ಸಿದ್ದು ನ್ಯಾಮಗೌಡ ಸೇರಿ ಅಗಲಿದ ಗಣ್ಯರಿಗೆ ವಿಧಾನ ಮಂಡಲದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

Update: 2018-07-02 16:06 GMT

ಬೆಂಗಳೂರು, ಜು. 2: ವಿಧಾನಸಭೆ ಹಾಲಿ ಸದಸ್ಯ ಸಿದ್ದು ಬಿ.ನ್ಯಾಮಗೌಡ, ಮಾಜಿ ಸದಸ್ಯರಾದ ವೈ.ಎನ್.ರುದ್ರೇಶ್‌ಗೌಡ, ಬಿ.ಎನ್.ವಿಜಯಕುಮಾರ್ ಸೇರಿದಂತೆ ಇತ್ತೀಚೆಗೆ ನಿಧನರಾದ ಹನ್ನೊಂದು ಮಾಜಿ ಸದಸ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸೋಮವಾರ ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣದ ಬಳಿಕ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಪ್ರತ್ಯೇಕವಾಗಿ ಸಂತಾಪ ಸೂಚನೆ ನಿರ್ಣಯ ಮಂಡಿಸಿ, ಅಗಲಿದ ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು.

ನಾಯಕರ ಗುಣಗಾನ: 2018ರ ಮೇ 28ರಂದು ರಸ್ತೆ ಅಪಘಾತದಲ್ಲಿ ನಿಧನರಾದ ವಿಧಾನಸಭೆ ಹಾಲಿ ಸದಸ್ಯ ಸಿದ್ದು ನ್ಯಾಮಗೌಡ, ಸರಳ, ಸಜ್ಜನಿಕೆಗೆ ಹೆಸರಾಗಿದ್ದ ಅಪರೂಪದ ರಾಜಕಾರಣಿ. 1987ರಲ್ಲಿ ಕೃಷ್ಣಾನದಿ ತೀರದ ರೈತರನ್ನು ಸಂಘಟಿಸಿ ಸರಕಾರದ ನೆರವಿಲ್ಲದೆ ರೈತರಿಂದ ವಂತಿಗೆ ಸಂಗ್ರಹಿಸಿ ಚಿಕ್ಕಪಡಸಲಗಿ ಬಳಿ ಕೃಷ್ಣ ನದಿಗೆ ಬ್ಯಾರೇಜ್ ನಿರ್ಮಿಸುವ ಮೂಲಕ ‘ಬ್ಯಾರೇಜ್ ಸಿದ್ದು’ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಅವರು ನಮ್ಮೆಲ್ಲರಿಗೂ ಮಾದರಿ ಎಂದು ಸಿಎಂ ಕುಮಾರಸ್ವಾಮಿ ಸ್ಮರಿಸಿದರು.

ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಡಿಸಿಎಂ ಡಾ. ಪರಮೇಶ್ವರ್, ಮೇ 27ರಂದು ದಿಲ್ಲಿಯಲ್ಲಿ ನಮ್ಮೊಂದಿಗಿದ್ದ ಸಿದ್ಧು ನ್ಯಾಮಗೌಡ, ದಿಲ್ಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬರಲು 60 ಸಾವಿರ ರೂ.ಗಳಷ್ಟು ಹಣವಿಲ್ಲದ ಕಾರಣ, ಕೇವಲ 10 ಸಾವಿರ ರೂ.ನೀಡಿ ವಿಮಾನದ ಮೂಲಕ ಗೋವಾಕ್ಕೆ ಬಂದು ಅಲ್ಲಿಂದ ತಮ್ಮ ಊರಿಗೆ ಬರುವ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದು ವಿಧಿಯಾಟವೊ ಅಥವಾ ಪ್ರಕೃತಿ ನಿಯಮವೋ ಗೊತ್ತಿಲ್ಲ ಎಂದು ನ್ಯಾಮಗೌಡರ ಸರಳತೆಯನ್ನು ಕೊಂಡಾಡಿದರು.

‘ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆದರೆ, ಈ ನಡುವೆ ನಾವೇನು ಮಾಡುತ್ತೇವೆ ಎಂಬುದು ಮುಖ್ಯ. ಮನುಷ್ಯತ್ವ ಮತ್ತು ಮಾನವೀಯ ಸಂಬಂಧ ಬಹಳ ಮುಖ್ಯ. ಸಿದ್ದು ನ್ಯಾಮಗೌಡ ಎಲ್ಲರನ್ನು ಪ್ರೀತಿಸುವ ಮಾನವೀಯ ಸಂಬಂಧ ಹೊಂದಿದ್ದ ಅಪರೂಪದ ವ್ಯಕ್ತಿ. ಅವರಿಂದು ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆಂದು ನೆನಪು ಮಾಡಿಕೊಂಡರು.

ವಿಪಕ್ಷ ನಾಯಕ ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಗೋವಿಂದ ಕಾರಜೋಳ, ಎ.ಎಸ್.ಪಾಟೀಲ್ ನಡಹಳ್ಳಿ ಸೇರಿದಂತೆ ಹಲವು ಸದಸ್ಯರು ಸಿದ್ದು ನ್ಯಾಮಗೌಡ ಸೇರಿದಂತೆ ಅಗಲಿದ ಗಣ್ಯರ ಗುಣಗಾನ ಮಾಡಿದರು. ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಕೋರಿದರು.

ಆ ಬಳಿಕ ಸದನದ ಎಲ್ಲ ಸದಸ್ಯರು ಮೃತರ ಗೌರವಾರ್ಥ ಎದ್ದುನಿಂತು ಒಂದು ನಿಮಿಷ ಮೌನಾಚರಣೆ ಮಾಡಿದರು. ಸಂತಾಪ ಸೂಚನೆ ಸಂದೇಶವನ್ನು ಮೃತರ ಕುಟುಂಬಕ್ಕೆ ತಲುಪಿಸಲಾಗುವುದು ಎಂದು ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್, ಕಲಾಪವನ್ನು ಮಂಗಳವಾರಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News