ಗೌರಿ ಹತ್ಯೆಯ ಹಿಂದೆ ನಿವೃತ್ತ ಕರ್ನಲ್ ಸಹಿತ ನಾಲ್ಕು ಪ್ರಮುಖ ಬಲಪಂಥೀಯ ನಾಯಕರು ಶಾಮೀಲು ?

Update: 2018-07-04 05:44 GMT

ಬೆಂಗಳೂರು, ಜು. 4: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಲ್ಲಿ ನಿವೃತ ಸೇನಾ ಕರ್ನಲ್ ಸೇರಿದಂತೆ ಬಲಪಂಥೀಯ ಸಂಘಟನೆಯೊಂದರ ನಾಲ್ಕು ಮಂದಿ ಪ್ರಮುಖ ನಾಯಕರ ಕೈವಾಡವಿದೆಯೆಂಬ ಬಲವಾದ ಶಂಕೆಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ವ್ಯಕ್ತಪಡಿಸಿದೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.

ಈ ನಾಲ್ಕು ಮಂದಿಯೂ ಗೌರಿ ಹತ್ಯೆಯಲ್ಲಿ ಶಾಮೀಲಾಗಿರಬಹುದೆಂದು ತನಿಖೆ ಬೊಟ್ಟು ಮಾಡಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ನಿಖರ ಸಾಕ್ಷ್ಯ ಸಂಗ್ರಹಿಸಲು ವಿಶೇಷ ತನಿಖಾ ತಂಡ ಪ್ರಯತ್ನಿಸುತ್ತಿದೆ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ಗೌರಿಯನ್ನು ಮುಗಿಸಲು ಈ ನಾಲ್ಕು ಮಂದಿ ನಾಯಕರು ಅಮೋಲ್ ಕಾಳೆಗೆ ಆದೇಶ ನೀಡಿರಬೇಕೆಂದು ಹಾಗೂ ಗೌರಿ ಮಾಡಿದ್ದಾರೆನ್ನಲಾದ ಹಿಂದೂ ಧರ್ಮವನ್ನು ಅವಹೇಳನಗೈಯ್ಯುವಂತಹ ಭಾಷಣದಿಂದ ಅವರು ಆಕ್ರೋಶಿತರಾಗಿದ್ದರೆಂದು ತಿಳಿದು ಬಂದಿದೆ.

‘‘ಗೌರಿ ಕೊಲೆಗೆ ಈ ನಾಲ್ಕು ಮಂದಿಯೇ ಆದೇಶ ನೀಡಿದ್ದಾರೆಂದು ತಿಳಿಯಲಾಗಿದ್ದರೂ ಇಲ್ಲಿಯ ತನಕ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ದೊರಕಿಲ್ಲ, ಅವುಗಳನ್ನು ಸಂಗ್ರಹಿಸುವ ಯತ್ನ ನಡೆದಿದೆ’’ ಎಂದು ಹೆಸರು ಹೇಳಲಿಚ್ಛಿಸದ ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.

ಈತನ್ಮಧ್ಯೆ ತಲೆಮರೆಸಿಕೊಂಡಿರುವ ಕೆಲ ಆರೋಪಿಗಳಿಗೆ ಈ ಬಲಪಂಥೀಯ ಸಂಘಟನೆ ರಕ್ಷಣೆ ನೀಡುತ್ತಿದೆಯೆನ್ನಲಾಗಿದೆ. ‘‘ಈ ಪ್ರಕರಣದಲ್ಲಿ ಬೇಕಾದ ಕನಿಷ್ಠ ಮೂರು ಮಂದಿ ತಲೆಮರೆಸಿಕೊಂಡಿದ್ದಾರೆ. ಬಂಧನವನ್ನು ತಪ್ಪಿಸಲು ಈ ನಿರ್ದಿಷ್ಟ ಸಂಘಟನೆ ಅವರಿಗೆ ಧನಸಹಾಯ ನೀಡುತ್ತಿದೆ ಎಂದು ನಮಗೆ ಮಾಹಿತಿಯಿದೆ’’ ಎಂದು ಆ ಅಧಿಕಾರಿ ಹೇಳಿದ್ದಾರೆ.

ಗೌರಿಯನ್ನು ಹತ್ಯೆಗೈದಿದ್ದು ಅಮೋಲ್ ಕಾಳೆಯಾಗಿದ್ದರೂ ಹಾಗೂ ಆತನೇ ಈ ಸಂಚಿನ ರೂವಾರಿಯಾಗಿದ್ದರೂ ಆತ ಬೇರೆ ಕೆಲವರ ಆದೇಶದಂತೆ ಈ ಕೃತ್ಯ ನಡೆಸಿದ್ದ ಎಂದು ತನಿಖಾಕಾರರು ಬಲವಾಗಿ ನಂಬಿದ್ದಾರೆ. 

ಬಲಪಂಥೀಯ ಸಂಘಟನೆಯಿಂದ ಹತ್ಯೆಗೆ ಹಣ ಪೂರೈಕೆ

ಗೌರಿ ಹತ್ಯೆ ಸಂಚಿನಿಂದ ಹಿಡಿದು ಹತ್ಯೆ ನಡೆಸುವ ತನಕ ಪ್ರತಿ ಹಂತದಲ್ಲೂ ಒಂದು ನಿರ್ದಿಷ್ಟ ಬಲಪಂಥೀಯ ಸಂಘಟನೆ ಹಣಕಾಸು ಒದಗಿಸಿತ್ತು. ‘‘ಜನವರಿ 2017ರಲ್ಲಿ ಈ ಸಂಚು ಹೂಡಿದಂದಿನಿಂದ ಅಮೋಲ್ ಕಾಳೆಗೆ ಮಾಸಿಕ ಕನಿಷ್ಠ ರೂ 1.25 ಲಕ್ಷ ನೀಡಲಾಗುತ್ತಿತ್ತು. ಈ ಹಣವನ್ನು ಈ ಹತ್ಯೆ ಉದ್ದೇಶಕ್ಕೆ ಜನರನ್ನು ನಿಯೋಜಿಸಲು ಹಾಗೂ ಅವರ ಪ್ರಯಾಣ ಉದ್ದೇಶಗಳಿಗೆ ಬಳಸಲಾಗಿತ್ತು,’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೃಪೆ: http://www.newindianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News