ನೀವು ಯಾವಾಗ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ ಎನ್ನುವುದು ನಿಮಗೆ ಗೊತ್ತಿದೆಯೇ ?

Update: 2018-07-03 13:00 GMT

ಆದಾಯ ತೆರಿಗೆ ರಿಟರ್ನ್(ಐಟಿಆರ್) ಸಲ್ಲಿಕೆಯಿಂದ ನಿಮ್ಮ ಆದಾಯ ಕಾನೂನಿನ ಸಮ್ಮತಿಗೊಳಪಡುತ್ತದೆ. ವಾರ್ಷಿಕ ವಹಿವಾಟಿನ ಮೊತ್ತ ಏನೇ ಇರಲಿ,ಕಂಪನಿಗಳು ಮತ್ತು ಸಂಸ್ಥೆಗಳು ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ. ಕಂಪನಿ ಮತ್ತು ಸಂಸ್ಥೆಯಿಂದ ಹೊರತಾದ ವ್ಯಕ್ತಿಯು ತನ್ನ ವಾರ್ಷಿಕ ಒಟ್ಟು ಆದಾಯವು ತೆರಿಗೆಮುಕ್ತ ಗರಿಷ್ಠ ಮೊತ್ತವನ್ನು ಮೀರಿದಾಗ ಐಟಿಆರ್‌ನ್ನು ಸಲ್ಲಿಸಬೇಕಾಗುತ್ತದೆ.

ಇಲ್ಲಿ ಒಟ್ಟು ಆದಾಯವೆಂದರೆ ಆದಾಯ ತೆರಿಗೆ ಕಾಯ್ದೆಯ ಐದನೇ ಅಧ್ಯಾಯದಡಿ ಕಡಿತಗಳಿಗೆ ಅವಕಾಶ ಕಲ್ಪಿಸುವದಕ್ಕಿಂತ ಮೊದಲಿನ ಆದಾಯವಾಗಿದೆ. ಇದು ಮುಖ್ಯವಾಗಿ ಆರೋಗ್ಯ ವಿಮೆ ಮತ್ತು ಭವಿಷ್ಯ ನಿಧಿಗೆ ವಂತಿಗೆಗಳು,ಜೀವವಿಮೆಯ ಪ್ರೀಮಿಯಂ,ರಾಷ್ಟ್ರೀಯ ಉಳಿತಾಯ ಪತ್ರಗಳು ಮತ್ತು ಸಾರ್ವಜನಿಕ ಭವಿಷ್ಯನಿಧಿಯಂತಹ ಉಳಿತಾಯ ಯೋಜನೆಗಳು ಇತ್ಯಾದಿಗಳಲ್ಲಿ ತೊಡಗಿಸಿದ ಹಣದ ಮೇಲೆ ವ್ಯಕ್ತಿಯು ಪಡೆದುಕೊಂಡ ತೆರಿಗೆ ಕಡಿತಗಳನ್ನು ಒಳಗೊಂಡಿರುತ್ತದೆ.

ಆದಾಯ ತೆರಿಗೆ ಕಾಯ್ದೆಯಂತೆ ಓರ್ವ ವ್ಯಕ್ತಿ(ನಿವಾಸಿ ಅಥವಾ ಅನಿವಾಸಿ ಭಾರತೀಯ)ಯ ವಾರ್ಷಿಕ ಆದಾಯ 2.50 ಲ ರೂ.ಗಳ ಒಳಗಿದ್ದರೆ ಮತ್ತು 60 ರಿಂದ 80 ವರ್ಷದೊಳಗಿನ ವ್ಯಕ್ತಿಯ ವಾರ್ಷಿಕ ಆದಾಯ 3 ಲ.ರೂ.ಗಳ ಒಳಗಿದ್ದರೆ ಅಂತಹವರು ಆದಾಯ ತೆರಿಗೆಯನ್ನು ಪಾವತಿಸಬೇಕಿಲ್ಲ. 80 ವರ್ಷಕ್ಕಿಂತ ಹೆಚ್ಚು ಪ್ರಾಯದ ವ್ಯಕ್ತಿಗಳಿಗೆ ಈ ಮಿತಿಯನ್ನು 5 ಲ.ರೂ.ಗಳಿಗೆ ನಿಗದಿಗೊಳಿಸಲಾಗಿದೆ.

ಯಾವುದೇ ವ್ಯಕ್ತಿಯು ಪಾನ್‌ಕಾರ್ಡ್ ಹೊಂದಿದ್ದರೂ ಆತನ ವಾರ್ಷಿಕ ಆದಾಯ ಈ ಮಿತಿಯೊಳಗೇ ಇದ್ದರೆ ಆತ ಐಟಿಆರ್ ಸಲ್ಲಿಸುವುದು ಕಡ್ಡಾಯವಲ್ಲ.

