ಕಲಾಪ ನಡೆಯುವ ವೇಳೆ ಸಿಎಂಗೆ ಅರ್ಜಿ ನೀಡಬೇಡಿ: ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್
Update: 2018-07-02 20:45 IST
ಬೆಂಗಳೂರು, ಜು. 2: ‘ಕಲಾಪ ನಡೆಯುವ ವೇಳೆ ಶಾಸಕರು ಮುಖ್ಯಮಂತ್ರಿಗಳಿಗೆ ಯಾವುದೇ ಅರ್ಜಿಯನ್ನು ನೀಡುವಂತಿಲ್ಲ. ಇದರಿಂದ ಸದನದ ಚರ್ಚೆ ಬಗ್ಗೆ ಸಿಎಂ ಗಮನಹರಿಸಲು ಸಾಧ್ಯವಾಗುವುದಿಲ್ಲ. ತುರ್ತು ಕಾರ್ಯವಿದ್ದರೆ ಸಿಎಂರನ್ನು ಅವರ ಕಚೇರಿಗೆ ಕರೆದುಕೊಂಡು ಹೋಗಿ’ ಎಂದು ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಸಲಹೆ ಮಾಡಿದ್ದಾರೆ.
ಸೋಮವಾರ ವಿಧಾನಸಭೆಯ ಸಂತಾಪ ಸೂಚನೆ ನಿರ್ಣಯ ಮಂಡನೆಗೆ ಮೊದಲು ವಿಷಯ ಪ್ರಸ್ತಾಪಿಸಿದ ಸ್ಪೀಕರ್, ಸದನದ ನಿಯಮಾವಳಿಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಮಂದಿ ಹೊಸ ಸದಸ್ಯರು ಆಯ್ಕೆಯಾಗಿದ್ದಾರೆ.
ಕಲಾಪ ನಡೆಯುವ ವೇಳೆ ಪರಸ್ಪರ ಅಲ್ಲಲ್ಲಿ ಕೂತು-ನಿಂತು ಮಾತನಾಡುವುದು ಸರಿಯಲ್ಲ. ಹೀಗಾಗಿ ಎಲ್ಲರಿಗೂ ಮೊದಲು ಮನವಿ ಮಾಡುತ್ತೇನೆ, ಬಳಿಕ ಸೂಚನೆ ನೀಡುತ್ತೇನೆಂದ ಅವರು, ಒಬ್ಬ ಶಾಸಕನಾಗಿ ಇಂತಹ ಕಾರ್ಯವನ್ನು ನಾನು ಎಂದೂ ಮಾಡಿಲ್ಲ. ಆದುದರಿಂದ ಇದನ್ನು ಹೇಳುವ ನೈತಿಕ ಅರ್ಹತೆ ಹೊಂದಿದ್ದೇನೆ ಎಂದರು.