ಗೋಪಾಲನ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಬಣ್ಣ ಬಳಿಯುವ ರೋಬೋಟ್ ಆವಿಷ್ಕಾರ
ಬೆಂಗಳೂರು, ಜು.3: ಗೋಪಾಲನ್ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಗೋಡೆಗಳಿಗೆ ಬಣ್ಣ ಬಳಿಯುವ ಅತ್ಯುತ್ತಮ ರೋಬೋಟ್ ಅನ್ನು ಆವಿಷ್ಕರಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಲೇಜಿನ ವಿದ್ಯಾರ್ಥಿ ಪಿ.ದೇವರಾಜ್, ಇದೊಂದು ರೊಬೊಟಿಕ್ ಸಾಧನವಾಗಿದ್ದು, ಪೇಂಟರ್‌ಗಳಿಗೆ ಅವರ ಕೆಲಸವನ್ನು ಅತ್ಯಂತ ಸುಲಭವಾಗಿ ಮಾಡಲು ಸಹಕಾರ ನೀಡುತ್ತದೆ. ಇದರಲ್ಲಿ ಸಿಸರ್ ಲಿಫ್ಟ್ ಮೆಕ್ಯಾನಿಸಂ ಬಳಕೆ ಮಾಡಿದ್ದು, ಬಣ್ಣವನ್ನು ಗೋಡೆಗಳ ಮೇಲೆ ಅಂಟಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಎಂ.ಎನ್.ವಿವೇಕ್ ಮಾತನಾಡಿ, ಈ ಯಂತ್ರದ ಮೂಲಕ ಪೈಂಟಿಂಗ್ ಬಗ್ಗೆ ಕನಿಷ್ಠ ಜ್ಞಾನವಿಲ್ಲದವರೂ ಸುಲಭವಾಗಿ ಗೋಡೆಗಳಿಗೆ, ದೊಡ್ಡ ದೊಡ್ಡ ಕಟ್ಟಡಗಳಿಗೆ ವೃತ್ತಿಪರ ಪೈಂಟರ್ಸ್ ರೀತಿಯಲ್ಲಿ ಬಣ್ಣ ಬಳಿಯಬಹುದಾಗಿದೆ. ಸಾಮಾನ್ಯರೂ ಯಂತ್ರವನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಪೈಂಟಿಂಗ್ ಮಾಡಬಹುದು. ಅಲ್ಲದೆ, ಬಣ್ಣ ಬಳಿದ ಬಳಿಕ ವೃತ್ತಿಪರರು ಹಾಗೂ ಯಂತ್ರ ಮಾಡಿರುವುದಕ್ಕೂ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ ಎಂದು ತಿಳಿಸಿದರು.
ಸೆಮಿ ಆಟೊಮೇಟೆಡ್ ಹೆಸರಿನಲ್ಲಿ ತಯಾರಿಸಿರುವ ಈ ಪೈಂಟಿಂಗ್ ಮೆಷಿನ್ ಮುಕ್ತವಾಗಿ ಸಂಚರಿಸುವ ಕಾಲುಗಳಿದ್ದು, ಕಷ್ಟವಿಲ್ಲದೆ ಎಲ್ಲ ಸ್ಥಳಗಳಿಗೂ ಕೊಂಡೊಯ್ಯಬಹುದು. ಇದನ್ನು ಸಣ್ಣ ಪ್ರಮಾಣದ ಉದ್ಯಮಗಳ ಪ್ರಾಡಕ್ಟ್‌ಗಳ ಸಾಲಿನಲ್ಲಿ ನಿಲ್ಲಿಸಬಹುದಾಗಿದೆ ಎಂದು ಹೇಳಿದರು.
ಬೀಳುವ ಹಂತದಲ್ಲಿರುವ ಗೋಡೆಗಳನ್ನು ಹತ್ತಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಬಹುದು. ಸ್ವಯಂ ಚಾಲಿತವಾಗಿರುವುದರಿಂದ ಹೆಚ್ಚು ಕೆಲಸ ನಿರ್ವಹಿಸಬಹುದು. ಅಲ್ಲದೆ, ಪೈಂಟಿಂಗ್‌ನಲ್ಲಿ ಹಾನಿಕಾರಕ ರಾಸಾಯನಿಕ ಮಿಶ್ರಣಗಳಿರುತ್ತದೆ. ಅದರಿಂದಾಗಿ ಬಣ್ಣದ ಕೆಲಸ ಮಾಡುವ ಸಂದರ್ಭದಲ್ಲಿ ಕಣ್ಣಿಗೆ ಹಾರಿ ಕಣ್ಣು ಹಾಗೂ ಚರ್ಮಕ್ಕೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಇದರಿಂದ ಅದನ್ನು ನಿಯಂತ್ರಿಸಬಹುದು. ವೇಗವಾಗಿ ಕೆಲಸ ನಡೆಯುತ್ತದೆ ಹಾಗೂ ವೆಚ್ಚ ಉಳಿತಾಯವಾಗುತ್ತದೆ ಎಂದು ಅವರು ವಿವರಿಸಿದರು.