ಬೆಂಗಳೂರು: ಜಿಲೆಟಿನ್ ಮದ್ದು ಸ್ಫೋಟ; ಒಂದು ಕಿ.ಮೀ ವರೆಗೂ ಕಂಪಿಸಿದ ಭೂಮಿ
ಬೆಂಗಳೂರು, ಜು.3: ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಗಾತ್ರದ ಸ್ಫೋಟದಿಂದಾಗಿ ಭೂಮಿ ಕಂಪಿಸಿದ ಘಟನೆ ಮಂಗಳವಾರ ನಡೆದಿದೆ.
ನಗರದ ಎಚ್‌ಎಎಲ್ ವ್ಯಾಪ್ತಿಯ ಎಲ್‌ಬಿ ಶಾಸ್ತ್ರಿನಗರದಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ತಡೆ ಬೇಲಿಯ ಎಂಟು ಎಕರೆಗೂ ಅಧಿಕ ತಗ್ಗು ಪ್ರದೇಶದ ಕಸದ ಗುಂಡಿಯಲ್ಲಿ ಮಂಗಳವಾರ ಸಂಜೆ 4:30 ಸುಮಾರಿಗೆ ಏಕಾಏಕಿ ಬಂಡೆ ಒಡೆಯುವ ಜಿಲೆಟಿನ್ ಮದ್ದು ಸ್ಫೋಟಗೊಂಡಿದೆ. ಇದರ ಪರಿಣಾಮ 1 ಕಿಲೋ ಮೀಟರ್‌ನಷ್ಟು ಭೂಮಿ ಕಂಪಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು.
ಬಳಿಕ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ನೇತೃತ್ವದ ಪೊಲೀಸ್ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಸುಮಾರು ಮೂರು ತಿಂಗಳ ಹಿಂದೆ, ಇಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಬಂಡೆಗಳನ್ನು ಒಡೆಯಲು ಜಿಲೆಟಿನ್ ಮದ್ದು ಉಪಯೋಗ ಮಾಡಿದ್ದರು. ಅಷ್ಟೇ ಅಲ್ಲದೆ, ಕೆಲವರು ಮದ್ದು ಇರುವ ಜಾಗದಲ್ಲಿಯೇ ಕಸ ಸುರಿಯುತ್ತಿದ್ದರು. ಮಂಗಳವಾರ ಸಂಜೆ ಕಾರ್ಮಿಕರು ಕಸಕ್ಕೆ ಬೆಂಕಿ ಹಚ್ಚಿದಾಗ ಏಕಾಏಕಿ ಸ್ಫೋಟಗೊಂಡಿರಬಹುದು ಎಂದು ಮೇಲ್ನೋಟಕ್ಕೆ ಕಂಡಿದೆ.
ಸ್ಫೋಟದ ಪರಿಣಾಮದಿಂದ ಸ್ಥಳದಲ್ಲಿದ್ದ ನೀರಿನ ಟ್ಯಾಂಕ್ ಜಖಂವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಈ ಸಂಬಂಧ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದ್ದು, ನಿರ್ಲಕ್ಷವಹಿಸಿರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಕೈಗೊಳ್ಳಲಾಗುವುದು ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.
ಬಾಂಬ್ ದಳ: ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿ, ಸ್ಥಳೀಯರಿಂದಲೂ ಸ್ಫೋಟದ ಬಗ್ಗೆ ಹಿರಿಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.
ಮಂಗಳವಾರ 4 ಗಂಟೆ ಸುಮಾರಿಗೆ ದೊಡ್ಡ ಗಾತ್ರದಲ್ಲಿ ಸ್ಫೋಟದ ಶಬ್ದ ಕೇಳಿಬಂದಿತು.ಇದರಿಂದ ಭಯಗೊಂಡು ಶೆಡ್‌ನಿಂದ ಹೊರಗಡೆ ಬಂದವು. ನಿಜವಾದ ಬಾಂಬ್ ಸ್ಫೋಟವಾಗಿರಬಹುದು ಎನಿಸಿತು.
-ಶಂಕರ್, ಕಾರ್ಮಿಕ'ಸಂಜೆ ಕಾರ್ಮಿಕರು ಕಸಗುಡಿಸುವ ವೇಳೆ ಈ ಹಿಂದೆ ಸುಡದೆ ಬಾಕಿಯಾಗಿದ್ದ ಜಿಲೆಟಿನ್ ಮದ್ದು ಸ್ಫೋಟಗೊಂಡಿದ್ದು, ಈ ವೇಳೆ ಅಲ್ಲೇ ಇದ್ದ ಸಿಂಟೆಕ್ಸ್ ವಾಟರ್ ಟ್ಯಾಂಕ್ ಒಡೆದು ಹೋಗಿದೆ. ಈ ಬಗ್ಗೆ ತನಿಖೆ ನಡೆಸಲು ತಜ್ಞರನ್ನು ಕರೆಸಲಾಗುವುದು ಹಾಗೂ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು'
-ಅಬ್ದುಲ್ ಅಹದ್, ಡಿಸಿಪಿ, ವೈಟ್‌ಫೀಲ್ಡ್ ವಿಭಾಗ