ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಯಥಾವತ್ತಾಗಿ ಮುಂದುವರೆಸಲು ಆಗ್ರಹ: ಜು.25 ರಂದು ದಿಲ್ಲಿ ಚಲೋ
ಬೆಂಗಳೂರು, ಜು.3: ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾನೂನು ಬದ್ಧವಾಗಿ ಕಾಯ್ದೆಯನ್ನು ಸಂಪೂರ್ಣವಾಗಿ ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿ ಮಾದಿಗ ದಂಡೋರದಿಂದ ಜು.25 ರಂದು ದಿಲ್ಲಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಂಡೋರದ ಅಧ್ಯಕ್ಷ ಬಿ.ನರಸಪ್ಪ ಮಾದಿಗ, ಹಿಂದಿನಿಂದಲ್ಲೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಾಂಗಕ್ಕೆ ಅನ್ಯಾಯವಾಗುತ್ತಲೇ ಇದೆ. ಶೋಷಿತ ಸಮಾಜವಾದ ದಲಿತರನ್ನು ಮತ್ತಷ್ಟು ಶೋಷಣೆಗೆ ನೂಕಲು ಮುಂದಾಗಿದ್ದಾರೆ. ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ನಮ್ಮನ್ನು ಕೇವಲ ಮತಬ್ಯಾಂಕ್‌ಗಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರ ಮೇಲೆ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯ ಇನ್ನೂ ನಿಂತಿಲ್ಲ. ಗಿರಿಜನ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಅಂಬೇಡ್ಕರ್ ಶೋಷಿತರಿಗಾಗಿ ಭದ್ರವಾದ ಕಾನೂನು ರಚಿಸಿದರು. ಆದರೂ, ಮನುವಾದಿ, ಕುತಂತ್ರಿಗಳು ದೇಶಾದ್ಯಂತ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಿದ್ದಾರೆ. ಅದನ್ನು ಸರಿಪಡಿಸುವಂತೆ ಕೇಂದ್ರವನ್ನು ಎಚ್ಚರಿಸಲು ದಿಲ್ಲಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದಲಿತರ ಮೇಲೆ ದೌರ್ಜನ್ಯ, ಅತ್ಯಾಚಾರಗಳು ನಡೆದಾಗ ಪ್ರತಿಭಟನೆಗಳನ್ನು ಹತ್ತಿಕ್ಕಲು ಈಗಾಗಲೇ ನ್ಯಾಯಾಲಯ ತೀರ್ಪು ನೀಡಿರುವುದು ಶೋಚನೀಯ ಸಂಗತಿ. ಆದುದರಿಂದಾಗಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪುನರ್ ಪರಿಶೀಲಿಸುವಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ದಕ್ಷಿಣ ಭಾರತದ ಲಕ್ಷಾಂತರ ದಲಿತರು ಮಂದಕೃಷ್ಣ ಅವರ ನೇತೃತ್ವದಲ್ಲಿ ಈಗಾಗಲೇ ಆಂಧ್ರದ ವರಂಗಲ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈಗ ಮಾದಿಗ ದಂಡೋರ ಮತ್ತೆ ಕೇಂದ್ರವನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಿದೆ ಎಂದರು.
ದಿಲ್ಲಿ ಚಲೋ ಮುಂದುವರೆದ ಭಾಗವಾಗಿ ಇದೇ ತಿಂಗಳಲ್ಲಿ ಸಂಸತ್ತಿನ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ದೌರ್ಜನ್ಯ ತಡೆ ಕಾಯ್ದೆಯನ್ನ ಬದಲಿಸದೇ, ಯಥಾವತ್ತಾಗಿ ಇರಲು ಬಿಡುವಂತೆ ಆಗ್ರಹಿಸಿ ಬೃಹತ್ ಸಮಾವೇಶ ಮಾಡಲಾಗುತ್ತದೆ. ಅದರಲ್ಲಿ ದಲಿತರು, ಗಿರಿಜನರು, ಆದಿವಾಸಿಗಳು, ತುಳಿತಕ್ಕೊಳಗಾದವರ ಪರ ಹೋರಾಟಗಾರರು, ಬುದ್ಧಿಜೀವಿಗಳು, ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.