ರಾಜಕೀಯ ನಾಯಕರ ಬಗ್ಗೆ ಸ್ವಾಮೀಜಿಗಳ ಸಮರ್ಥನೆ ಬೇಡ: ಕೆ.ಎಸ್.ಈಶ್ವರಪ್ಪ

Update: 2018-07-03 15:59 GMT

ಬೆಂಗಳೂರು, ಜು.3: ಜಾತಿ ರಾಜಕಾರಣ ಮಾಡುವ ಮಠಗಳು ಹಾಗೂ ರಾಜಕಾರಣಿಗಳು ಸಮಾಜದ ವಿಕಸನಕ್ಕೆ ಅಪಾಯಕಾರಿಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯದ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಗಿನೆಲೆ ಸ್ವಾಮೀಜಿ ಸಿದ್ದರಾಮಯ್ಯ ಪರವಾಗಿ ಹಾಗೂ ಒಕ್ಕಲಿಗರ ಸ್ವಾಮೀಜಿ ಕುಮಾರಸ್ವಾಮಿ ಪರವಾಗಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ನಾವು ಮುಂದಿನ ಪೀಳಿಗೆಗೆ ಯಾವ ಸಂದೇಶ ನೀಡುತ್ತಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಇತಿಹಾಸದಲ್ಲಿಯೇ ಸ್ವಾಮೀಜಿಗಳು ಈ ರೀತಿ ರಾಜಕೀಯ ನಾಯಕರನ್ನು ಸಮರ್ಥಿಸಿಕೊಂಡು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲು. ರಾಜಕೀಯ ಕೇಂದ್ರಗಳಾಗಿರುವ ಮಠಗಳು ಮತ್ತು ಜಾತಿ ರಾಜಕಾರಣ ಮಾಡುವ ರಾಜಕಾರಣಿಗಳಿಗೆ ಜನರೇ ತಕ್ಕ ಪಾಠ ಕಲಿಸಬೇಕೆಂದು ಅವರು ಆಗ್ರಹಿಸಿದರು.

ರಾಜಕೀಯ ವ್ಯವಸ್ಥೆ ಕಲುಷಿತಗೊಂಡಿದೆ. ಭಾಷೆಯ ಮೇಲೆ ಹಿಡಿತವಿಲ್ಲದಂತಾಗಿದೆ. ಒಬ್ಬರು ಮತ್ತೊಬ್ಬರ ಚಾರಿತ್ರವಧೆ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ವಿಧಾನಪರಿಷತ್ತಿನ ಸಭಾನಾಯಕಿಯಾಗಿ ಆಯ್ಕೆಯಾಗಿರುವ ಸಹೋದರಿ ಡಾ.ಜಯಮಾಲಾರನ್ನು ಅವರ ಪಕ್ಷದ ಶಾಸಕಿಯೇ ‘ಸೇವೆ’ಯಿಂದ ಇಂತಹ ಹುದ್ದೆ ಪಡೆದಿದ್ದಾರೆ ಎಂದು ಹೀಯಾಳಿಸಿರುವುದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅವರು ಟೀಕಿಸಿದರು.

ಸಚಿವ ಝಮೀರ್‌ ಅಹ್ಮದ್‌ ಖಾನ್ ಹಾಗೂ ಮಾಜಿ ಸಚಿವ ತನ್ವೀರ್‌ಸೇಠ್ ನಡುವಿನ ವಾಕ್ಸಮರ ಕುರಿತು ಪ್ರಸ್ತಾಪಿಸಿದ ಈಶ್ವರಪ್ಪ, ನನ್ನ ಕ್ಷೇತ್ರಕ್ಕೆ ನೀನು ಬಾ, ನಿನ್ನ ಕ್ಷೇತ್ರಕ್ಕೆ ನಾನು ಬರುತ್ತೇನೆ. ಯಾರ ಹಿಂದೆ ಎಷ್ಟು ಜನ ಇರುತ್ತಾರೆ ಎಂಬುದನ್ನು ನೋಡೋಣ ಎಂದು ಸವಾಲು ಹಾಕಲಾಗುತ್ತಿದೆ. ಇದೇನು ಅಖಾಡವೇ? ಒಬ್ಬರು ಸಚಿವರು, ಇನ್ನೊಬ್ಬರು ಸಚಿವರಾಗಿದ್ದವರು. ಸಾರ್ವಜನಿಕ ಜೀವನದಲ್ಲಿ ಹೇಗೆ ಇರಬೇಕು ಎಂಬುದು ಗೊತ್ತಿಲ್ಲವೆ ಎಂದು ದೂರಿದರು.

ಹೀಗೆ ಬಹಿರಂಗವಾಗಿ ಕಚ್ಚಾಡಿಕೊಂಡರೆ ಸಮಾಜಕ್ಕೆ ಯಾವ ರೀತಿಯ ಸಂದೇಶ ನೀಡಿದಂತಾಗುತ್ತದೆ. ಇಂತಹ ಸುದ್ದಿಗಳನ್ನು ಶಾಲಾ ಮಕ್ಕಳು ಪತ್ರಿಕೆಗಳಲ್ಲಿ ಓದಿದರೆ ಅವರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಈಶ್ವರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News