ಖಾಸಗಿ ಕೃಷಿ ಕಾಲೇಜುಗಳ ನಿಷೇಧಕ್ಕೆ ಬಿಗಿಪಟ್ಟು
ಬೆಂಗಳೂರು, ಜು. 2: ರಾಜ್ಯ ಸರಕಾರವೂ ಈ ಕೂಡಲೇ ಕೃಷಿ ವಿಶ್ವವಿದ್ಯಾಲಯದ 1963ರ ಕಾಯ್ದೆಗೆ ತಿದ್ದುಪಡಿ ಮಾಡಿ, ಖಾಸಗಿ ಕೃಷಿ ಕಾಲೇಜುಗಳನ್ನು ನಿಷೇಧಿಸಬೇಕೆಂದು ಕೃಷಿ, ತೋಟಗಾರಿಕಾ ಹಾಗೂ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಿಗಿಪಟ್ಟು ಹಿಡಿದಿದ್ದಾರೆ.
ಸೋಮವಾರ ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ಇಲ್ಲಿನ ಸ್ವಾತಂತ್ರ ಉದ್ಯಾನವನ ಮೈದಾನದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ವಿದ್ಯಾರ್ಥಿಗಳು, ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಯಾದರೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮಾರಕವಾಗಲಿದೆ ಎಂದು ಆರೋಪಿಸಿದರು.
2016ರಲ್ಲಿ ರಾಜ್ಯ ಸರಕಾರವು ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅನುಮತಿ ಮತ್ತು ಮಾನ್ಯತೆ ನೀಡಲು ನಿರ್ಧರಿಸಿತ್ತು. ಈ ನಿರ್ಧಾರ ಕೈಬಿಡುವಂತೆ ಆಗ್ರಹಿಸಿ ಕೃಷಿ ವಿವಿ ವಿದ್ಯಾರ್ಥಿಗಳು ಹೋರಾಟ ನಡೆಸಿದ್ದರು. ಬಳಿಕ, ತನ್ನ ನಿರ್ಧಾರದಿಂದ ಸರಕಾರ ಹಿಂದೆ ಸರಿದಿತ್ತು. ಇದೀಗ ಪುನಃ ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಲು ಮುಂದಾಗಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಹೇಳಿದರು.
1963ರಲ್ಲಿ ಕೃಷಿ ವಿದ್ಯಾಲಯಗಳ ಕಾಯ್ದೆ ಜಾರಿಗೆ ಬಂದಿದ್ದು, ಬೆಂಗಳೂರು, ಧಾರವಾಡ, ರಾಯಚೂರು, ಶಿವಮೊಗ್ಗ, ಬಾಗಲಕೋಟೆ ಮತ್ತು ಬೀದರ್ ಕೃಷಿ ಮತ್ತು ಪಶುಸಂಗೋಪನೆಯ ವಿವಿಗಳು ಅಸ್ತಿತ್ವಕ್ಕೆ ಬಂದಿವೆ. ವಿಶ್ವವಿದ್ಯಾಲಯಗಳು ಹಲವು ತಾಂತ್ರಿಕತೆಯನ್ನು ರೈತರಿಗೆ ನೀಡುತ್ತ ಬಂದಿವೆ. ಇದಲ್ಲದೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಡಿ ಕಾರ್ಯ ನಿರ್ವಹಿಸುತ್ತಿರುವ ಭಾರತದ ವಿವಿಗಳಲ್ಲೇ ಕರ್ನಾಟಕದ ವಿವಿಗಳು ಹೆಸರು ವಾಸಿಯಾಗಿವೆ ಎಂದರು.
ಬೆಂಗಳೂರು ಕೃಷಿ ವಿ.ವಿ ಮತ್ತು ಇತರ ವಿ.ವಿಗಳು ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅರ್ಜಿ ಆಹ್ವಾನಿಸಿವೆ. ಬೆಂಗಳೂರಿನ ರೈ ಟೆಕ್ ವಿಶ್ವವಿದ್ಯಾಲಯವು ತನ್ನಲ್ಲಿ ಸ್ನಾತಕ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ (ಐಸಿಎಆರ್) ಮಾನ್ಯತೆ ಪಡೆದ ವಿ.ವಿಗಳಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶ ಪಡೆಯಲು ಅನುಮತಿ ನೀಡುವ ಬಗ್ಗೆ ನ್ಯಾಯಾಲಯ ಮತ್ತು ಸರಕಾರದ ಮೊರೆ ಹೋಗಿದೆ ಎಂದು ಪ್ರತಿಭಟನಾಕಾರರು ಖಂಡಿಸಿದರು.
