ಗಾಂಧಿನಗರ ರಸ್ತೆಗಳಿಗೆ ವೈಟ್‌ ಟಾಪಿಂಗ್: ಬಿಬಿಎಂಪಿ ಮೇಯರ್ ಸಂಪತ್ ರಾಜ್

Update: 2018-07-02 16:09 GMT

ಬೆಂಗಳೂರು, ಜು.2: ಬಿಬಿಎಂಪಿಯ ಹೃದಯ ಭಾಗದಲ್ಲಿರುವ ಗಾಂಧಿನಗರದ 6 ಪ್ರಮುಖ ರಸ್ತೆಗಳು ಹಾಗೂ 15 ಅಡ್ಡ ರಸ್ತೆಗಳನ್ನು ‘ವೈಟ್‌ಟಾಪಿಂಗ್’ ರಸ್ತೆಗಳನ್ನಾಗಿ ಪರಿವರ್ತಿಸಲಾಗುವುದೆಂದು ಪಾಲಿಕೆ ಮೇಯರ್ ಆರ್.ಸಂಪತ್ ರಾಜ್ ತಿಳಿಸಿದ್ದಾರೆ.

ಸೋಮವಾರ ಕೆಂಪೇಗೌಡ ಬಸ್ ನಿಲ್ದಾಣ ಬಳಿಯ ಗಾಂಧಿನಗರದ ವಜ್ರೇಶ್ವರಿ ಕಂಬೈನ್ಸ್ ಕಚೇರಿ ಸಮೀಪ ನಡೆಯುತ್ತಿರುವ ವೈಟ್‌ಟಾಪಿಂಗ್ ರಸ್ತೆ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸುಮಾರು 120 ಕೋಟಿ ರೂ.ವೆಚ್ಚದಲ್ಲಿ ಮುಂದಿನ 3 ತಿಂಗಳೊಳಗೆ ಗಾಂಧಿನಗರದ ಎಲ್ಲ ರಸ್ತೆಗಳನ್ನು ವೈಟ್ ಟಾಪಿಂಗ್ ರಸ್ತೆ ಯಾಗಿ ಪರಿವರ್ತಿಸಲಾಗುವುದು ಎಂದರು.

ಈ ಪ್ರದೇಶದಲ್ಲಿ ಚರಂಡಿ ಹಾಗೂ ಜಲ ಮಂಡಳಿಯ ಪೈಪುಗಳು ಆಗಾಗ್ಗೆ ಒಡೆದು ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಗಳಿಗೆ ತೊಂದರೆಯಾಗುತ್ತಿದೆ. ನಗರೋತ್ಥಾನ ಯೋಜನೆಯಡಿಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಈ ಭಾಗದಲ್ಲಿ ವಾಹನ ಸಂಚಾರ ದಟ್ಟಣೆೆಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

ತ್ವರಿತಗತಿ ಕಾಮಗಾರಿ: ಶಿವಾನಂದ ವೃತ್ತದಲ್ಲಿ ಉಕ್ಕಿನ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದ ಮೇಯರ್, 65 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭಗೊಂಡಿರುವ ಉಕ್ಕಿನ ಸೇತುವೆ ಕಾಮಗಾರಿಗೆ ತಡೆ ನೀಡುವಂತೆ ಕೆಲವರು ಹೈ ಕೋರ್ಟ್ ಮೊರೆ ಹೋದರು. ಆದರೆ ನ್ಯಾಯಾಲಯ ಕೆಲ ಬದಲಾವಣೆಗಳೊಂದಿಗೆ ಕಾಮಗಾರಿ ಮುಂದುವರೆಸುವಂತೆ ಸೂಚನೆ ನೀಡಿದೆ. ಈ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದೆಂದು ಮೇಯರ್ ತಿಳಿಸಿದರು.

ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಬಿಬಿಎಂಪಿ ಪ್ರಧಾನ ಇಂಜಿನಿಯರ್ ಕೆ.ಟಿ.ನಾಗರಾಜ್ ಸೇರಿ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News