ಕೊಲೆಸ್ಟ್ರಾಲ್ ತಗ್ಗಿಸುವ ಔಷಧಿಗಳನ್ನು ಸೇವಿಸುತ್ತಿದ್ದೀರಾ?: ಹಾಗಿದ್ದರೆ ಇದು ನಿಮ್ಮ ಗಮನದಲ್ಲಿರಲಿ

Update: 2018-07-02 10:38 GMT

ಶರೀರದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಔಷಧಿಗಳನ್ನು ನೀವು ಸೇವಿಸುತ್ತಿದ್ದರೆ ಈ ಮಹತ್ವದ ಮಾಹಿತಿಗಳು ನಿಮಗೆ ತಿಳಿದಿರಬೇಕು. ಸ್ಟಾಟಿನ್‌ಗಳು ಹೃದಯ ರಕ್ತನಾಳ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳಿಗೆ ವೈದ್ಯರು ಶಿಫಾರಸು ಮಾಡುವ ಅತ್ಯಂತ ಸಾಮಾನ್ಯ ಔಷಧಿಗಳಾಗಿವೆ. ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುವ ಅಟೋರ್ವಾಸ್ಟಾಟಿನ್, ಫುವಾಸ್ಟಾಟಿನ್, ಐವೋವಾಸ್ಟಾಟಿನ್ ಇತ್ಯಾದಿ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

► ಸಣ್ಣ ಡೋಸ್-ಉತ್ತಮ ಪರಿಣಾಮ

ಸ್ಟಾಟಿನ್‌ಗಳನ್ನು ಸುಮಾರು 20 ಮಿ.ಗ್ರಾಮ್‌ನಂತಹ ಸಣ್ಣ ಡೋಸ್‌ಗಳಲ್ಲಿ ಸೇವಿಸಿದರೆ ಉತ್ತಮ ಪರಿಣಾಮ ನೀಡುತ್ತವೆ ಎನ್ನುವುದು ತಜ್ಞರ ಅಭಿಮತ. ಒಂದು ಸಣ್ಣ ಡೋಸ್ ಕೊಲೆಸ್ಟ್ರಾಲ್ ಮಟ್ಟವನ್ನು ಶೇ.25ರಷ್ಟು ತಗ್ಗಿಸುತ್ತದೆ. ಆದರೆ ಡೊಡ್ಡ ಡೋಸ್‌ಗಳಿಂದ ಹೆಚ್ಚಿನ ಲಾಭವಿಲ್ಲ. ಡೋಸ್‌ನ್ನು ಇಮ್ಮಡಿಗೊಳಿಸಿದರೆ ಅದು ಕೊಲೆಸ್ಟ್ರಾಲ್‌ನ್ನು ಇನ್ನೂ ಶೇ.6ರಷ್ಟು ಕಡಿಮೆ ಮಾಡುತ್ತದೆ,ಅಷ್ಟೇ. ಅಲ್ಲದೆ ಹೆಚ್ಚಿನ ಡೋಸ್‌ಗಳು ಅನಗತ್ಯ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ.

► ಆರೋಗ್ಯವಂತರೂ ಕೂಡ ಸೇವಿಸಬಹುದು

ಹೃದಯದ ಸಮಸ್ಯೆಗಳಿರುವ ಹೆಚ್ಚಿನ ರೋಗಿಗಳು ಸ್ಟಾಟಿನ್‌ಗಳನ್ನು ಸೇವಿಸುತ್ತಾರಾದರೂ ಹಲವೊಮ್ಮೆ ಹೃದಯ ಸಂಬಂಧಿತ ಕಾಯಿಲೆಗಳಿಗೆ ಗುರಿಯಾಗಿರುವ ಅಪಾಯವನ್ನು ಹೊಂದಿರುವ,ಆದರೆ ಹಾಲಿ ಆರೋಗ್ಯವಂತ ವ್ಯಕ್ತಿಗಳಿಗೂ ವೈದ್ಯರು ಈ ಔಷಧಿಗಳನ್ನು ಶಿಫಾರಸು ಮಾಡುತ್ತಾರೆ. ಜಂಕ್ ಪುಡ್‌ಗಳನ್ನು ಹೆಚ್ಚಾಗಿ ತಿನ್ನುವ,ಧೂಮ್ರಪಾನದ ಚಟವಿರುವ ಅಥವಾ ಕುಟುಂಬದಲ್ಲಿ ಹೃದ್ರೋಗಗಳ ಇತಿಹಾಸವನ್ನು ಹೊಂದಿರುವ ವ್ಯಕ್ತಿಗಳು ಈ ವರ್ಗದಲ್ಲಿ ಸೇರುತ್ತಾರೆ.

