ಬೆಂಗಳೂರು: ಕಟ್ಟಡ ಕುಸಿದು ದಂಪತಿಗೆ ಗಾಯ

Update: 2018-07-02 15:12 GMT

ಬೆಂಗಳೂರು, ಜು.2: ಶಿಥಿಲವಾಗಿದ್ದ ಎರಡಂತಸ್ತಿನ ಕಟ್ಟಡವೊಂದು ರವಿವಾರ ತಡರಾತ್ರಿ ಕುಸಿದ ಪರಿಣಾಮ ಪಕ್ಕದ ಮನೆಯಲ್ಲಿದ್ದ ದಂಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಾಂತಿನಗರದ ಆಸ್ಟಿನ್‌ಟೌನ್‌ನಲ್ಲಿರುವ ಸುಮಾರು 40 ವರ್ಷದ ಹಿಂದಿನ ಕಟ್ಟಡ ಯಾರೂ ವಾಸವಿರದೆ ಶಿಥಿಲ ಸ್ಥಿತಿಯಲ್ಲಿತ್ತು. ಕಟ್ಟಡದ ಪಕ್ಕದಲ್ಲಿದ್ದ ಶೀಟ್ ಮನೆಯ ಮೇಲೆ ಏಕಾಏಕಿ ಕುಸಿದು ದಂಪತಿ ಗಾಯಗೊಂಡಿದ್ದಾರೆ.

ರಾಜು ಎಂಬುವರಿಗೆ ಸೇರಿದ್ದ ಕಟ್ಟಡ ಇದಾಗಿದ್ದು, ಹಳೆಯದಾದ ನಂತರ ತೆರವು ಮಾಡದೇ ಹಾಗೆಯೇ ಬಿಟ್ಟಿದ್ದರು. ರವಿವಾರ ರಾತ್ರಿ ಇದ್ದಕ್ಕಿದ್ದಂತೆ ಕುಸಿದಿದೆ. ಈ ವೇಳೆ ಕಾರು, ಮನೆಯೊಂದು ಜಖಂಗೊಂಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಟ್ಟಡ ಕುಸಿತದ ಶಬ್ದಕ್ಕೆ ಎಚ್ಚೆತ್ತ ಸ್ಥಳೀಯರು ಗಾಯಗೊಂಡಿದ್ದ ದಂಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದಂಪತಿ ತಲೆಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎನ್.ಎ.ಹಾರಿಸ್, ದಂಪತಿಗೆ ಹೊಸ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ. ಈ ಸಂಬಂಧ ಕಟ್ಟಡ ಮಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿ, ವಿವೇಕ ನಗರ ಠಾಣಾ ಪೊಲೀಸರು ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News