ಕೇಂದ್ರ ಸರಕಾರದ ಜಿಎಸ್‌ಟಿ ವಿರೋಧಿಸಿ ಹೇ ರಾಮ್ ರಾಷ್ಟ್ರೀಯ ಚಳುವಳಿ

Update: 2018-07-01 15:03 GMT

ಬೆಂಗಳೂರು, ಜು. 1: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಜಿಯಾ ತೆರಿಗೆ ಮಾದರಿಯಲ್ಲಿ ಗ್ರಾಮೀಣ ಉತ್ಪಾದಕತೆಯ ಮೇಲೆ ಜಿಎಸ್ಪಿ ವಿಧಿಸಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಪುರಭವನದ ಮುಂಬಾಗ ಗ್ರಾಮ ಸೇವಾ ಸಂಘದಿಂದ ಜಿಎಸ್‌ಟಿ ಜಾರಿಯಾಗಿ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೈಉತ್ಪನ್ನಗಳಿಗೆ ಕರಾಳ ದಿನವನ್ನಾಗಿ ‘ಹೇ ರಾಮ್’ ರಾಷ್ಟ್ರೀಯ ಚಳುವಳಿಗೆ ಚಾಲನೆ ನೀಡಿ, ಅವರು ಮಾತನಾಡಿದರು.

ಕೇಂದ್ರ ಸರಕಾರ ಗ್ರಾಮೀಣ ಕೈ ಉತ್ಪನ್ನಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಿರುವುದರಿಂದ ಬಡವರು ಹಳ್ಳಿಗಳಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಗರ ಪ್ರದೇಶಗಳಿಗೆ ಗುಳೇ ಹೋಗುತ್ತಿದ್ದಾರೆ. ಇದು 1947ರಲ್ಲಿ ಮುಹಮದ್ ಅಲಿ ಜಿನ್ಹಾ ದೇಶ ಒಡೆದ ಪರಿಸ್ಥಿತಿಯನ್ನು ನೆನಪಿಸುತ್ತಿದೆ. ಬಡವರ ಉತ್ಪಾದಕತೆಯ ಮೇಲೆ ಹೇರಿರುವ ಜಿಎಸ್‌ಟಿ ತೆರಿಗೆಯನ್ನು ಈ ಕೂಡಲೆ ಶೂನ್ಯ ತೆರಿಗೆಗೆ ಇಳಿಸಬೇಕೆಂದು ಆಗ್ರಹಿಸಿದರು.

ಕೃಷಿ ವರಮಾನ ಹೆಚ್ಚಿಸುವಂತಹ ಸ್ವಾಮಿನಾಥನ್ ಸಮಿತಿ ವರದಿ ಜಾರಿ ಸೇರಿದಂತೆ ನಮ್ಮ ಅನೇಕ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು. ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ಅಂಬಾನಿ, ಅದಾನಿಗಳ ಖಜಾನೆಗಳನ್ನು ತುಂಬಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ದುರ್ಬಳಕೆಗೆ ಬಿಡುವುದಿಲ್ಲ: ಗ್ರಾಮೀಣ ಪ್ರದೇಶದ ಯುವಕರು ಸೇರಿ, ಕೈ ಉತ್ಪಾದಕರು, ಗುಡಿ ಕೈಗಾರಿಕೆಯಲ್ಲಿ ತೊಡಗಿಸಿಕೊಂಡು ಸುಂದರವಾದ ಬದುಕನ್ನು ಕಟ್ಟಿಕೊಂಡರೆ ಮಾತ್ರ ರಾಮರಾಜ್ಯ ಸ್ಥಾಪನೆಯಾಗಬಲ್ಲದು ಎಂದ ಅವರು,  ನಾವು ರಾಮನ ಹೆಸರನ್ನು ದುರ್ಬಳಕೆ ಮಾಡಲು ಬಿಡುವುದಿಲ್ಲ. ಸೀತೆ ಪ್ರಕೃತಿಯ ಪ್ರತೀಕ, ಗ್ರಾಮೀಣಾಭಿವೃದ್ದಿಯಿಂದ ಸುಂದರ ಪ್ರಕೃತಿ ಪ್ರತೀಕ. ಇದನ್ನೆ ನಾಶಮಾಡಿ ರಾಮನ ಹೆಸರು ಹೇಳುವವರು ಅಧಿಕಾರ ಬಿಟ್ಟು ತೊಲಗಬೇಕು ಎಂದು ಪ್ರಸನ್ನ ತಿಳಿಸಿದರು.

ಸಿಪಿಐಎಮ್ನ ಕೆ.ಎನ್.ನಾಗರಾಜ್ ಮಾತನಾಡಿ, ಪಾರಂಪರಿಕವಾಗಿ ಬಂದಿರುವ ಗ್ರಾಮೀಣ ಪ್ರದೇಶಗಳ ಕೌಶಲ್ಯಕ್ಕೆ ಉತ್ತೇಜನ ಸಿಗುತ್ತಿಲ್ಲ. ಬಂಡವಾಳಶಾಹಿಗಳ ಹಿತಾಸಕ್ತಿಗೋಸ್ಕರ ಕೋಮುವಾದಕ್ಕೆ ಉತ್ತೇಜನ ನೀಡುವುದು ಹಿಂದೂ ಧರ್ಮದ ಸಂರಕ್ಷಣೆಯಲ್ಲ ಎಂದರು.

ಹೋರಾಟಗಾರ್ತಿ ಕವಿತಾ ಕುರಗಂಟಿ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‌ಟಿ ಕಾನೂನು ಬಾಹಿರವಾಗಿದೆ ಎಂದು ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ವಿದೇಶಿ ಕಂಪೆನಿಗಳಿಗೆ ಒಪ್ಪಂದ ಮಾಡಿಕೊಂಡು ಕೇಂದ್ರಿಕೃತ ವ್ಯವಸ್ಥೆಯನ್ನು ಸೃಷ್ಟಿಸಿದೆ. ಕೃಷಿ ಕ್ಷೇತ್ರದಲ್ಲಿ ಸಾವಯವ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ದೃಢೀಕರಣ ಕಡ್ಡಾಯಗೊಳಿಸಿ ನಿಯಂತ್ರಣವನ್ನು ಸಾಧಿಸಲು ಹೊರಟಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಬಹುಭಾಷಾ ಚಿತ್ರನಟ ಕಿಶೋರ್, ಸಾಮಾಜಿಕ ಹೋರಾಟಗಾರ ಸಿ.ಯತಿರಾಜು, ಡಾ.ಎ.ಆರ್.ವಾಸವಿ, ಗೋಪಿಕೃಷ್ಣ, ಜಿಎಸ್ ಆರ್. ಕೃಷ್ಣನ್, ವಿಶಾಲ, ನಾಗರಾಜ ಮೂರ್ತಿ, ಶಾಮಲ ದೇವಿ, ಸನತ್ ಕುಮಾರ್ ಸೇರಿ ಗ್ರಾಮ ಸೇವಾ ಸಂಘದ ಕಾರ್ಯಕರ್ತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News