‘ನರಕ’ ಸೃಷ್ಟಿಸದಿದ್ದರೆ ಅದೇ ನಾವು ಜನರಿಗೆ ಮಾಡುವ ದೊಡ್ಡ ಸೇವೆ: ಶಾಸಕ ಎ.ಟಿ.ರಾಮಸ್ವಾಮಿ
ಬೆಂಗಳೂರು, ಜು. 3: ‘ಸೌಭಾಗ್ಯ ನೀಡಲು ಆಗದಿದ್ದರೆ ಚಿಂತೆಯಿಲ್ಲ, ಸಂಕಷ್ಟ ಸೃಷ್ಟಿಸಬಾರದು. ಸ್ವರ್ಗವನ್ನು ಧರೆಗೆ ಇಳಿಸಲಾಗದಿದ್ದರೂ ನರಕ ಸೃಷ್ಟಿಸದಿದ್ದರೆ ಅದೇ ನಾವು ಜನರಿಗೆ ಮಾಡುವ ದೊಡ್ಡ ಸೇವೆ. ಜನತೆಯ ಸಹನೆ ಕಟ್ಟೆ ಒಡೆಯಲು ಅವಕಾಶ ನೀಡದೆ ಆಶೀರ್ವಾದಕ್ಕೆ ಕಿಂಚಿತ್ತೂ ಚ್ಯುತಿಯಾಗದಂತೆ ಜನ ಸೇವೆ ಮಾಡೋಣ’ ಎಂದು ಜೆಡಿಎಸ್‌ನ ಹಿರಿಯ ಸದಸ್ಯ ಎ.ಟಿ.ರಾಮಸ್ವಾಮಿ ಮಾರ್ಮಿಕವಾಗಿ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯದ ಪ್ರಸ್ತಾವವನ್ನು ಅನುಮೋದಿಸಿ ಮಾತನಾಡಿದ ಅವರು, ಸರಕಾರದ ಯಾವುದೇ ಸೇವೆಗಳು ಜನರಿಗೆ ಉಚಿತವಾಗಿ ಸಿಗುತ್ತವೆ ಎಂಬ ಭಾವನೆ ಇಲ್ಲ. ದುಡ್ಡು ಕೊಟ್ಟು ಕೊಂಡುಕೊಳ್ಳುತ್ತೇವೆಂಬ ಭಾವನೆ ಇದೆ. ಹೀಗಾಗಿ ಮೌಲ್ಯಗಳನ್ನು ಕಳೆಯಬೇಡಿ ಎಂದು ಸೂಚಿಸಿದರು.
ಎಲ್ಲರೂ ಪಕ್ಷಭೇದ ಮರೆತು ನೆಲಮುಖಿಯಾಗುವುದನ್ನು ಬಿಟ್ಟು ವಿಶಾಲ ದೃಷ್ಟಿಕೋನವನ್ನಿಟ್ಟುಕೊಂಡ ಗಗನಮುಖಿಯಾಗಿ ರಾಜ್ಯದ ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಒಗ್ಗಟ್ಟಿನಿಂದ ಸಮನ್ವಯತೆಯಿಂದ ಶ್ರಮಿಸೋಣ. ಆ ಮೂಲಕ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು.
ಮೈತ್ರಿಧರ್ಮ ಪಾಲಿಸಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಮೈತ್ರಿಧರ್ಮವನ್ನು ಕಾಪಾಡಬೇಕು. ವಿನಾ ಕಾಲಹರಣ ಮತ್ತು ಅವರಿವರು ಕಾಲೆಳೆದು ಕೊಂಡು ಹೋದರೆ ನಮ್ಮ ಮೇಲೆ ನಾವೇ ಚಪ್ಪಡಿ ಕಲ್ಲು ಎಳೆದುಕೊಂಡಂತೆ ಎಂದ ರಾಮಸ್ವಾಮಿ, ಮೈತ್ರಿ ಬಿಕ್ಕಟ್ಟಿನ ವಿರುದ್ಧ ತಮ್ಮದೆ ಧಾಟಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಮೈತ್ರಿ ಸರಕಾರ ಒಂದು ರೀತಿಯಲ್ಲಿ ಎರಡು ಹಳಿಗಳ ಮೇಲೆ ಓಡುವ ರೈಲು. ಯಾವುದಾದರೂ ಒಂದು ಹಳಿ ಕಿತ್ತರೂ ರೈಲು ಓಡಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಧರ್ಮ ಕಾಪಾಡಬೇಕು. ಇಲ್ಲವಾದರೆ ಜನರಿಗೆ ದ್ರೋಹ ಮಾಡಿದಂತೆ ಎಂದು ರಾಮಸ್ವಾಮಿ ವಿಶ್ಲೇಷಿಸಿದರು.
ನಾವು ಅನರ್ಹರಲ್ಲ: ವಿಧಾನಸಭೆಯ ಮುಂದಿನ ಎರಡು ಸಾಲುಗಳಲ್ಲಿ ಕೂತವರು(ಸಚಿವರು) ಮಾತ್ರ ಅರ್ಹರು. ಉಳಿದವರೆಲ್ಲ ಸದಸ್ಯರು ಅನರ್ಹರು ಎಂಬ ಭಾವನೆ ಬೇಡ. ನಾವೆಲ್ಲರೂ ಜನ ಸೇವಕರು. ಜನರು ನಮ್ಮ ಸೇವಕರಲ್ಲ. ಇದನ್ನು ಅರ್ಥ ಮಾಡಿಕೊಂಡು ಎಲ್ಲರೂ ಕೆಲಸ ನಿರ್ವಹಿಸಬೇಕೆಂದು ಸಚಿವರಿಗೆ ಸಲಹೆ ಮಾಡಿದರು.
