲ್ಲ ಸರಕಾರಗಳಿಗೂ ಅನ್ವಯವಾಗುವಂತೆ ಕಾನೂನು ರಚಿಸಬೇಕಾಯಿತು, ಕೆಲ ತಿದ್ದುಪಡಿಗಳೂ ಆದವು. ಇದು ಅತಿ ದೊಡ್ಡ ಸವಾಲಾಗಿತ್ತು. ಉಪಗ್ರಹ ಉಡಾವಣೆ, ಕಾರು ಉತ್ಪಾದನೆ ಬಹಳ ಸುಲಭ. ಆದರೆ ಜಿಎಸ್‌ಟಿ ಜಾರಿ ಕ್ಲಿಷ್ಟಕರ ಎಂದು ಅವರು ಹೇಳಿದರು.
ಪೆಟ್ರೋಲಿಯಂ ಉತ್ಪನ್ನ ಜಿಎಸ್‌ಟಿ ವ್ಯಾಪ್ತಿಗೆ?: ಜಿಎಸ್‌ಟಿ ವ್ಯಾಪ್ತಿಯಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರಗಿಡಲಾಗಿದೆ. ಕೇಂದ್ರ ಸರಕಾರ ಪ್ರಾರಂಭದಿಂದಲೂ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರ ಪರವಾಗಿತ್ತು. ಇದಕ್ಕಾಗಿ ರಾಜ್ಯ ಸರಕಾರಗಳ ಬೆಂಬಲ ಕೇಳಿತ್ತು ಎಂದು ಕರ್ನಾಟಕದ ಕೇಂದ್ರ ತೆರಿಗೆ(ಜಿಎಸ್‌ಟಿ)ನಿವೃತ್ತ ಮುಖ್ಯ ಆಯುಕ್ತ ಎಂ.ವಿನೋದ್ ಕುಮಾರ್ ತಿಳಿಸಿದರು.
ಪೆಟ್ರೋಲಿಯಂ ಉತ್ಪನ್ನಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಜಿಎಸ್‌ಟಿ ಮಂಡಳಿಗೆ ಅವಕಾಶವಿದೆ. ಇದಕ್ಕೆ ಕೆಲ ವರ್ಷಗಳು ಬೇಕಾಗಬಹುದು. ಕ್ರಮೇಣವಾಗಿ ಒಂದೊಂದು ಉತ್ಪನ್ನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಹುದು ಎಂದು ಸಲಹೆ ನೀಡಿದರು.
ಜಿಎಸ್‌ಟಿ ಜಾರಿಯಾಗಿ ಒಂದು ವರ್ಷಗಳ ಕಾಲ ಸುಭದ್ರವಾಗಿ ನಡೆದಿದೆ. ಎಲ್ಲ ರೀತಿಯಲ್ಲಿ ದೇಶದಾದ್ಯಂತ ಎಲ್ಲ ರಾಜ್ಯಗಳು ಮತ್ತು ಕೇಂದ್ರ ಸರಕಾರ ಪರಸ್ಪರ ಹೊಂದಾಣಿಕೆಯಿಂದ ಮುಂದುವರಿದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಶೇ.12 ರಿಂದ ಶೇ.18ರವರೆಗಿರುವ ಜಿಎಸ್‌ಟಿ ಸ್ಲ್ಯಾಬ್ ವಿಲೀನವಾಗುವ ಸಾಧ್ಯತೆಯಿದ್ದು, ಶೇ.28 ಜಿಎಸ್‌ಟಿ ಇಳಿಕೆಯಾಗುವ ನಿರೀಕ್ಷೆಯಿದೆ. ಅಲ್ಲದೆ, ಇ-ವೇ ಬಿಲ್ ಜಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಜಿಎಸ್‌ಟಿ ಸಂಗ್ರಹ ಅಧಿಕವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೇಂದ್ರ ತೆರಿಗೆ(ಜಿಎಸ್‌ಟಿ)ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ, ಹೆಚ್ಚುವರಿ ಮುಖ್ಯ ಆಯುಕ್ತ ಅಮಿತೇಷ್ ಭಾರತ್ ಸಿಂಗ್, ಟೊಯೋಟಾ ಕಿರ್ಲಾಸ್ಕರ್ ಉಪಾಧ್ಯಕ್ಷ ಶೇಖರ್ ವಿಶ್ವನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದೇಶದಲ್ಲಿ ಜಿಎಸ್‌ಟಿ ಜಾರಿಯಾದ ನಂತರ ಬದಲಾವಣೆಯ ಕಡೆಗೆ ದೇಶ ಮುನ್ನಡೆಯುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಎಲ್ಲ ಪಕ್ಷಗಳು ಒಂದಾಗಿ ಜಿಎಸ್‌ಟಿ ಯಶಸ್ವಿಯಾಗುವಂತೆ ಮಾಡಿವೆ.
-ಡಾ.ಕೆ.ಆರ್.ರಾಧಾಕೃಷ್ಣನ್ ಇಸ್ರೋ ಮಾಜಿ ಅಧ್ಯಕ್ಷ