► ಅವು ಸ್ನಾಯುಗಳ ನಿಶ್ಶಕ್ತಿಗೆ ಕಾರಣವಾಗಬಹುದು

ಸ್ನಾಯುಗಳ ನಿಶ್ಶಕ್ತಿ ಸ್ಟಾಟಿನ್‌ಗಳೊಂದಿಗೆ ಗುರುತಿಸಿಕೊಂಡಿರುವ ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚಿನ ರೋಗಿಗಳಿಗೆ ಈ ಅಡ್ಡ ಪರಿಣಾಮದ ಅನುಭವವಾಗುವುದಿಲ್ಲ. ಸ್ಟಾಟಿನ್ ಸೇವನೆಯನ್ನು ಆರಂಭಿಸಿದ ಅಥವಾ ಡೋಸೇಜ್‌ನ್ನು ಹೆಚ್ಚಿಸಿದ ಬಳಿಕ ವ್ಯಕ್ತಿಯಲ್ಲಿ ದಿಢೀರ್ ಜಡತ್ವ ಮತ್ತು ಶರೀರದಲ್ಲಿ ನೋವು ಕಾಣಿಸಿಕೊಂಡರೆ ಅದನ್ನು ವೈದ್ಯರ ಗಮನಕ್ಕೆ ತರುವುದು ಅಗತ್ಯವಾಗುತ್ತದೆ. ಆದರೆ ಎಲ್ಲ ಸ್ಟಾಟಿನ್‌ಗಳೂ ಸ್ನಾಯು ಸಮಸ್ಯೆಗಳನ್ನುಂಟು ಮಾಡುವುದಿಲ್ಲ ಎನ್ನುವುದನ್ನು ಸಂಶೋಧನಾ ಅಧ್ಯಯನಗಳು ತೋರಿಸಿವೆ. ರೋಸುವಸ್ಟಾಟಿನ್ ಸುರಕ್ಷಿತ ಸ್ಟಾಟಿನ್‌ಗಳಲ್ಲೊಂದಾಗಿದೆ.

► ಅವು ವಿಟಾಮಿನ್ ಡಿ ಮಟ್ಟವನ್ನು ತಗ್ಗಿಸಬಹುದು

ವಾಸ್ತವದಲ್ಲಿ,ವಿಟಾಮಿನ್ ಡಿ ಮಟ್ಟವು ಕಡಿಮೆಯಾದರೆ ಅದು ಸ್ಟಾಟಿನ್‌ಗಳಿಗೆ ಸಂಬಂಧಿಸಿದ ಸ್ನಾಯು ಸಮಸ್ಯೆಗಳಿಗೆ ಕಾರಣವಾಗುವ ಹೆಚ್ಚಿನ ಸಾಧ್ಯತೆಗಳಿವೆ. ಮೊದಲೇ ವಿಟಾಮಿನ್ ಡಿ ಕೊರತೆಯುಳ್ಳ ವ್ಯಕ್ತಿಗಳು ಸ್ಟಾಟಿನ್‌ಗಳ ಸೇವನೆಯ ಬಳಿಕ ಸ್ನಾಯು ನಿಶ್ಶಕ್ತಿಯ ಬಗ್ಗೆ ದೂರಿಕೊಳ್ಳುವುದು ಹೆಚ್ಚು. ಹೀಗಾಗಿ ವಿಟಾಮಿನ್ ಡಿ ಪೂರಕಗಳ ಸೇವನೆಯಿಂದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಈ ಬಗ್ಗೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಅಗತ್ಯ.

► ಜ್ಞಾಪಕ ಶಕ್ತಿ ನಷ್ಟಕ್ಕೂ ಸ್ಟಾಟಿನ್‌ಗಳಿಗೂ ನಂಟು?