ಇಂಥಹದ್ದೆ ಸಚಿವ, ಕಚೇರಿ, ಕಾರು: ಮೊದಲು ಸಚಿವ ಸ್ಥಾನ. ಸಚಿವ ಸ್ಥಾನ ಸಿಕ್ಕಿದ ಮೇಲೆ ಇಂತಹದ್ದೆ ಖಾತೆ ಬೇಕು. ಆಮೇಲೆ ಇಂತಹದ್ದೇ ಕಾರು, ಇಂತಹದ್ದೆ ಕಚೇರಿ, ಇದೇ ಮನೆ ಬೇಕು. ಆ ಬಳಿಕ ಇಂತಹದ್ದೆ ಅಧಿಕಾರಿ ಬೇಕು ಎಂದು ಕೂತರೇ ನಿಮ್ಮನ್ನು ಆಯ್ಕೆ ಮಾಡಿದ್ದೇಕೆ? ಎಂದು ಅವರು ಪ್ರಶ್ನಿಸಿದರು. ನಿಮ್ಮ ಬೇಡಿಕೆಗಳಲ್ಲೇ ದಿನದೂಡಿದರೆ ಜನರ ಕೆಲಸ ಮಾಡುವುದು ಯಾವಾಗ? ಸಿಎಂ ಮೇಲೆ ಒತ್ತಡ ಹೇರಿ ಕಟ್ಟಿ ಹಾಕುವ ಪ್ರಯತ್ನ ಬೇಡ ಎಂದು ಕೋರಿದ ಅವರು, ಜನರೆ ಸರ್ವ ಶ್ರೇಷ್ಠರೇ ಹೊರತು ನಾವಲ್ಲ ಎಂದು ಮಾರ್ಮಿಕವಾಗಿ ನುಡಿದರು.
ನಿಮ್ಮದು ಪವಿತ್ರವೋ..: ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಅಪವಿತ್ರ ಎಂದು ವಿಪಕ್ಷ ನಾಯಕ ಬಿಎಸ್‌ವೈ ಹೇಳಿದ್ದಾರೆ. 2006ರಲ್ಲಿ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರಕಾರ ಪವಿತ್ರವೋ ಎಂದು ಪ್ರಶ್ನಿಸಿದ ಅವರು, ರಾಜಕೀಯ ಕಾಲಘಟ್ಟದಲ್ಲಿ ಏನೆಲ್ಲಾ ಆಗಿ ಹೋಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಜಾರ್ಖಂಡ್‌ನಲ್ಲಿ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದ ಮಧುಕೋಡ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲವೇ? ಬಿಹಾರದಲ್ಲಿ ಚುನಾವಣಾ ಪೂರ್ವ ಮೈತ್ರಿ, ನಂತರದ ಮೈತ್ರಿ ಪವಿತ್ರವೇ ಎಂದು ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ರೋಲ್ಡ್‌ಗೋಲ್ಡ್ ಆದರೇನು ಮಾಡಬೇಕು: ಶುದ್ಧ ಅಪರಂಜಿ (24 ಕ್ಯಾರೆಟ್) ಚಿನ್ನವನ್ನು ಯಾರೂ ಆಭರಣ ಮಾಡಲು ಬಳಸುವುದಿಲ್ಲ. ಅದನ್ನು 22 ಕ್ಯಾರೆಟ್‌ಗೆ ಇಳಿಸುತ್ತಾರೆ. ಅದು ರೋಲ್ಡ್‌ಗೋಲ್ಡ್ ಆದರೇನು ಎಂಬ ಚಿಂತೆ ನನ್ನನ್ನು ಕಾಡುತ್ತಿದೆ ಎಂದು ರಾಮಸ್ವಾಮಿ ಪ್ರಸಕ್ತ ರಾಜಕಾರಣದ ಬಗ್ಗೆ ವಿಶ್ಲೇಷಣೆ ಮಾಡಿದರು.
ಕೋಮುವಾದ ಮತ್ತು ಜಾತಿವಾದ ಒಂದೇ ನಾಣ್ಯದ ಎರಡು ಮುಖಗಳು. ಹಣ ಮತ್ತು ಜಾತಿಯ ಕಾರಬಾರು ಮಿತಿಮೀರಿದ್ದು, ಮೌಲ್ಯಗಳ ಕುಸಿತವನ್ನೆ ನೆಪ ಮಾಡಿಕೊಂಡು ಜವಾಬ್ದಾರಿಯಿಂದ ನುಣಿಚಿಕೊಳ್ಳುವುದು ಸರಿಯಲ್ಲ. ಪ್ರಜಾಪ್ರಭುತ್ವ ಗಟ್ಟಿಗೊಳ್ಳುವ ನಿಟ್ಟಿನಲ್ಲಿ ಅಧಿಕಾರಕ್ಕಾಗಿ ಜಾಗೃತರಾಗದೆ ಅಭಿವೃದ್ಧಿಗೆ ಆಸ್ಥೆ ವಹಿಸಬೇಕು’
-ಎ.ಟಿ.ರಾಮಸ್ವಾಮಿ ಜೆಡಿಎಸ್ ಸದಸ್ಯ