ರೈ ವಿವಿ ಬಂದ್ ಮಾಡಿ: ರೈ ವಿ.ವಿಯು ದೊಡ್ಡಬಳ್ಳಾಪುರದಲ್ಲಿ ಮಾನ್ಯತೆ ಇಲ್ಲದ ಕಾಲೇಜು ಆರಂಭಿಸಿದೆ. ಆ ವಿವಿಯು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಕೃಷಿ ವಿ.ವಿಗಳ ಮಾನ್ಯತೆ ಪಡೆಯದೆ ನೀಡುತ್ತಿರುವ ಪದವಿಗಳು ಕೃಷಿ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನರ್ಹವಾಗಿವೆ. ಈ ಸಂಬಂಧ ವಿದ್ಯಾರ್ಥಿಗಳು ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಧರಣಿನಿರತರು ಆರೋಪಿಸಿದರು.
ಸರಕಾರ ರೈ ವಿವಿಯ ಮನವಿಗೆ ಸಮ್ಮತಿಸಿದರೆ ಐಸಿಎಆರ್ ಮಾನ್ಯತೆಯ ವಿ.ವಿಗಳಲ್ಲಿ ಹೆಚ್ಚಿನ ಅಂಕ ಗಳಿಸಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವ್ಯತ್ತಿರಿಕ್ತ ಪರಿಣಾಮ ಬೀರುತ್ತದೆ. ಆದ ಕಾರಣ ಕೃಷಿ ವಿ.ವಿ ಕಾಯ್ದೆಗೆ ತಿದ್ದುಪಡಿ ತಂದು ಖಾಸಗಿ ಕೃಷಿ ಕಾಲೇಜು ಸ್ಥಾಪನೆಗೆ ಅನುಮತಿ ನೀಡುವುದನ್ನು ತಡೆಯಬೇಕು. ಅದೇ ರೀತಿ, ಕಾನೂನು ಬಾಹಿರ ಪದವಿ ನೀಡುತ್ತಿರುವ ರೈ ವಿ.ವಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ರೈ ವಿ.ವಿ ವಿದ್ಯಾರ್ಥಿಗಳಿಗೆ ಕೃಷಿ ವಿ.ವಿಯಲ್ಲಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಕಾನೂನು ಬದ್ಧ ಭ್ರಷ್ಟಾಚಾರ: ಚೇತನ್
ರಾಜ್ಯ ಸರಕಾರವೂ ಖಾಸಗಿ ಕೃಷಿ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಿದ್ದೇ ಆದರೆ, ಒಂದು ರೀತಿಯಲ್ಲಿ ಕಾನೂನು ಬದ್ಧ ಭ್ರಷ್ಟಾಚಾರ ಮಾಡಿದಂತಾಗುತ್ತದೆ ಎಂದು ಹೋರಾಟಗಾರ, ನಟ ಚೇತನ್ ಇಂದಿಲ್ಲಿ ತಿಳಿಸಿದರು.
ಸೋಮವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಕೃಷಿ, ತೋಟಗಾರಿಕಾ ಹಾಗೂ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಧರಣಿಯನ್ನು ಬೆಂಬಲಿಸಿ ಮಾತನಾಡಿದ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಾತ್ರ ಕಡ್ಡಾಯವಾದರೆ ಸಾಲದು, ಉನ್ನತ ಶಿಕ್ಷಣ ಸಹ ಎಲ್ಲರಿಗೂ ಹಕ್ಕಾಗಬೇಕು. ಈ ನಿಟ್ಟಿನಲ್ಲಿ ಕೃಷಿ ಪದವಿಯ ಖಾಸಗೀಕರಣವನ್ನು ಪ್ರಶ್ನಿಸಬೇಕಿದೆ ಎಂದು ತಿಳಿಸಿದರು. ಕಳೆದ 21 ದಿನಗಳಿಂದ ಹೋರಾಟ ಮಾಡುತ್ತಿರುವ ವಿದ್ಯಾರ್ಥಿಗಳು, ಶಿಕ್ಷಣದ ಮಾರಾಟದಿಂದ ಉಂಟಾಗುವ ಸಮಸ್ಯೆ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದು, ಶಿಕ್ಷಣ ಖಾಸಗೀಕರಣದಿಂದ ಸಮಾಜದ ಮೇಲೆ ಪರಿಣಾಮ ಉಂಟಾಗಬಾರದೆಂಬ ನಿಟ್ಟಿನಲ್ಲಿ ತಳ ಮಟ್ಟದಿಂದ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಬಗ್ಗೆ ಕೃಷಿ ಸಚಿವ ಶಿವಶಂಕರ್ ರೆಡ್ಡಿ ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಮಾತುಕೊಟ್ಟಿದ್ದಾರೆ ಎಂದ ಅವರು, ರಾಜ್ಯ ಸರಕಾರ ಈ ಹಿಂದೆ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿತ್ತು. ಆದರೆ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.