ಚನ್ನಹಳ್ಳಿಯನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿಸಲು ನಿರ್ಧಾರ: ಯುನಕ್ತಿ ಸಂಸ್ಥೆ ಸಂಸ್ಥಾಪಕಿ ನೀರಜಾ
ಬೆಂಗಳೂರು, ಜು. 3: ಸಿಎಸ್‌ಆರ್ ಯೋಜನೆಯಡಿ ಚನ್ನಹಳ್ಳಿ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸಲು ಯುನಕ್ತಿ ಸಂಸ್ಥೆ ನಿರ್ಧರಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ನೀರಜಾ ತಿಳಿಸಿದ್ದಾರೆ.
ಮಂಗಳವಾರ ಯಲಹಂಕ ತಾಲೂಕಿನ ಚನ್ನಹಳ್ಳಿಯಲ್ಲಿ ಭಾರತ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆ ಮತ್ತು ಯುನಕ್ತಿ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, ಶಾಲಾ ವೇದಿಕೆ ಉದ್ಘಾಟನೆ, ಕೈದೋಟ ನಿರ್ಮಾಣಕ್ಕೆ ಸಸಿಗಳ ವಿತರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಚನ್ನಹಳ್ಳಿಯಲ್ಲಿ ಸುಮಾರು 70 ಕ್ಕೂ ಹೆಚ್ಚು ಮನೆಗಳಲ್ಲಿ ಶೌಚಾಲಯವಿಲ್ಲ. ಹೀಗಾಗಿ, ಬಹಿರ್ದೆಸೆಗೆ ಬಯಲನ್ನೆ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ನಮ್ಮ ಸಂಸ್ಥೆಯಿಂದ ಈ ಗ್ರಾಮವನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.
ಅಡುಗೆ ಹಾಗೂ ನೀರು ಕಾಯಿಸಲು ಸೌದೆ ಒಲೆಯನ್ನೆ ಅವಲಂಬಿಸಿರುವುದರಿಂದ ಸುತ್ತಮುತ್ತಲ ಪರಿಸರ ಮಾಲಿನ್ಯವಾಗುತ್ತಿದೆ. ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರತಿ ಮನೆಗಳ ಸುತ್ತಮುತ್ತ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಎಲ್ಲರೂ ಇದಕ್ಕೆ ಕೈಜೋಡಿಸಿ ಪರಿಸರ ಮಾಲಿನ್ಯ ತಡೆಗಟ್ಟಲು ಪಣತೊಡಬೇಕಿದೆ ಎಂದು ಕರೆ ನೀಡಿದರು.
ಭಾರತ ಸಮುದಾಯ ಅಭಿವೃದ್ಧಿ ಸೇವಾ ಸಂಸ್ಥೆ ಅಧಿಕಾರಿ ಎಚ್.ಟಿ.ರಾಮಚಂದ್ರಪ್ಪ ಮಾತನಾಡಿ, ಗ್ರಾಮದಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ 122 ಕುಟುಂಬಗಳಿಗೆ ಕಿಚನ್ ಗಾರ್ಡನ್ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಜ್ಯೋತಿ ಕಲ್ಲೇಶ್, ಸಂಸ್ಥೆ ಮುಖ್ಯಸ್ಥೆ ವಿದ್ಯಾಪೈ, ಮೀನುಗುಂಟೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜೇಯ್ ಸೇರಿ ಸಂಸ್ಥೆಯ ಸ್ವಯಂ ಸೇವಕರು ಇದ್ದರು.