ವಿಧಾನಸಭೆಯಲ್ಲಿ ಬಿಎಸ್‌ವೈ-ಎಚ್‌ಡಿಕೆ ವಾಕ್ಸಮರ
ಬೆಂಗಳೂರು, ಜು.3: ಖಾಸಗಿಯವರಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ನೀಡಿದ ಹೇಳಿಕೆಯು ವಿಧಾನಸಭೆಯಲ್ಲಿ ಕೆಲಕಾಲ ಮುಖ್ಯಮಂತ್ರಿ ಹಾಗೂ ಅವರ ನಡುವೆ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿತು.
ಮಂಗಳವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯದ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿ ಧರ್ಮಸ್ಥಳಕ್ಕೆ ಹೋಗಿದ್ದಾಗ ಖಾಸಗಿಯವರಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು. ಬಜೆಟ್ ಮಂಡನೆಯಾಗಲಿ ಅದಕ್ಕೂ ಮುನ್ನ ನಾನು ಈ ಬಗ್ಗೆ ಯಾವುದೇ ಟೀಕೆಗಳನ್ನು ಮಾಡುವುದಿಲ್ಲ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಖಾಸಗಿ ಲೇವಾದೇವಿದಾರರಿಂದ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವುದಾಗಿ ನಾನು ಎಲ್ಲಿಯೂ ಹೇಳಿಕೆ ನೀಡಿಲ್ಲ. ಚುನಾವಣೆ ಪೂರ್ವದಲ್ಲಿ ಖಾಸಗಿಯವರಿಂದ ರೈತರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಲು ಚಿಂತನೆ ನಡೆಸುವುದಾಗಿ ಹೇಳಿದ್ದೆ ಎಂದರು. ಖಾಸಗಿಯವರಿಂದ ಪಡೆದಿರುವ ಸಾಲ ಮನ್ನಾ ಮಾಡುವುದಾಗಿ ನಾನು ನೀಡಿರುವ ಹೇಳಿಕೆ ಯಾವುದಾದರೂ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ, ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗಿರುವ ವಿಡಿಯೋ ಇದ್ದರೆ ನನಗೆ ನೀಡಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ನಿಯೋಜಿತ ಮುಖ್ಯಮಂತ್ರಿಯಾಗಿದ್ದಾಗ ಧರ್ಮಸ್ಥಳಕ್ಕೆ ಹೋದಾಗ ಈ ಬಗ್ಗೆ ನೀವು ನೀಡಿರುವ ಹೇಳಿಕೆ ಪ್ರಕಟವಾಗಿರುವ ಪತ್ರಿಕೆಗಳ ಪ್ರತಿ ಹಾಗೂ ಸುದ್ದಿ ವಾಹಿನಿಗಳ ವಿಡಿಯೋ ನಮ್ಮ ಬಳಿ ಇದ್ದು ಅದನ್ನು ನಿಮಗೆ ಕಳುಹಿಸಿಕೊಡುತ್ತೇವೆ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು. ಆಗ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಮಧ್ಯಪ್ರವೇಶಿಸಿ, ಪರಿಶೀಲನೆ ಬದಲು ಸಾಲ ಮನ್ನಾ ಮಾಡುವುದಿಲ್ಲ ಎಂದುಬಿಡಿ ಎಂದರು. ಆಗ ಕಾನೂನು ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಪರಿಶೀಲನೆ ಮಾಡುತ್ತೇವೆ ಎಂದರೆ ಆ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರ್ಥ ಎಂದರು.
ನಂತರ ಮಾತು ಮುಂದುವರೆಸಿದ ಯಡಿಯೂರಪ್ಪ, ರೈತರ ಸಾಲ ಮನ್ನಾ ಬಗ್ಗೆ ಪದೇ ಪದೇ ನಿಮಗೆ ನೆನಪು ಮಾಡಿಸುತ್ತಿರುವುದು ನಾಡಿನ ಜನತೆಗೆ ನೀಡಿರುವ ಭರವಸೆಯನ್ನು ಮರೆಯದಿರಲಿ ಎಂಬುದಕ್ಕಾಗಿ ಎಂದರು. ಇದಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ಜನರಿಗೆ ಕೊಟ್ಟಿರುವ ಭರವಸೆಯನ್ನು ನಾನು ಮರೆಯುವುದಿಲ್ಲ. ಅವರಿಗೆ ಕೊಟ್ಟಿರುವ ಮಾತನ್ನು ಯಾವ ರೀತಿ ಉಳಿಸಿಕೊಳ್ಳಬೇಕು ಎಂಬುದು ಗೊತ್ತಿದೆ ಎಂದರು.
