ಕಾರ್ಮಿಕರ ಹಿತಾಸಕ್ತಿ ಕಡೆಗಣಿಸಲಾಗುತ್ತಿದೆ: ಬೆಂಗಳೂರು ವಿ.ವಿ ಕುಲಪತಿ ಡಾ.ಕೆ.ಆರ್ ವೇಣುಗೋಪಾಲ್
ಬೆಂಗಳೂರು, ಜು.1: ವಿಶ್ವದ ಎಲ್ಲ ದೇಶಗಳು ಭಾರತದ ಮಾರುಕಟ್ಟೆ ಉಪಯೋಗಿಸಿಕೊಂಡು, ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿವೆ ಎಂದು ಬೆಂಗಳೂರು ವಿ.ವಿ ಕುಲಪತಿ ಡಾ.ಕೆ.ಆರ್ ವೇಣುಗೋಪಾಲ್ ದೂರಿದ್ದಾರೆ.
ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ‘ಜಾಗತೀಕರಣ ಪುನರ್‌ವಿಮರ್ಶೆ ಹಾಗೂ ಆರ್ಥಿಕ ಅಭಿವೃದ್ಧಿ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಭಾರತ ಕಾರ್ಮಿಕರ ದೇಶವಾಗಿದೆ. ಎಲ್ಲ ದೇಶಗಳು ನಮ್ಮ ಕಾರ್ಮಿಕರ ಕೌಶಲ್ಯವನ್ನು ಅಗತ್ಯವಾಗಿ ಬಳಸಿಕೊಳ್ಳುತ್ತವೆ. ಆದರೆ, ಅವರ ಹಿತಾಸಕ್ತಿ ಬೇಕಿಲ್ಲ ಎಂದರು.
ಕಳೆದ 25 ವರ್ಷಗಳಲ್ಲಿ ಜಗತ್ತು ಬದಲಾವಣೆ ಕಂಡಿದೆ. ಭಾರತ ಶಿಕ್ಷಣ ಪದ್ಧತಿ, ಕೌಶಲ್ಯಾಭಿವೃದ್ಧಿಯಿಂದ ಕೂಡಿದೆ. ಜನರು ಕೂಡಾ ಉತ್ಕಷ್ಟ ಮಟ್ಟದಿಂದ ಕೂಡಿದ ವಸ್ತುಗಳನ್ನು ನಿರೀಕ್ಷಿಸುತ್ತಾರೆ. ಹೀಗಾಗಿ, ಉತ್ಪನ್ನಗಳ ತಯಾರಿಕೆಗೆ ಮುಂಚೆ ಅವುಗಳ ರೂಪುರೇಷೆಗಳು ಜಾಗತಿಕ ಮಟ್ಟದಲ್ಲಿ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.
ಎಸ್‌ಟಿಪಿಐ ನಿರ್ದೇಶಕ ಶೈಲೇಂದ್ರ ಕುಮಾರ್ ತ್ಯಾಗಿ ಮಾತನಾಡಿ, ತಾಂತ್ರಿಕತೆಯಲ್ಲಿ ದೇಶ ಮುಂದಿದೆ. ಸಾಫ್ಟ್‌ವೇರ್, ಹಾರ್ಡ್‌ವೇರ್‌ನಲ್ಲೂ ಕೂಡ ಮುಂಚೂಣೆಯಲ್ಲಿದ್ದು, ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. 67 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಾಫ್ಟ್‌ವೇರ್ ಕಂಪನಿಗಳು ತಲೆ ಎತ್ತಿವೆ. ಹೀಗಾಗಿ, 2040ರ ವೇಳೆಗೆ ತಂತ್ರಜ್ಞಾನ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಚ್ಚು ಮುನ್ನಡೆ ಸಾಧಿಸಬಹುದಾಗಿದೆ ಎಂದರು.
ಸಾಮಾಜಿಕ ಜಾಲತಾಣವು ಕೂಡ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿದ್ದು, ಹೊಸ ತಂತ್ರಜ್ಞಾನದಿಂದ ತಯಾರಿಸಿದ ಉತ್ಪನ್ನಗಳತ್ತ ದಾಪುಗಾಲಿಡುತ್ತಿದೆ ಎಂದ ಅವರು, ಕೃಷಿ, ಸೋಲಾರ್ ಎನರ್ಜಿ ಆವಿಷ್ಕಾರ , ವಿದ್ಯುತ್ ಹಾಗೂ ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡಬೇಕಿದೆ. ನಮ್ಮ ದೇಶ ಅಭಿವೃದ್ದಿಪಥದತ್ತ ಸಾಗುತ್ತಿದ್ದು, ಮುಂದಿನ ಪೀಳಿಗೆಗೆ ಅತ್ಯಾಧುನಿಕ ತಂತ್ರಜ್ಞಾನ ಬರುವ ದಿನಗಳು ದೂರವಿಲ್ಲ ಎಂದು ತಿಳಿಸಿದರು.