‘ಬೆವರಿಗೆ ಬೆಲೆ ನಿಗದಿಯಾದರೆ ಮಾತ್ರ ಶ್ರಮಜೀವಿಗಳ ದುಡಿಮೆಗೆ ಗೌರವ’
Update: 2018-07-03 21:44 IST
ಬೆಂಗಳೂರು, ಜು. 3: ‘ಬೆವರಿಗೆ ಸೂಕ್ತ ಬೆಲೆ ನಿಗದಿಯಾದರೆ ಮಾತ್ರ ದುಡಿಮೆಗೆ ಗೌರವ ಬರಲು ಸಾಧ್ಯ. ಬೆವರು ಅಂದರೆ ಅದು ರಕ್ತವೇ. ಹೀಗಾಗಿ ಬಡವನ ಶ್ರಮಕ್ಕೆ ಬೆಲೆ ನೀಡಬೇಕು’ ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಸಲಹೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಜೆಡಿಎಸ್ ಸದಸ್ಯ ಎ.ಟಿ.ರಾಮಸ್ವಾಮಿ, ರೈತರು ಮತ್ತು ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡಬೇಕು ಎಂದು ಪ್ರಸ್ತಾಪಿಸಿದ ವೇಳೆ ಮಧ್ಯಪ್ರವೇಶಿಸಿ ಸ್ಪೀಕರ್, ನೌಕರರಿಗೆ ಸಂಬಳ ನಿಗದಿಯಾಗಿದೆ. ಆದರೆ, ನಮ್ಮ ದೇಶದಲ್ಲಿ ಬೆವರಿಗೆ ಬೆಲೆ ಇನ್ನೂ ನಿಗದಿಯಾಗಿಲ್ಲ. ಶ್ರಮ ಮತ್ತು ಶ್ರಮಜೀವಿಗಳ ಬೆವರಿಗೆ ಬೆಲೆ ಇಲ್ಲದ ಸಮಾಜ ಆರೋಗ್ಯಕರವಲ್ಲ. ನೌಕರಿಗೆ ವೇತನ ನಿಗದಿಯಾಗಿರುವಂತೆಯೇ ಬೆವರಿಗೆ ಬೆಲೆ ನೀಡುವ ಮೂಲಕ ದುಡಿಮೆಗೆ ಗೌರವ ನೀಡಬೇಕೆಂದು ಆರ್ಥಿಕತಜ್ಞ ಕಾರ್ಲ್‌ಮಾರ್ಕ್ಸ್ ಹೇಳುತ್ತಾರೆ ಎಂದು ಉಲ್ಲೇಖಿಸಿದರು.