ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಲು ಬಿಎಸ್‌ವೈ ಒತ್ತಾಯ

Update: 2018-07-03 15:01 GMT

ಬೆಂಗಳೂರು, ಜು.3: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜು.5ರಂದು ಬಜೆಟ್ ಮಂಡನೆ ಮಾಡುವ ಮುನ್ನ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯದ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶ್ವೇತ ಪತ್ರ ಹೊರಡಿಸುವುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ನಮಗೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತದೆ ಎಂದರು.

ರಾಜ್ಯಪಾಲರಿಂದ ಯಾವ ಕಾರಣಕ್ಕಾಗಿ ಈ ಭಾಷಣ ಮಾಡಿಸಲಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಈ ಸರಕಾರದ ಮುಂದಿನ ಕಾರ್ಯನೀತಿ, ದಿಕ್ಸೂಚಿ ಯಾವುದು ಇಲ್ಲ. ಇದೊಂದು ದಿಕ್ಕು ದಿಸೆ ಇಲ್ಲದ ಭಾಷಣವಾಗಿದ್ದು, ಹಿಂದಿನ ಸರಕಾರದ ಯಾವ ಕಾರ್ಯಕ್ರಮಗಳ ಬಗ್ಗೆಯೂ ಭಾಷಣದಲ್ಲಿ ಉಲ್ಲೇಖವಿಲ್ಲ ಎಂದು ಅವರು ಟೀಕಿಸಿದರು.

ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ನಂತರ, ಕಳೆದ ಮೂರುವರೆ ತಿಂಗಳಿನಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಅಂಬೇಡ್ಕರ್ ಹೇಳಿದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರವು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರಬೇಕು. ಆದರೆ, ಈ ಸರಕಾರಕ್ಕೆ ಜನರ ಆಶೀರ್ವಾದವಿದೆಯೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದ 6.50 ಕೋಟಿ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ನಿಮ್ಮ ಐದು ವರ್ಷಗಳ ಆಡಳಿತ ತೃಪ್ತಿ ತಂದಿಲ್ಲ ಎಂದು 129 ಸ್ಥಾನಗಳಿಂದ ಕಾಂಗ್ರೆಸ್ ಪಕ್ಷವನ್ನು 78 ಸ್ಥಾನಕ್ಕೆ ಇಳಿಸಿದರು. 40 ಶಾಸಕರನ್ನು ಹೊಂದಿದ್ದ ಜೆಡಿಎಸ್ 37ಕ್ಕೆ ಕುಸಿಯಿತು. ನಿಮಗೆ ಆಧಿಕಾರ ಮಾಡುವ ಯಾವುದೇ ನೈತಿಕ ಹಕ್ಕಿಲ್ಲ. ಮನ ಕಡೆ ಹೊರಡಿ ಎಂಬ ಸಂದೇಶವನ್ನು ಜನ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಆದರೂ, 224 ಶಾಸಕರು ಇರುವ ಈ ಸದನದಲ್ಲಿ 37 ಶಾಸಕರನ್ನು ಹೊಂದಿರುವವರು ಮುಖ್ಯಮಂತ್ರಿಯಾಗಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಅಧಿಕಾರಕ್ಕೆ ಬಂದ ಇತಿಹಾಸವಿಲ್ಲ. ಕಾಂಗ್ರೆಸ್ ಪಕ್ಷದವರು ಮುಖ್ಯಮಂತ್ರಿಯಾಗಿದ್ದರೆ ಜನ ಸ್ವಲ್ಪ ಸಮಾಧಾನದಿಂದ ಇರುತ್ತಿದ್ದರು. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಏಕೈಕ ಕಾರಣಕ್ಕಾಗಿ ಅಂಬೇಡ್ಕರ್ ಆಶಯವನ್ನು ಅಣುಕು ಮಾಡುವ ರೀತಿಯಲ್ಲಿ ಮೈತ್ರಿ ಸರಕಾರ ರಚನೆ ಮಾಡಿದ್ದೀರಾ ಎಂದು ಅವರು ದೂರಿದರು.

224 ಶಾಸಕರ ಪೈಕಿ ನಾವು 104 ಜನ ಪ್ರತಿಪಕ್ಷದಲ್ಲಿದ್ದು, ನಮ್ಮ ಕರ್ತವ್ಯವನ್ನು ಮಾಡುತ್ತೇವೆ. ನಮಗೆ ಯಾವುದೇ ಸಂಕೋಚವಿಲ್ಲ. ಇನ್ನು ಚುನಾವಣೆಯ ಫಲಿತಾಂಶ ಬರುವ ಮುನ್ನವೆ ಕಾಂಗ್ರೆಸ್‌ನವರು ಮಾಜಿ ಪ್ರಧಾನಿಯ ಮನೆಗೆ ಹೋಗಿ, ಅವರಿಗೆ ಅಡ್ಡ ಬಿದ್ದು, ಸರಕಾರ ರಚನೆ ಮಾಡಲು ಬೇಷರತ್ ಬೆಂಬಲ ನೀಡಿದ್ದೇಕೆ. ಜೆಡಿಎಸ್ ಜೊತೆ ಸೇರಿ ನಾವು ಸರಕಾರ ರಚನೆ ಮಾಡುತ್ತೇವೆ ಎಂಬ ಭಯವೇ ? ಅವರ ಜೊತೆ ಸರಕಾರ ಮಾಡಿ ನಾವು ಅನುಭವಿಸಿದ್ದೇವೆ ಎಂದು ಅವರು ಹೇಳಿದರು. ಬಜೆಟ್ ಮಂಡನೆ ಬಳಿಕ ಸಂಪುಟ ವಿಸ್ತರಣೆ, ಆನಂತರ ನಿಗಮ, ಮಂಡಳಿಗಳಿಗೆ ನೇಮಕ ಮಾಡುವುದಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ನಿಮ್ಮ ಶಾಸಕರ ಮೇಲೆ ನಿಮಗೆ ವಿಶ್ವಾಸವಿಲ್ಲವೆ? ಅಧಿಕಾರ ವಂಚಿತರು ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂಬ ಭಯವೇ ಎಂದು ಯಡಿಯೂರಪ್ಪ ಕಿಚಾಯಿಸಿದರು.

