ಹಂಸಲೇಖ, ಅರುಂಧತಿನಾಗ್‌ಗೆ ಎನ್‌ಟಿಆರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಬೆಂಗಳೂರು, ಜು.3: ಪದ್ಮಶ್ರೀ ನಟರತ್ನ ಡಾ.ಎನ್.ಟಿ.ರಾಮರಾವ್ ಅವರ 96ನೆ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ನಟಿ ಅರುಂಧತಿ ನಾಗ್ ಅವರಿಗೆ ಡಾ.ಎನ್.ಟಿ.ಆರ್. ರಾಷ್ಟ್ರೀಯ ಪುರಸ್ಕಾರ -2018 ಪ್ರಶಸ್ತಿ ಪ್ರದಾನ ಮಾಡಲು ಕರ್ನಾಟಕ ತೆಲುಗು ಅಕಾಡೆಮಿ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಕಾರ್ಯಧ್ಯಕ್ಷ ಆರ್.ಉಮಾಪತಿ ನಾಯ್ಡು, ಪ್ರಶಸ್ತಿಯನ್ನು ರಂಗಭೂಮಿ ಹಾಗೂ ಚಲನಚಿತ್ರ ರಂಗದಲ್ಲಿ ಅಪ್ರತಿಮ ಸೇವೆ ಮಾಡಿದ ಕಲಾವಿದರಿಗೆ ಕೊಡುತ್ತಾ ಬಂದಿದ್ದು, ಜು.6 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ಎಂ.ಆರ್.ದೊರೆಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಶಾಸಕರಾದ ಮುನಿರತ್ನ, ಗೋಪಾಲಯ್ಯ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ರಾಮಾಂಜನೇಯಲು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ವೇಳೆ ಎ.ಶಿವಪ್ರಸಾದ್ ಮತ್ತು ತಂಡದಿಂದ ಕನ್ನಡ ಮತ್ತು ತೆಲುಗು ಚಲನಚಿತ್ರಗಳ ಗೀತೆಗಳ ಗಾನಲಹರಿ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.