ಫಿಫಾ ವಿಶ್ವಕಪ್: ಶೂಟೌಟ್ ಶಾಪದಿಂದ ಮುಕ್ತವಾದ ಇಂಗ್ಲೆಂಡ್ ಎಂಟರ ಘಟ್ಟಕ್ಕೆ

Update: 2018-07-04 03:37 GMT

ಮಾಸ್ಕೊ, ಜು. 4: ಇಂಗ್ಲೆಂಡ್ ಕೊನೆಗೂ ಪೆನಾಲ್ಟಿ ಶಾಪದಿಂದ ಮುಕ್ತವಾಗಿದ್ದು, ಫಿಫಾ ವಿಶ್ವಕಪ್ ಪ್ರಿ ಕ್ವಾರ್ಟರ್ ಫೈನಲ್ ಹಂತದ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳಿಂದ ಸೋಲಿಸಿ, ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.

ಇದಕ್ಕೂ ಮುನ್ನ 93ನೇ ನಿಮಿಷದಲ್ಲಿ ದಕ್ಷಿಣ ಅಮೆರಿಕ ತಂಡ ಸಮಬಲ ಸಾಧಿಸಿ ಫಲಿತಾಂಶವನ್ನು ಕ್ಲೈಮ್ಯಾಕ್ಸ್‌ಗೆ ಒಯ್ದಿತ್ತು. ಈ ಮುನ್ನ ಮೂರು ಬಾರಿ ವಿಶ್ವಕಪ್ ಶೂಟೌಟ್‌ನಲ್ಲಿ ಸೋಲು ಅನುಭವಿಸಿದ್ದ ಇಂಗ್ಲೆಂಡ್ ತಂಡ, ಯೂರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಕದನಗಳ ಪೈಕಿ ಮೂರರಲ್ಲಿ ಸೋಲು ಅನುಭವಿಸಿತ್ತು. ಆದರೆ ಮಂಗಳವಾರ ನಡೆದ ಪಂದ್ಯದಲ್ಲಿ ಮಾಟೆಸ್ ಉರಿಬ್ ಮತ್ತು ಕಾರ್ಲೋಸ್ ಬಕ್ಕಾ ತಮ್ಮ ಹೊಡೆತವನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದರೂ, ಎರಿಕ್ ಡಿಯರ್ ಇಂಗ್ಲೆಂಡ್ ಗೆಲುವಿನ ರೂವಾರಿ ಎನಿಸಿದರು. ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿ ಶೂಟೌಟ್ ಎದುರಿಸಿದ ಕೊಲಂಬಿಯಾ ಅದನ್ನು ಗೆಲುವಾಗಿ ಪರಿವರ್ತಿಸಿಕೊಳ್ಳುವಲ್ಲಿ ವಿಫಲವಾಯಿತು.

ಹ್ಯಾರಿ ಕೇನ್ 57ನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ, ಟೂರ್ನಿಯಲ್ಲಿ ಆರು ಗೋಲು ಗಳಿಸಿದ ದಾಖಲೆಗೆ ಭಾಜನರಾದರು. ಇಂಗ್ಲೆಂಡ್ ಇನ್ನೇನು ಗೆಲುವಿನ ದಡ ಸೇರಿತು ಅಂದುಕೊಳ್ಳುವಷ್ಟರಲ್ಲಿ ಕೊಲಂಬಿಯಾದ ಯೆರ್ರಿ ಮಿನಾ ಗೋಲು ಹೊಡೆದರು. ಹೆಚ್ಚುವರಿ ಅವಧಿಯಲ್ಲಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದವು.

ಎಂಟರ ಘಟ್ಟದ ಪಂದ್ಯದಲ್ಲಿ ಸ್ವಿಟ್ಝರ್‌ಲೆಂಡ್ ಸವಾಲನ್ನು 1-0 ಅಂತರದಿಂದ ಬದಿಗೊತ್ತಿದ ಸ್ವೀಡನ್ ಜತೆ ಇಂಗ್ಲೆಂಡ್ ಸೆಣೆಸಲಿದೆ. ಸೆಮಿಫೈನಲ್ ಪ್ರವೇಶಿಸಿದಲ್ಲಿ ರಷ್ಯಾ ಹಾಗೂ ಕ್ರೊವೇಶಿಯಾ ನಡುವಿನ ಪಂದ್ಯದ ವಿಜೇತ ತಂಡವನ್ನು ಇಂಗ್ಲೆಂಡ್ ಎದುರಿಸಬೇಕಾಗುತ್ತದೆ. ಶೂಟೌಟ್‌ಗೆ ಮುನ್ನ ಕೊಲಂಬಿಯಾದ ಪ್ರಮುಖ ಆಟಗಾರ ಜೇಮ್ಸ್ ರೋಡ್ರಿಗಸ್ ಗಾಯಾಳುವಾಗಿ ತೆರಳಿದ್ದು, ಆ ತಂಡದ ಪಾಲಿಗೆ ದುಬಾರಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News