ವಿಧಾನ ಪರಿಷತ್: ಶಾಸಕರ ಆಪ್ತ ಸಹಾಯಕ-ಅಂಗರಕ್ಷಕರಿಗೆ ಮೊಗಸಾಲೆ ಪ್ರವೇಶ ನಿರ್ಬಂಧ

Update: 2018-07-02 16:13 GMT

ಬೆಂಗಳೂರು, ಜು.2: ಅಧಿವೇಶನದ ಸಮಯದಲ್ಲಿ ವಿಧಾನಪರಿಷತ್ತಿನ ಮೊಗಸಾಲೆಗಳಲ್ಲಿ ಶಾಸಕರ ಆಪ್ತ ಸಹಾಯಕರು, ಅಂಗರಕ್ಷಕರು ಹಾಗೂ ಸಂಸದೀಯ ಕಾರ್ಯದರ್ಶಿಗಳ ಸಿಬ್ಬಂದಿಗಳಿಗೂ ಪ್ರವೇಶವನ್ನು ನಿರಾಕರಿಸಿ ಸಭಾಪತಿ ಬಸವರಾಜ ಹೊರಟ್ಟಿ ನಿರ್ದೇಶನ ನೀಡಿದ್ದಾರೆ.

ಈ ಸಂಬಂಧ ಸಚಿವರು ಹಾಗೂ ಶಾಸಕರಿಗೆ ಸಂದೇಶ ರವಾನಿಸಿರುವ ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ, ಸಚಿವರ ಆಪ್ತ ಕಾರ್ಯದರ್ಶಿ ಅಥವಾ ಒಬ್ಬ ಆಪ್ತ ಸಹಾಯಕ ಮಾತ್ರ ವಿಧಾನ ಪರಿಷತ್ತಿನ ಅಧಿಕಾರಿಗಳ ಗ್ಯಾಲರಿಗೆ ಪ್ರವೇಶಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಉಪ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳು ಮಾತ್ರ ವಿಧಾನಪರಿಷತ್ತಿನ ಮೊಗಸಾಲೆ ಹಾಗೂ ಅಧಿಕಾರಿಗಳ ಗ್ಯಾಲರಿಗೆ ಪ್ರವೇಶಿಸಬಹುದಾಗಿದೆ ಎಂದು ಮಹಾಲಕ್ಷ್ಮಿ ಹೇಳಿದ್ದಾರೆ.

ಅಧಿವೇಶನದ ಸಮಯದಲ್ಲಿ ವಿಧಾನಪರಿಷತ್ತಿನ ಅಧಿಕಾರಿಗಳ ಗ್ಯಾಲರಿಯಲ್ಲಿ ಸಚಿವರ ಆಪ್ತ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಸೀನರಾಗುವುದಲ್ಲದೆ ಹಿರಿಯ ಅಧಿಕಾರಿಗಳಿಗೆ ಕುಳಿತುಕೊಳ್ಳಲು ಸ್ಥಾನವಿಲ್ಲದೆ ಮುಜುಗರಕ್ಕೀಡು ಮಾಡಿರುತ್ತಾರೆಂದು ಹಿರಿಯ ಅಧಿಕಾರಿಗಳು ಆಕ್ಷೇಪಣೆ ಮಾಡಿದ್ದಾರೆ.

ಹಾಗೆಯೇ, ವಿಧಾನಪರಿಷತ್ತಿನ ಮೊಗಸಾಲೆಗಳಲ್ಲಿ ಶಾಸಕರ ಆಪ್ತ ಸಹಾಯಕರು ಹಾಗೂ ಅಂಗರಕ್ಷಕರು ಅಲ್ಲದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕುಳಿತು ಶಾಸಕರಿಗೆ ಕುಳಿತುಕೊಳ್ಳಲು ಆಸನಗಳಿಲ್ಲದಂತೆ ಮಾಡುತ್ತಿರುವುದನ್ನು ಗಮನಿಸಲಾಗಿದೆ. ಈ ನಿಟ್ಟಿನಲ್ಲಿ ಸದನದ ಗಾಂಭೀರ್ಯತೆ ಮತ್ತು ಶಿಸ್ತನ್ನು ಕಾಯ್ದುಕೊಳ್ಳುವ ಸಲುವಾಗಿ ಸಭಾಪತಿ ಈ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ ಎಂದು ಮಹಾಲಕ್ಷ್ಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News