ನಾನು ಜನರ ಹಂಗಿನಲ್ಲಿ ಇಲ್ಲ, ಕಾಂಗ್ರೆಸ್‌ನವರ ಹಂಗಿನಲ್ಲಿದ್ದೇನೆ ಎನ್ನುವ ಮೂಲಕ ಮುಖ್ಯಮಂತ್ರಿ, ಕೇವಲ ಕುರ್ಚಿಗಾಗಿ ಜನರಿಗೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್‌ನವರು ಸರಕಾರ ರಚನೆಗೆ ಬೆಂಬಲ ನೀಡಿದಾಗ ನನ್ನ ಪ್ರಣಾಳಿಕೆಯಲ್ಲಿ ಇರುವ ಭರವಸೆಗಳನ್ನು ಈಡೇರಿಸಿದರೆ ಮಾತ್ರ ನಿಮ್ಮ ಆಹ್ವಾನ ಸ್ವೀಕರಿಸುವುದಾಗಿ ಕುಮಾರಸ್ವಾಮಿ ಶರತ್ತು ಹಾಕಿದ್ದರೆ, ಅವರನ್ನು ಮೆಚ್ಚಬಹುದಿತ್ತು ಎಂದು ಯಡಿಯೂರಪ್ಪಹೇಳಿದರು.

ಮುಖ್ಯಮಂತ್ರಿ ಹುದ್ದೆ ನನಗೆ ಯಾರೂ ಭಿಕ್ಷೆ ನೀಡಿಲ್ಲ. ನಾನು ಸಾಂದರ್ಭಿಕ ಶಿಶು ಎಂದಿದ್ದಾರೆ. ಸಾಂದರ್ಭಿಕ ಶಿಶುಗೆ ಸೈದ್ಧಾಂತಿಕವಾಗಿ ನೈಜ ತಂದೆ, ತಾಯಿ ಇರಲು ಸಾಧ್ಯವಿಲ್ಲ. ಕೃತಕವಾಗಿ ನಿಸರ್ಗದ ನಿಯಮದ ವಿರುದ್ಧ ಜನಿಸಿದ ಮಗು ಎಷ್ಟು ಕಾಲ ಜೀವಂತವಾಗಿರುತ್ತದೆ ನೋಡೋಣ. ಬಿಜೆಪಿಗೆ ಬಹುಮತ ನೀಡದಿದ್ದಕ್ಕೆ ಜನರಲ್ಲಿ ಅಪರಾಧ ಪ್ರಜ್ಞೆ ಕಾಡುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೆ, ಕಾಂಗ್ರೆಸ್-ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದೆ ವಿಪಕ್ಷದಲ್ಲಿ ಕೂರುತ್ತೇನೆ. ಇಲ್ಲವೆ ಚುನಾವಣೆಗೆ ಹೋಗುತ್ತೇನೆ. ಬೇಕಾದರೆ ಬಾಂಡ್ ಪೇಪರ್ ಮೇಲೆ ಬರೆದುಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಜನರ ನಂಬಿಕೆ, ಆಶೀರ್ವಾದ ಇಲ್ಲದ, ಕುಸಿದು ಹೋಗುವುದಕ್ಕಾಗಿಯೆ ನಿರ್ಮಾಣವಾಗಿರುವ ಆಡಳಿತದ ಕುತಂತ್ರ ವ್ಯವಸ್ಥೆಯಿದು. ಈ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರೋ, ಕುಮಾರಸ್ವಾಮಿಯವರೋ ಎಂಬ ಗೊಂದಲ ಜನರಲ್ಲಿದೆ ಎಂದು ಅವರು ಹೇಳಿದರು.

ಈ ಸರಕಾರಕ್ಕೆ ಒಂದು ರಿಮೋಟ್ ಕಂಟ್ರೋಲ್ ಹೊಸದಿಲ್ಲಿ(ರಾಹುಲ್‌ಗಾಂಧಿ ನಿವಾಸ)ಯಲ್ಲಿದ್ದರೆ, ಇನ್ನೊಂದು ಪದ್ಮನಾಭನಗರ(ಎಚ್.ಡಿ.ದೇವೇಗೌಡರ ನಿವಾಸ) ದಲ್ಲಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈ ಸರಕಾರ ಟೇಕಾಫ್ ಆಗಿಲ್ಲ, ಸರಕಾರದ ಅಸ್ತಿತ್ವದ ಬಗ್ಗೆಯೆ ಜನರಿಗೆ ನಂಬಿಕೆ ಇಲ್ಲ ಎಂದು ಯಡಿಯೂರಪ್ಪ ಟೀಕಿಸಿದರು.

ಆಂಧ್ರಪ್ರದೇಶ, ತೆಲಂಗಾಣ ರಾಜ್ಯದ ನಾಯಕರೊಂದಿಗೆ ಮುಖ್ಯಮಂತ್ರಿ ಸಂಬಂಧ ಬೆಳೆಸುತ್ತಿರುವುದನ್ನು ನೋಡಿದರೆ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಆ ಭಾಗದ ಜನ ಆತಂಕಗೊಂಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News