ಸದನದಲ್ಲಿ ಪ್ರತಿಧ್ವನಿಸಿದ ಮರಳು ಮಾಫಿಯಾ

Update: 2018-07-03 16:08 GMT

ಬೆಂಗಳೂರು, ಜು.2: ರಾಜ್ಯದಲ್ಲಿ ಕಬ್ಬಿಣ ಅದಿರು ರಫ್ತಿಗಿಂತ ದೊಡ್ಡ ಹಗರಣವಾಗಿ ಮರಳು ಮಾಫಿಯಾ ತಲೆ ಎತ್ತಿದೆ. ಪೊಲೀಸರು ಹಾಗೂ ತಹಶೀಲ್ದಾರ್‌ಗಳು ಮೇಯಲು ಇದು ಹುಲ್ಲುಗಾವಲು ಇದ್ದಂತೆ ಎಂದು ಬಿಜೆಪಿ ಸದಸ್ಯ ಮಾಧುಸ್ವಾಮಿ ಆರೋಪಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ನಿರ್ಣಯದ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ವಿಪಕ್ಷ ನಾಯಕ ಯಡಿಯೂರಪ್ಪ ಮಾತನಾಡುವ ವೇಳೆ ಮಧ್ಯಪ್ರವೇಶಿಸಿ ಅವರು ಮಾತನಾಡಿದರು.

ಚಿಕ್ಕನಾಯಕನಹಳ್ಳಿ, ಶಿರಾ, ಹೊಸದುರ್ಗ, ಹಿರಿಯೂರು ತಾಲೂಕುಗಳಲ್ಲಿ ಒಂದು ತೋಟವು ಉಳಿದಿಲ್ಲ. ಇಡೀ ರಾಜ್ಯದಲ್ಲಿ ಇದೇ ರೀತಿಯ ಪರಿಸ್ಥಿತಿ ತಲೆದೋರಿದೆ. ಪಕ್ಷಾತೀತವಾಗಿ ತಮಗೆ ಕೈ ಮುಗಿದು ಕೇಳುತ್ತೇವೆ. ಈ ಮರಳು ಮಾಫಿಯಾಗೆ ಕಡಿವಾಣ ಹಾಕಿ ಎಂದು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಜನತಾ ಮನೆಗಳನ್ನು ನಿರ್ಮಿಸಿಕೊಳ್ಳಲು ಒಂದು ಟ್ರಾಕ್ಟರ್ ಮರಳು ಸಿಗುತ್ತಿಲ್ಲ. ಮುಖ್ಯಮಂತ್ರಿಗಳು ಹಿಂದಿನ ಸರಕಾರದ ಅವಧಿಯಲ್ಲಿ ವಿಪಕ್ಷದಲ್ಲಿದ್ದಾಗ ಮರಳು ಮಾಫಿಯಾ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದನ್ನು ಅವರು ನೆನಪು ಮಾಡಿಕೊಳ್ಳಬೇಕು ಎಂದು ಮಾಧುಸ್ವಾಮಿ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮರಳು ನೀತಿಯನ್ನು ಹೊಸದಾಗಿ ಜಾರಿಗೆ ತರುವುದಾಗಿ ಹೇಳಿ ಅದರಲ್ಲಿ ಬದಲಾವಣೆ ಮಾಡಿದವರು ಯಾರು? ಶಾಸಕರು ಇಲ್ಲಿ ಪೊಲೀಸರ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಆದರೆ, ಯಾರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಸಮಸ್ಯೆಯನ್ನು ನಾನೊಬ್ಬನೆ ಪರಿಹರಿಸಲು ಸಾಧ್ಯವಿಲ್ಲ. ಈ ಸದನದ ಎಲ್ಲ ಸದಸ್ಯರು ನನಗೆ ಸಹಕಾರ ನೀಡಬೇಕು ಎಂದರು.

ಆಗ ಮಧ್ಯಪ್ರವೇಶಿಸಿದ ಯಡಿಯೂರಪ್ಪ, ಮರಳು ಮಾಫಿಯಾ ತಡೆಯಲು ನೀವು ಕೈಗೊಳ್ಳುವ ಕ್ರಮಕ್ಕೆ ನಮ್ಮ ಪಕ್ಷದ ಎಲ್ಲ ಸದಸ್ಯರು ಬೆಂಬಲ ನೀಡುತ್ತೇವೆ. ಸಾಮಾನ್ಯ ಜನರ ನೆಮ್ಮದಿ, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಬಾರದು. ಅಧಿಕಾರಿಗಳು, ರಾಜಕಾರಣಿಗಳು ಯಾರೇ ಈ ಮಾಫಿಯಾದಲ್ಲಿ ಪಾಲ್ಗೊಂಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News