ಮಹಿಳೆಯರಿಗೆ ಸಮಾನ ಅವಕಾಶ, ಸ್ವಾತಂತ್ರ ನೀಡಿ: ಕವಿ ಡಾ.ದೊಡ್ಡರಂಗೇಗೌಡ

Update: 2018-07-01 14:52 GMT

ಬೆಂಗಳೂರು, ಜು.1: ವಿಶ್ವದಲ್ಲಿ ಮಹಿಳೆಯರು ಹಲವಾರು ಕ್ಷೇತ್ರದಲ್ಲಿ ವಿಭಿನ್ನ ಸಾಧನೆ ಮಾಡಿದ್ದರೂ, ಇಂದಿಗೂ ಪುರುಷ ಪ್ರಧಾನ ಸಮಾಜ ಹೆಣ್ಣನ್ನು ಅಬಲೆಯಂತೆ ನಡೆಸಿಕೊಳ್ಳುತ್ತಿದೆ ಎಂದು ಕವಿ ಡಾ.ದೊಡ್ಡರಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಪಬ್ಲಿಕ್ ರಿಲೇಶನ್ಸ್  ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಯಂಗ್, ಕಮ್ಯೂನಿಕೇಟರ್ಸ್ ಕ್ಲಬ್ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಗಳ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲು ಶೇ.50ರಷ್ಟಿದೆ. ಗಂಡಿನ ರೀತಿಯಲ್ಲಿ ಸಮಾಜಕ್ಕಾಗಿ ದುಡಿದಿದ್ದಾರೆ. ಆದರೆ, ಅವರಿಗೆ ಎಲ್ಲ ರೀತಿಯಲ್ಲಿ ಅವಕಾಶ ಮತ್ತು ಸ್ವಾತಂತ್ರವನ್ನು ಕಡೆಗಣಿಸಿದ್ದಾರೆ ಎಂದರು.

ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಬೇಕು. ಎಂದಿಗೂ ಆಕೆಯ ಸ್ವಾತಂತ್ರ ಕಸಿದುಕೊಳ್ಳಬೇಡಿ. ಜಾನ್ಸಿ ರಾಣಿ ಲಕ್ಷ್ಮೀಬಾಯಿ, ರಾಣಿ ಚೆನ್ನಮ್ಮ ಸೇರಿ ಸಾಧನೆ ಮಾಡಿದ ಅನೇಕರು ನಮ್ಮ ಮುಂದೆ ಇದ್ದಾರೆ. ಅವರು ಮಹಿಳೆಯರಿಗೆ ಎಂದಿಗೂ ಸ್ಪೂರ್ತಿಯಾಗಿದ್ದು, ಇಂದು ಮಹಿಳೆ ಕಾಲಿಡದ ಕ್ಷೇತ್ರವಿಲ್ಲ. ಹೀಗೆ ಸಾಧನೆ ಮಾಡಿ ತ್ಯಾಗ ಮಾಡಿದ ಅನೇಕರಿದ್ದಾರೆ. ಅವರನ್ನು ನೆನೆದು, ಇರುವವರಿಗೆ ಅವಕಾಶ ನೀಡಿ ಎಂದು ಸಲಹೆ ನೀಡಿದರು.

ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಇಂದಿನ ಪುರುಷ ಸಮಾಜ ಕ್ರೌರ್ಯ ತೋರಿಸುತ್ತದೆ. ಅದು ಮತಿಹೀನ ಕೃತ್ಯ. ಸಮಾನ ಸ್ವಾತಂತ್ರ್ಯ ಕೊಟ್ಟು ಎಲ್ಲಾ ರೀತಿಯಲ್ಲೂ ಆಕೆ ಬೆಳೆಯಲು ಅವಕಾಶ ನೀಡಬೇಕು. ಒಬ್ಬ ಮಹಿಳೆಗೆ ವಿದ್ಯೆ ನೀಡಿದರೆ ಇಡೀ ಮನೆ ಮಂದಿಗೆ ವಿದ್ಯೆ ನೀಡಿದಂತೆ. ಹೀಗಾಗಿ ಅವಳಿಗೆ ಎಲ್ಲ ಕ್ಷೇತ್ರದಲ್ಲೂ ಸ್ವಾತಂತ್ರ್ಯ ಕೊಡಬೇಕು ಎಂದು ಹೇಳಿದರು.

ಭಾರತದ ಮೇಲೆ ಬೇರೆ ದೇಶಗಳ ದಾಳಿಕೊರರಿಂದ ದಾಳಿಯಾದ ನಂತರ ಹೆಣ್ಣನ್ನು ಮನೆ ಬಾಗಿಲೊಳಗಿನ ಚೌಕಟ್ಟಿನಲ್ಲಿ ಬಂಧಿಸುವ ಪ್ರಯತ್ನವಾಯಿತು. ಆದರೆ, ಚರಿತ್ರೆ ಪುಟ ತೆರೆದರೆ ರಾಜಾರಾಂ ಮೋಹನ್ ರಾಯ್, ಈಶ್ವರ್ ಚಂದ್ರ ವಿಜಯ ಸಾಗರ್ ಅಂತಹ ಸಾಕಷ್ಟು ಮಂದಿ ಸೀಯರ ಸಂಕೋಲೆ ಬಿಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸೀಗೆ ಸರಿಯಾದ ಸ್ಥಾನಮಾನ, ಗೌರವ ಸಿಗಬೇಕು ಎಂದು ಹೋರಾಡಿದವರು. ಯಾವುದಕ್ಕೂ ಹೆದರದೆ ಸಮಾಜದ ಸಮತೋಲನಕ್ಕಾಗಿ ಮುನ್ನಡೆದವರು ಎಂದು ಅವರು ತಿಳಿಸಿದರು.

ಇದೇ ವೇಳೆ ಸಾಮಾಜಿಕ ಕಾರ್ಯಕರ್ತೆ ಡಾ.ಅಕೈ ಪದ್ಮಶಾಲಿ, ಫಿಟ್ನೆಸ್ ತಜ್ಞೆ ವನಿತಾ ಅಶೋಕ್, ಹಿನ್ನೆಲೆ ಗಾಯಕಿ ಸುಪ್ರಿಯ ಲೋಹಿತ್, ಪೊಲೀಸ್ ಪೇದೆ ಅರ್ಚನಾ, ಪತ್ರಕರ್ತೆ ಶಿಲ್ಪಶ್ರೀ, ಪೀಣ್ಯ ಇಂಡಸ್ಟ್ರಿಯಲ್ ಗ್ಯಾಸಸ್ ಪ್ರೈ.ಲಿ.ನ ಲಕ್ಷ್ಮಿ ಪಿಳ್ಳೈ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಬೆಂಗಳೂರು ವಿವಿಯ ಉಪಕುಲಪತಿ ಡಾ.ಕೆ.ಆರ್.ವೇಣುಗೋಪಾಲ್, ರಿಜಿಸ್ಟ್ರಾರ್ ಡಾ.ಬಿ.ಕೆ.ರವಿ, ಎಂಇಎಸ್ ಕಾಲೇಜಿನ ಪ್ರೊ.ಡಾ.ಎನ್.ಎಲ್.ಲೀಲಾ, ಪಿಆರ್‌ಸಿಐ ಮತ್ತು ವೈಸಿಸಿಯ ಮುಖ್ಯಸ್ಥ ಎಂ.ಬಿ.ಜಯರಾಮ್, ನಟಿ ರಾಜೇಶ್ವರಿ, ಕೆಎಸ್ಸಾರ್ಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಟಿ.ಎಸ್.ಲತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News