ವ್ಯಕ್ತಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ: ನಾಲ್ವರು ಅಪರಾಧಿಗಳನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್

Update: 2018-07-03 15:53 GMT

ಬೆಂಗಳೂರು, ಜು.3: ಮೈಸೂರಿನ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ನಾಲ್ವರು ಅಪರಾಧಿಗಳನ್ನು ಹೈಕೋರ್ಟ್ ದೋಷಮುಕ್ತಗೊಳಿಸಿದೆ.

ಮೈಸೂರು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಎಸ್.ರವಿ, ಶ್ರೀಧರ, ಎಸ್.ರಂಗಸ್ವಾಮಿ, ಮಲ್ಲಿಕಾರ್ಜುನ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಪ್ರಕರಣವೇನು: ಎಸ್.ರವಿ, ಶ್ರೀಧರ್, ಎಸ್.ರಂಗಸ್ವಾಮಿ, ಮಲ್ಲಿಕಾರ್ಜುನ ಹಾಗೂ ಆತ್ಮಹತ್ಯೆ ಮಾಡಿಕೊಂಡ ಶ್ರೀಕಾಂತ್ ಸ್ನೇಹಿತರಾಗಿದ್ದು ಚೀಟಿ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಇವರ ಜೊತೆಗಾರ ಪಿ.ಟಿ.ಮೇಷ್ಟ್ರು ಎಂದೇ ಚಿರಪರಿಚಿತವಾದ ರವಿ ಎಂಬುವರು ಚೀಟಿ ನಡೆಸುತ್ತಿದ್ದವರಿಗೆ 2 ಲಕ್ಷ ಮೊತ್ತವನ್ನು ಹಿಂದಿರುಗಿಸಿರಲಿಲ್ಲ. ಈ ಹಣವನ್ನು ನೀಡುವುದಕ್ಕೆ ಶ್ರೀಕಾಂತ್ ಗ್ಯಾರಂಟಿ ನೀಡಿದ್ದರು. ಹೇಳಿದ ದಿನ ಕಳೆದರೂ ನೀನು ಹಣ ನೀಡುತ್ತಿಲ್ಲ ಎಂದು ಅರ್ಜಿದಾರರು ಶ್ರೀಕಾಂತ್ ಜೊತೆ ಜಗಳವಾಡಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಕುರಿತಂತೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಶ್ರೀಕಾಂತ್ ದೂರು ದಾಖಲಿಸಿದ್ದರು.

ಈ ದೂರು ದಾಖಲಿಸಿದ ಬಳಿಕ ಶ್ರೀಕಾಂತ್ ಡೆತ್ ನೋಟ್ ಬರೆದಿಟ್ಟು, ಯಾರನ್ನಾದರೂ ನಂಬಿ ಜಾಮೀನು ಹಾಕಬೇಡಿ. ಇದು ದುಡ್ಡಿನ ಸಮಾಜ. ಇದಕ್ಕೆ ರವಿ, ಶ್ರೀಧರ, ರಂಗ ಮತ್ತು (ಡುಮ್ಮ) ಇವರು ಬಂದು ಹೊಡೆದು, ಬೈದು ನನಗೆ ನೋಯಿಸಿದ್ದಾರೆ ಎಂದು ಬರೆದಿದ್ದರು. 2009ರ ಜುಲೈ 22 ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಡೆತ್ ನೋಟ್ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ ಅರ್ಜಿದಾರರ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಹೊರಿಸಿದ್ದರು. ಇದಕ್ಕೆ ಸೆಷನ್ಸ್ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಅರ್ಜಿದಾರರ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದರು. ಆತ್ಮಹತ್ಯೆ ಮಾಡಿಕೊಂಡ ಶ್ರೀಕಾಂತ್ ಅವರ ಅಣ್ಣ ಹಾಗೂ ತಂದೆ ಕೂಡಾ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಇವರ ಮನೆಯಲ್ಲಿ ಆತ್ಮಹತ್ಯೆಯ ಪ್ರವೃತ್ತಿ ಇದೆ. ಡೆತ್‌ನೋಟ್ ಕೈಬರಹವನ್ನು ತಜ್ಞರಿಗೆ ನೀಡಿ ಅವರ ಅಭಿಪ್ರಾಯ ಪಡೆದಿಲ್ಲ. ಅರ್ಜಿದಾರರು ಜಗಳ ಮಾಡಿ ಹಲ್ಲೆ ನಡೆಸಿದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಕಾರಣಗಳಿಲ್ಲ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಅತಿಸೂಕ್ಷ್ಮಮನೋಭಾವದವರು. ಹಾಗಾಗಿ ಅರ್ಜಿದಾರರು ಕುಮ್ಮಕ್ಕು ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ವಾದ ಮಂಡಿಸಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅಪರಾಧಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News