ಬಿಬಿಎಂಪಿಯನ್ನು ವಿಭಜನೆ ಮಾಡಲು ಬಿಡುವುದಿಲ್ಲ: ವಾಟಾಳ್ ನಾಗರಾಜ್
ಬೆಂಗಳೂರು, ಜು.2: ಬಿ.ಎಸ್.ಪಾಟೀಲ್ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದಿಲ್ಲಿ ಹೇಳಿದ್ದಾರೆ.
ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಮೇಯರ್ ಸಂಪತ್‌ರಾಜ್ ಅವರನ್ನು ಭೇಟಿ ಮಾಡಿ ಬಿಬಿಎಂಪಿ ವಿಭಜನೆ ಬೇಡವೆಂದು ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದ ರಾಜಧಾನಿ ಬೆಂಗಳೂರು ನಾಡ ಪ್ರಭು ಕೆಂಪೇಗೌಡರ ಕನಸಿನ ಊರಾಗಿದೆ. ಅಷ್ಟೇ ಅಲ್ಲದೆ, ವಿಶ್ವದೆಲ್ಲೆಡೆ ಬೆಂಗಳೂರು ಹೆಸರು ಚಿರಪರಿಚಿತ. ಹೀಗಿರುವಾಗ, ಇದನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.
ರಾಜ್ಯ ಸರಕಾರಕ್ಕೆ ಸಲ್ಲಿಕೆಯಾಗಿರುವ ಬಿ.ಎಸ್.ಪಾಟೀಲ್ ವರದಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಬಿಬಿಎಂಪಿಗೆ ಮೇಯರ್, ಉಪಮೇಯರ್ ಆಯ್ಕೆಮಾಡಿ 5 ವರ್ಷ ಆಡಳಿತ ನಡೆಸುವುದು ಸರಿಯಾಗಿದೆ. ಆದರೆ, 400 ವಾರ್ಡ್ ರಚಿಸಿ, 4 ಜನ ಮೇಯರ್‌ಗಳನ್ನು ನೇಮಕ ಮಾಡಿ ಆಡಳಿತ ನಡೆಸುವುದು ಸರಿಯಿಲ್ಲ. ಹೀಗಾಗಿ, ಈ ವರದಿಯನ್ನು ತಿರಸ್ಕರಿಸಬೇಕೆಂದು ಎಂದು ಒತ್ತಾಯಿಸಿದರು.
ಬಿಬಿಎಂಪಿಯನ್ನು ವಿಭಜನೆ ಮಾಡುವ ಬದಲು ನಾಲ್ಕು ಹಂತದಲ್ಲಿ ಉಪ ಆಯುಕ್ತರುಗಳನ್ನು ನಿಯೋಜಿಸಿ ಆಡಳಿತ ನಡೆಸಿ. ಜೊತೆಗೆ 2 ಉಪಮೇಯರ್ ನೇಮಕ ಮಾಡಿ, ಮೇಯರ್‌ಗೆ ಕ್ಯಾಬಿನೇಟ್ ದರ್ಜೆಯ ಸ್ಥಾನಮಾನ ನೀಡಬೇಕೆಂದು ಸಲಹೆ ನೀಡಿದರು. ರಾಜ್ಯ ಸರಕಾರ ಬಿಬಿಎಂಪಿಯನ್ನು ವಿಭಜನೆ ಮಾಡಲು ಮುಂದಾದರೆ, ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ವಾಟಾಳ್ ಹೇಳಿದರು.
ಹೋರಾಟಗಾರ ವಾಟಾಳ್ ನಾಗರಾಜ್ ಅವರ ಮನವಿಯನ್ನು ಸ್ವೀಕರಿಸಿದ್ದೇವೆ. ವರದಿ ಬಿಬಿಎಂಪಿ ಕೈಸೇರಿದ ಮೇಲೆ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಸಿ, ನಿರ್ಣಯ ಕೈಗೊಂಡು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು’
-ಆರ್. ಸಂಪತ್‌ರಾಜ್, ಬಿಬಿಎಂಪಿ ಮೇಯರ್