ರೈತರ ಸಾಲಮನ್ನಾ ಆಗದಿದ್ದರೆ ಕುಮಾರಸ್ವಾಮಿಯನ್ನು ಹರಾಜು ಹಾಕುತ್ತೇವೆ: ಯಡಿಯೂರಪ್ಪ
ಬೆಂಗಳೂರು, ಜು.3: ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜು.5ರಂದು ಮಂಡನೆ ಮಾಡುವ ಬಜೆಟ್‌ನಲ್ಲಿ ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 53 ಸಾವಿರ ಕೋಟಿ ರೂ.ಸಾಲವನ್ನು ಮನ್ನಾ ಮಾಡದಿದ್ದರೆ ಅವರನ್ನು ಹರಾಜು ಹಾಕುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ಮಂಗಳವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯದ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 'ರೈತರ ಸಾಲ ಮನ್ನಾ, ಹಿರಿಯ ನಾಗರಿಕರಿಗೆ 6 ಸಾವಿರ ರೂ.ಮಾಸಾಶನ, ಗರ್ಭಿಣಿ ಮಹಿಳೆಯರಿಗೆ ಆರು ತಿಂಗಳ ಕಾಲ 6 ಸಾವಿರ ರೂ. ಹಾಗೂ ಬಡ ನಿರ್ಗತಿಕ ಮಹಿಳೆಯರ ಜೀವನ ನಿರ್ವಹಣೆಗೆ ಮಾಸಿಕ 2 ಸಾವಿರ ರೂ.ಗಳನ್ನು ನೀಡುವ ಭರವಸೆ ಈಡೇರಿಸಿದರೆ ಕುಮಾರಸ್ವಾಮಿಗೆ ಜೈಕಾರ ಹಾಕುತ್ತೇವೆ. ಇಲ್ಲದಿದ್ದರೆ, ರಾಜ್ಯದ ಜನರ ಎದುರು ಇವರನ್ನು ಹರಾಜು ಹಾಕುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.
ಬಜೆಟ್ ಮಂಡನೆಯಾಗಲಿ, ಜು.12ರವರೆಗೆ ನಾವು ಕಾಯುತ್ತೇವೆ. ಜನರಿಗೆ ಕೊಟ್ಟ ಭರವಸೆಯನ್ನು ಈ ಸರಕಾರ ಈಡೇರಿಸದಿದ್ದರೆ ನಮ್ಮ 104 ಮಂದಿ ಶಾಸಕರು, ಜೆಡಿಎಸ್ ಪ್ರಣಾಳಿಕೆಯನ್ನು ಇಟ್ಟುಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ, ನೀವು ನೀಡಿದ ಭರವಸೆ ಏನು? ಮಾಡಿದ್ದೇನು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಅವರು ತಿಳಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್‌ನವರು ಈ ಸುಳ್ಳು ಭರವಸೆಗಳನ್ನು ನೀಡದೆ ಇದ್ದಿದ್ದರೆ 25 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ರಾಜ್ಯದ ಮೇಲೆ 2.38 ಲಕ್ಷ ಕೋಟಿ ರೂ.ಗಳ ಸಾಲವಿದೆ. ಈ ಸಾಲವನ್ನು ಯಾವ ರೀತಿಯಲ್ಲಿ ತೀರಿಸಬೇಕು ಎಂಬುದರ ಕುರಿತು ಯೋಚಿಸಲು ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಲಿ ಎಂದು ಯಡಿಯೂರಪ್ಪ ಆಗ್ರಹಿಸಿದರು.
ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿ 10 ಸಾವಿರ ಕೋಟಿ ರೂ.ಗಳ ಬಿಲ್ ಬಾಕಿಯಿದೆ. ಸಿದ್ದರಾಮಯ್ಯ ಮತ್ತೆ ಅವರದೇ ಸರಕಾರ ಅಧಿಕಾರಕ್ಕೆ ಬರಲಿದೆ ಎಂಬ ಭ್ರಮೆಯಲ್ಲಿ ಸುಮಾರು 6-7 ಸಾವಿರ ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಎಂದು ಅವರು ದೂರಿದರು.
ಮುಂದಿನ ಸೂಚನೆ ಬರುವವರೆಗೆ ಯಾವುದೆ ಕಾಮಗಾರಿಯನ್ನು ಮುಂದುವರೆಸದಂತೆ ಸೂಚನೆ ಹೋಗಿದೆ. ಕಳೆದ ಆರು ತಿಂಗಳಿನಿಂದ ವಿಧವಾ ವೇತನ, ಹಿರಿಯ ನಾಗರಿಕರಿಗೆ ಮಾಸಾಶನ ನೀಡಿಲ್ಲ. ಇಂದಿರಾ ಕ್ಯಾಂಟೀನ್‌ಗೆ 35 ಕೋಟಿ ರೂ.ಬಾಕಿಯಿದೆ. ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ನೀಡಿಲ್ಲ ಎಂದು ಯಡಿಯೂರಪ್ಪ ಆರೋಪಿಸಿದರು.