ಭಾವನಾತ್ಮಕ ಪ್ರತಿಕ್ರಿಯೆ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ ಪತಿ ಸ್ವರಾಜ್ ಕೌಶಲ್ ಹೇಳಿದ್ದೇನು?

Update: 2018-07-02 09:40 GMT

ಹೊಸದಿಲ್ಲಿ, ಜು.7: ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ದೊರಕಿಸಿ ಕೊಡಲು ಸಹಾಯ ಮಾಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ತಮ್ಮದೇ ಪಕ್ಷದ ಬೆಂಬಲಿಗರಿಂದ ಟ್ರೋಲ್ ಗೊಳಗಾಗಿದ್ದರು. ಕೆಲವರು ಈ ಬಗ್ಗೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ರಿಗೆ ಟ್ವೀಟ್ ಮಾಡಿ, "ನೀವೇಕೆ ಆಕೆಗೆ ಹೊಡೆಯಬಾರದು" ಎಂದೂ ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಷ್ಮಾರ ಪತಿ, ಮಿಜೋರಾಂ ರಾಜ್ಯದ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ ಅವರು, ಇಂತಹ ಟ್ವೀಟ್ ಗಳಿಂದ ನನಗೆ ನೋವುಂಟಾಗಿದೆ ಎಂದಿದ್ದು, ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

"ನಿಮ್ಮ  ಮಾತುಗಳು ನಮಗೆ ಸಹಿಸಲಸಾಧ್ಯವಾದ ನೋವು ನೀಡಿದೆ. ನನ್ನ ತಾಯಿ 1993ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟರು, ಆಗ ಸುಷ್ಮಾ ಸಂಸದೆ ಹಾಗೂ ಮಾಜಿ ಶಿಕ್ಷಣ ಸಚಿವೆಯಾಗಿದ್ದರು. ಆಕೆ ಆಸ್ಪತ್ರೆಯಲ್ಲಿ ಒಂದು ವರ್ಷ ಇದ್ದರು. ತಾಯಿಯನ್ನು ನೋಡಿಕೊಳ್ಳಲು ಯಾರನ್ನೂ ನೇಮಿಸಲು ಒಪ್ಪದೆ ಆಕೆ ನನ್ನ ತಾಯಿಯನ್ನು ಕೊನೆ ತನಕ ತಾನೇ ನೋಡಿಕೊಂಡಿದ್ದರು'' ಎಂದು ಸ್ವರಾಜ್ ಕೌಶಲ್ ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿ, "ಆಕೆಗೆ ಕುಟುಂಬದ ಮೇಲೆ ಅದೆಷ್ಟು ನಿಷ್ಠೆಯಿದೆ. ನನ್ನ ತಂದೆಯ ಬಯಕೆಯಂತೆ ಆಕೆಯೇ ಅವರ ಚಿತೆಗೆ ಬೆಂಕಿ ಹಚ್ಚಿದ್ದಾರೆ. ಆಕೆಗೆ ಇಂತಹ ಪದಗಳನ್ನು ಉಪಯೋಗಿಸಬೇಡಿ. ಆಕೆಯ ಜೀವಕ್ಕಿಂತ ಹೆಚ್ಚಿನದ್ದೇನನ್ನೂ ನಾವು ಬೇಡುವುದಿಲ್ಲ. ನಿಮ್ಮ ಪತ್ನಿಗೆ ನನ್ನ  ಶುಭಾಶಯ ತಿಳಿಸಿ,'' ಎಂದಿದ್ದಾರೆ.

ಸ್ವರಾಜ್ ಕೌಶಲ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ  ದಿಲ್ಲಿ ಮುಖ್ಯಮಂತ್ರಿ ಅರವಿಂದ್  ಕೇಜ್ರಿವಾಲ್ ``ಸರ್, ಈ ಜನರಿಗೆ ವಿವರಣೆ ನೀಡಲು ಹೋಗಬೇಡಿ. ಅವರನ್ನು ಯಾರು ನಿಯಂತ್ರಿಸುತ್ತಿದ್ದಾರೆ ಹಾಗೂ  ಈ ಟ್ವೀಟ್ ಗಳು ಎಲ್ಲಿಂದ ಬರುತ್ತದೆಯೆಂದು ಎಲ್ಲರಿಗೂ  ತಿಳಿದಿದೆ. ಇದು ರಾಜಕೀಯ, ಆದರೆ ಅದು ಇಷ್ಟು ಕೊಳಕಾಗಿದೆ, ನಿಮ್ಮ ಕುಟುಂಬಕ್ಕೆ ನಮ್ಮ ಶುಭಾಶಯಗಳು,'' ಎಂದು ಟ್ವೀಟ್ ಮಾಡಿದ್ದಾರೆ.                                          

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News