ಐಟಿಆರ್ ಸಲ್ಲಿಕೆಯ ವಿಧಾನಗಳು

ಐಟಿಆರ್‌ನ್ನು ಮುದ್ರಿತ ನಿಗದಿತ ನಮೂನೆಯಲ್ಲಿ ಅಥವಾ ಇ-ಫೈಲಿಂಗ್ ರೂಪದಲ್ಲಿ ಸಲ್ಲಿಸಬಹುದು. ಐಟಿಆರ್‌ನ್ನು ಈ-ಫೈಲಿಂಗ್ ಮೂಲಕ ಸಲ್ಲಿಸುವುದಿದ್ದರೆ ಈ ಮೂರು ಆಯ್ಕೆಗಳನ್ನು ಅನುಸರಿಸಬೇಕಾಗುತ್ತದೆ.

1) ಡಿಜಿಟಲ್ ಸಹಿ ಬಳಸಿ ಇ-ಫೈಲಿಂಗ್

2) ಡಿಜಿಟಲ್ ಸಹಿ ಬಳಸದೆ ಇ-ಫೈಲಿಂಗ್

3) ಇಲೆಕ್ಟ್ರಾನಿಕ್ ವೆರಿಫಿಕೇಷನ್ ಕೋಡ್(ಇವಿಸಿ)ನಡಿ ಇ-ಫೈಲಿಂಗ್

ಡಿಜಿಟಲ್ ಸಹಿ ಬಳಸಿ ಅಥವಾ ಇವಿಸಿಯಡಿ ಐಟಿಆರ್‌ನ್ನು ಸಲ್ಲಿಸಿದರೆ ಐಟಿಆರ್-V(ಇ-ಫೈಲ್ ಮಾಡಿದ ಐಟಿಆರ್‌ಗೆ ಹಿಂಬರಹ) ಫಾರ್ಮ್‌ನ ಸಹಿ ಮಾಡಿದ ಪ್ರತಿಯನ್ನು ಬೆಂಗಳೂರಿನ ಕೇಂದ್ರೀಕೃತ ಸಂಸ್ಕರಣಾ ಕೇಂದ್ರ( ಸಿಪಿಸಿ)ಕ್ಕೆ ಕಳುಹಿಸುವ ಅಗತ್ಯವಿಲ್ಲ. ಆದರೆ ಡಿಜಿಟಲ್ ಸಹಿ ಬಳಸದೆ ಅಥವಾ ಇವಿಸಿಯಿಲ್ಲದೆ ಐಟಿಆರ್‌ನ್ನು ಸಲ್ಲಿಸಿದ್ದರೆ ಅದನ್ನು ಅಪ್‌ಲೋಡ್ ಮಾಡಿದ 120 ದಿನಗಳೊಳಗೆ ಐಟಿಆರ್-V ಫಾರ್ಮ್‌ನ ಸಹಿ ಮಾಡಿದ ಪ್ರತಿಯನ್ನು ಸಾದಾ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಸಿಪಿಸಿ,ಪಿಬಿ ನಂ.1.ಎಲೆಕ್ಟ್ರಾನಿಕ್ ಸಿಟಿ ಅಂಚೆಕಚೇರಿ, ಬೆಂಗಳೂರು-560100 ಈ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

ಐಟಿಆರ್‌ನ ಇ-ಫೈಲಿಂಗ್‌ನಿಂದ ಹೊರತಾದುದು ಇಲ್ಲವೇ?

ವ್ಯಕ್ತಿಯೋರ್ವ ಈ ಕೆಳಗಿನ ಸಂದರ್ಭಗಳಲ್ಲಿ ಐಟಿಆರ್‌ನ್ನು ಫಾರ್ಮ್ ನಂ.ಐಟಿಆರ್-1 ಅಥವಾ ಐಟಿಆರ್-4 ಇವುಗಳಲ್ಲಿ ಸಲ್ಲಿಸಬಹುದು.

1)ತೆರಿಗೆದಾತರು ಹಿಂದಿನ ವರ್ಷದಲ್ಲಿ 80 ವರ್ಷ ಅಥವಾ ಅದಕ್ಕೂ ಹೆಚ್ಚಿನ ಪ್ರಾಯದವರಾಗಿದ್ದರೆ

2) ತೆರಿಗೆದಾತ ಓರ್ವ ವ್ಯಕ್ತಿ,ಹಿಂದು ಅವಿಭಜಿತ ಕುಟುಂಬ ಅಥವಾ ಪಾಲುದಾರಿಕೆಯ ಸಂಸ್ಥೆಯಾಗಿದ್ದರೆ ಮತ್ತು ಹಿಂದಿನ ವರ್ಷದಲ್ಲಿ ಆದಾಯವು 5 ಲ.ರೂ.ಗಳನ್ನು ಮೀರಿರದಿದ್ದರೆ ಮತ್ತು ಆದಾಯದ ರಿಟರ್ನ್‌ನಲ್ಲಿ ರಿಫಂಡ್ ಪಡೆದುಕೊಂಡಿರದಿದ್ದರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News