ರಾಹುಲ್ ಶತಕ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭ ಜಯ

Update: 2018-07-04 06:11 GMT

ಮ್ಯಾಂಚೆಸ್ಟರ್, ಜು. 4: ಚೈನಾಮನ್ ಕುಲದೀಪ್ ಯಾದವ್ ಅವರ ಅದ್ಭುತ ಸ್ಪಿನ್ ದಾಳಿ ಹಾಗೂ ಕೆ.ಎಲ್.ರಾಹುಲ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತ, ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದೆ.

ಪಂದ್ಯದಲ್ಲಿ ಕೇವಲ 24 ರನ್ನುಗಳಿಗೆ ಐದು ವಿಕೆಟ್ ಕಿತ್ತ ಯಾದವ್, ಐದು ವಿಕೆಟ್‌ಗಳ ಗೊಂಚಲು ಪಡೆದ ಮೊಟ್ಟಮೊದಲ ಚೈನಾಮನ್ ಬೌಲರ್ ಎನಿಸಿಕೊಂಡರು. ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ನುಗಳ ಸಾಧಾರಣ ಮೊತ್ತ ಗಳಿಸಿತು.

ಬ್ಯಾಟ್ಸ್‌ಮನ್ ಕರ್ನಾಟಕದ ಕೆ.ಎಲ್.ರಾಹುಲ್ ತಮ್ಮ ಎರಡನೇ ಟಿ-20 ಶತಕ ಸಾಧಿಸಿ, ಭಾರತದ ಸುಲಭ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. 54 ಎಸೆತಗಳಲ್ಲಿ ರಾಹುಲ್ 101 ರನ್ ಸಿಡಿಸಿ ನಿಗದಿತ ಗುರಿಯನ್ನು 18.2 ಓವರ್‌ಗಳಲ್ಲಿ ತಲುಪಲು ನೆರವಾದರು.

ರಾಹುಲ್ ಎರಡನೇ ವಿಕೆಟ್‌ಗೆ ರೋಹಿತ್ ಶರ್ಮಾ (30 ಎಸೆತಗಳಲ್ಲಿ 32) ಜತೆ ಸೇರಿ 123 ರನ್‌ಗಳನ್ನು ಬಾಚಿದರು. ಮನೀಶ್ ಪಾಂಡೆ ಗಾಯಾಳುವಾದ್ದರಿಂದ ಅವಕಾಶ ಪಡೆದ ರಾಹುಲ್ ಇನಿಂಗ್ಸ್‌ನಲ್ಲಿ 5 ಸಿಕ್ಸ್ ಹಾಗೂ 10 ಬೌಂಡರಿ ಸೇರಿದ್ದವು. ರಾಹುಲ್‌ಗೆ ಇನಿಂಗ್ಸ್ ಆರಂಭಿಸುವ ಅವಕಾಶ ನೀಡಿದ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರು. ಕೊಹ್ಲಿ (ಅಜೇಯ 20) ಮೊಯಿನ್ ಅಲಿಯವರ ಎಸೆತದಲ್ಲಿ ಸಿಕ್ಸ್ ಹೊಡೆಯುವ ಮೂಲಕ ಭರ್ಜರಿಯಾಗಿ ಭಾರತದ ಜಯವನ್ನು ಆಚರಿಸಿದರು.

ಇದಕ್ಕೂ ಮುನ್ನ ಜೋಸ್ ಬಟ್ಲರ್ (45 ಎಸೆತಗಳಲ್ಲಿ 69) ಮತ್ತು ಜೇಸನ್ ರಾಯ್ (20 ಎಸೆತಗಳಲ್ಲಿ 30) ಇಂಗ್ಲೆಂಡ್‌ಗೆ ಬಿರುಸಿನ ಆರಂಭ ಒದಗಿಸಿದರು. ಮೊದಲ ಐದು ಓವರ್‌ಗಳಲ್ಲೇ ಇಂಗ್ಲೆಡ್ 50ರ ಗಡಿ ದಾಟಿತ್ತು. 12ನೇ ಓವರ್‌ನಲ್ಲಿ 1 ವಿಕೆಟ್‌ಗೆ 95 ಇದ್ದಾಗ ಚೈನಾಮನ್ ಕೈಚಳಕ ಇಂಗ್ಲೆಂಡ್‌ನ ವೇಗಕ್ಕೆ ಕಡಿವಾಣ ಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News