ಈ ಸರಕಾರ ಟೇಕಾಫ್ ಆಗಿಲ್ಲ ಎನ್ನುತ್ತಿದ್ದೀರಾ. ಟೇಕಾಫ್ ಆಗದೇ ಇರುವ ಸರಕಾರದ ಮುಂದೆ ಯಾವ ಬೇಡಿಕೆ ಇಡುತ್ತಿದ್ದೀರಾ? ಚರ್ಚೆಯಿಂದ ಪಲಾಯನ ಮಾಡುವುದಿಲ್ಲ. ಎಲ್ಲ ವಿಚಾರಗಳಿಗೂ ಉತ್ತರ ಕೊಡುವ ನೈತಿಕತೆಯನ್ನು ಉಳಿಸಿಕೊಂಡಿದ್ದೇನೆ. ಆದರೆ, ಆರೋಪಗಳನ್ನು ಮಾಡುವಾಗ ಬಳಸುವ ಭಾಷೆಯ ಮೇಲೆ ಕಡಿವಾಣ ಇರಲಿ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಇಲ್ಲಿ ಕೂತಿದ್ದ ವೇಳೆ ನೀವು ಏನು ಮಾತನಾಡಿದ್ದೀರಾ, ರೈತರ ಸಾಲ ಮನ್ನಾ ಮಾಡುವ ಬಗ್ಗೆ ನಾನು ತೀರ್ಮಾನ ಕೈಗೊಂಡಾಗ ಸಚಿವ ಸಂಪುಟದಲ್ಲಿ ಯಾವ ರೀತಿ ವಿರೋಧ ವ್ಯಕ್ತವಾಯಿತು ಎಂಬುದು ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್‌ಕುಮಾರ್, ಸಚಿವ ಸಂಪುಟದಲ್ಲಿ ನಡೆಯುವ ಚರ್ಚೆಗಳು ಗೌಪ್ಯವಾಗಿರಬೇಕು. ಅದನ್ನು ಬಹಿರಂಗವಾಗಿ ಚರ್ಚೆ ಮಾಡಬಾರದು ಎಂದು ಸಲಹೆ ನೀಡಿದರು.
ನಾನು ಹಣಕಾಸು ಸಚಿವನಾಗಿ ರೈತರು ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದಾಗ ಇವರ ತಂದೆ(ಎಚ್.ಡಿ.ದೇವೇಗೌಡ) ಮನೆಗೆ ಕರೆಸಿ, ಯಾರನ್ನು ಕೇಳಿ ಈ ತೀರ್ಮಾನ ಕೈಗೊಂಡೆ ಎಂದು ನನ್ನನ್ನು ಪ್ರಶ್ನಿಸಿದ್ದರು ಎಂದು ಯಡಿಯೂರಪ್ಪ ನೀಡಿದ ಹೇಳಿಕೆಗೆ, ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.
ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಮೀಟರ್ ಬಡ್ಡಿಯಿಂದ ರೈತರಿಗೆ ಕಿರುಕುಳ ನೀಡುವುದಕ್ಕೆ ಕಡಿವಾಣ ಹಾಕಲು ಕೇರಳದಲ್ಲಿ ಕಾನೂನು ಜಾರಿಗೆ ತರಲಾಗಿದೆ. ನಮ್ಮ ಅಧಿಕಾರಿಗಳನ್ನು ಅಲ್ಲಿಗೆ ಕರೆಸಿ ಆ ಕಾನೂನು ಪ್ರತಿಯನ್ನು ತರಿಸಿಕೊಂಡು ಅಧ್ಯಯನ ನಡೆಸುತ್ತೇವೆ ಎಂದರು.
ನಂತರ ಮಾತು ಮುಂದುವರೆಸಿದ ಯಡಿಯೂರಪ್ಪ 2013-18ರ ನಡುವೆ 4255 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಸುಮಾರು 40 ಸಾವಿರ ಹುದ್ದೆಗಳು ಭರ್ತಿಯಾಗಿಲ್ಲ. ಮರಳು ಮಾಫಿಯಾ ಯಾವುದೆ ಭಯವಿಲ್ಲದೆ ನಡೆಯುತ್ತಿದೆ. 25 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.
ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ
ರಾಜ್ಯದ ರೈತರ 53 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಜು.5ರಂದು ಬಜೆಟ್ ಮಂಡನೆಯಾಗಲಿ, ಜು.12ರವರೆಗೆ ನಾವು ಕಾಯುತ್ತೇವೆ. ರೈತರ ಸಾಲ ಮನ್ನಾ ಆದರೆ ಸರಿ, ಇಲ್ಲದಿದ್ದರೆ ಜು.12ರ ನಂತರ ನಾವು 104 ಮಂದಿ ಶಾಸಕರು ರಾಜ್ಯಾದ್ಯಂತ ಪ್ರವಾಸ ಮಾಡಿ ಈ ಸರಕಾರ ಹೇಳಿದ್ದೇನು, ಮಾಡಿದ್ದೇನು ಎಂಬುದರ ಕುರಿತು ಜನರಿಗೆ ಮನವರಿಕೆ ಮಾಡಿ ಹೋರಾಟ ಮಾಡುತ್ತೇವೆ ಎಂದು ಯಡಿಯೂರಪ್ಪ ಎಚ್ಚರಿಕೆ ನೀಡಿದರು.
ರಾಹುಲ್‌ಗಾಂಧಿಗೆ ಕೃತಜ್ಞತೆ ಸಲ್ಲಿಸಿ
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ನಮ್ಮನ್ನು(ಜೆಡಿಎಸ್) ಟೀಕೆ ಮಾಡದೇ ಇದ್ದಿದ್ದರೆ ನಿಮಗೆ(ಬಿಜೆಪಿ) ಇನ್ನೂ 30 ಸೀಟುಗಳು ಕಡಿಮೆಯಾಗುತ್ತಿತ್ತು. ಯಡಿಯೂರಪ್ಪಗೆ ರಾಹುಲ್ ಗಾಂಧಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವುದನ್ನು ಟೀಕಿಸುತ್ತಿದ್ದೀರಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳುತ್ತಿದ್ದಂತೆ, ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್ ಕುಮಾರ್ ಇದೊಂದು ಹೊಸ ಆಯಾಮ ಎದುರು ಬಂದಿದೆ ಎಂದರು.