ಸ್ಟಾಟಿನ್‌ಗಳನ್ನು ಸೇವಿಸಿದ ಕೆಲವರು ಅಸ್ಪಷ್ಟ ಚಿಂತನೆ ಮತ್ತು ಗಲಿಬಿಲಿಯಂತಹ ಸಮಸ್ಯೆಗಳ ಬಗ್ಗೆ ದೂರಿಕೊಂಡ ವರದಿಗಳಿವೆ ಎಂದು ಅಮರಿಕದ ಫುಡ್ ಆ್ಯಂಡ್ ಡ್ರಗ್ಸ್ ಅಡ್ಮಿನಿಸ್ಟ್ರೇಷನ್ ಎಚ್ಚರಿಕೆ ನೀಡಿದೆ. ಸ್ಟಾಟಿನ್ ಬಳಕೆಯಿಂದ ಜ್ಞಾಪಕ ಶಕ್ತಿಯ ನಷ್ಟವುಂಟಾಗುತ್ತದೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ ಹೆಚ್ಚಿನ ವಿಶ್ವಾಸಾರ್ಹ ಅಧ್ಯಯನಗಳು ಇಂತಹ ಅಡ್ಡ ಪರಿಣಾಮಗಳುಂಟಾಗುತ್ತವೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿವೆ. ಆದಾಗ್ಯೂ ಸ್ಟಾಟಿನ್ ಸೇವನೆಯ ಬಳಿಕ ಮನಸ್ಸು ಗೊಂದಲಕ್ಕೆ ಸಿಲುಕಿದಂತೆ ಅಥವಾ ಜ್ಞಾಪಕ ಶಕ್ತಿ ಕಡಿಮೆಯಾದಂತೆ ಅನಿಸಿದರೆ ವೈದ್ಯರೊಂದಿಗೆ ಸಮಾಲೋಚಿಸುವುದದು ಅಗತ್ಯವಾಗುತ್ತದೆ.

► ಸಾಮಾನ್ಯವಾಗಿ ಯಕೃತ್ತಿಗೆ ಯಾವುದೇ ಹಾನಿಯಿಲ್ಲ

 ಕೊಲೆಸ್ಟ್ರಾಲ್ ಯಕೃತ್ತಿನಲ್ಲಿ ಉತ್ಪಾದನೆಯಾಗುವುದರಿಂದ ಸ್ಟಾಟಿನ್‌ಗಳ ಸೇವನೆಯು ಅದಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಸ್ಟಾಟಿನ್ ಸೇವನೆಯಿಂದ ಯಕೃತ್ತಿನ ಸಮಸ್ಯೆಗಳುಂಟಾಗುವುದು ಅಪರೂಪ. ಕೆಲವು ರೋಗಿಗಳಿಗೆ ಯಕೃತ್ತಿನ ನಿಯಮಿತ ತಪಾಸಣೆಗೆ ವೈದ್ಯರು ಶಿಫಾರಸು ಮಾಡಬಹುದಾದರೂ ಹೆಚ್ಚಿನಂಶ ಸ್ಟಾಟಿನ್‌ಗಳಿಂದ ಯಕೃತ್ತಿಗೆ ಯಾವುದೇ ಹಾನಿಯಾಗುವುದಿಲ್ಲ.

► ಅವುಗಳಿಂದ ಇತರ ಲಾಭಗಳೂ ಇವೆ

ಸ್ಟಾಟಿನ್‌ಗಳನ್ನು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಔಷಧಿಗಳನ್ನಾಗಿ ಬಳಸಲಾಗುತ್ತಿದೆಯಾದರೂ ಅವು ರಕ್ತನಾಳಗಳಲ್ಲಿ ಪಾಚಿಯು ಸಂಗ್ರಹಗೊಂಡು ರಕ್ತದ ಹರಿವಿಗೆ ತಡೆಯನ್ನುಂಟು ಮಾಡುವುದನ್ನು ನಿವಾರಿಸುವುದು ಸೇರಿದಂತೆ ಇನ್ನೂ ಹಲವಾರು ಲಾಭಗಳನ್ನು ನೀಡುತ್ತವೆ. ಇದೇ ಕಾರಣದಿಂದ ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಸ್ಟಾಟಿನ್‌ನ್ನು ನೀಡಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News