ರೈತರಿಗೆ ಕೇಂದ್ರ ಸರಕಾರದ ಕೊಡುಗೆ: ಭತ್ತ ಸೇರಿ 14 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ

Update: 2018-07-04 13:31 GMT

ಹೊಸದಿಲ್ಲಿ, ಜು.4: ಭತ್ತ ಸೇರಿದಂತೆ 14 ಮುಂಗಾರು ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರ ರೈತರಿಗೆ ಭರ್ಜರಿ ಕೊಡುಗೆ ಪ್ರಕಟಿಸಿದೆ. ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿ ಉಳಿದಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಕೈಗೊಂಡಿರುವ ಈ ನಿರ್ಧಾರದಿಂದಾಗಿ 15,000 ಕೋಟಿ ರೂ. ವಾರ್ಷಿಕ ಹೊರೆ ಬೀಳಲಿದೆ.

ಭತ್ತ (ಸಾಮಾನ್ಯ ಗ್ರೇಡ್)ದ ಬೆಂಬಲ ಬೆಲೆಯನ್ನು ಪ್ರತೀ ಕ್ವಿಂಟಾಲ್‌ಗೆ 200 ರೂ. ಹೆಚ್ಚಿಸಿ 1,750 ರೂ.(ಕ್ವಿಂಟಾಲ್‌ಗೆ) ನಿಗದಿಗೊಳಿಸಲಾಗಿದ್ದರೆ ‘ಎ’ ಗ್ರೇಡ್ ಭತ್ತದ ಬೆಂಬಲ ಬೆಲೆಯನ್ನು ಪ್ರತೀ ಕ್ವಿಂಟಾಲ್‌ಗೆ 160 ರೂ. ಹೆಚ್ಚಿಸಿ 1,750 ರೂ. ನಿಗದಿಗೊಳಿಸಲಾಗಿದೆ. ಸಾಮಾನ್ಯ ಗ್ರೇಡ್ ಮತ್ತು ಎ ಗ್ರೇಡ್ ಭತ್ತದ ಕನಿಷ್ಟ ಬೆಂಬಲ ಬೆಲೆ ಕ್ರಮವಾಗಿ ಕ್ವಿಂಟಾಲ್‌ಗೆ 1,550 ರೂ. ಹಾಗೂ 1,590 ರೂ. ಆಗಿದೆ. ಹತ್ತಿ (ಸಾಧಾರಣ ಉದ್ದ)ಯ ಕನಿಷ್ಟ ಬೆಂಬಲ ಬೆಲೆ ಕ್ವಿಂಟಾಲ್‌ಗೆ ರೂ.4,020ರಿಂದ ರೂ.5,150ಕ್ಕೆ , ಹತ್ತಿ(ಉದ್ದದ)ಯ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 4,320 ರೂ.ನಿಂದ 5,450 ರೂ.ಗೆ ಹೆಚ್ಚಿಸಲಾಗಿದೆ. ಧಾನ್ಯಗಳಲ್ಲಿ ತೊಗರಿಯ ಕನಿಷ್ಟ ಬೆಂಬಲ ಬೆಲೆ 5,450 ರೂ.ನಿಂದ 5,675 ರೂ.ಗೆ, ಹೆಸರು ಬೇಳೆಯ ಕನಿಷ್ಟ ಬೆಂಬಲ ಬೆಲೆ ಕ್ವಿಂಟಾಲ್‌ಗೆ ರೂ. 5,575ರಿಂದ ರೂ.6,975ಕ್ಕೆ ಹೆಚ್ಚಿಸಲಾಗಿದೆ. ಉದ್ದಿನ ಬೇಳೆಯ ಕನಿಷ್ಟ ಬೆಂಬಲ ಬೆಲೆ ಕ್ವಿಂಟಾಲ್‌ಗೆ 5,400 ರೂ.ನಿಂದ 5,600 ರೂ.ಗೆ ಹೆಚ್ಚಿಸಲಾಗಿದೆ.

ಆಹಾರಧಾನ್ಯಗಳನ್ನು ಸಂಗ್ರಹಿಸಿ ವಿತರಣೆ ಮಾಡುವ ಸರಕಾರಿ ಇಲಾಖೆ ಭಾರತೀಯ ಆಹಾರ ನಿಗಮ(ಎಫ್‌ಸಿಐ) ರೈತರಿಂದ ಕನಿಷ್ಟ ಬೆಂಬಲ ಬೆಲೆಯಲ್ಲಿ ಗೋಧಿ ಮತ್ತು ಅಕ್ಕಿಯನ್ನು ಖರೀದಿಸಿ ಇವನ್ನು ಆಹಾರ ಭದ್ರತಾ ಕಾನೂನಿನಡಿ ಸರಬರಾಜು ಮಾಡುತ್ತದೆ. ಭತ್ತವು ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾಗಿದ್ದು ನೈರುತ್ಯ ಮುಂಗಾರು ಆರಂಭವಾಗುತ್ತಿರುವಂತೆಯೇ ಭತ್ತದ ಕೃಷಿ ಕಾರ್ಯಕ್ಕೂ ಚಾಲನೆ ದೊರಕಿದೆ. ಸರಕಾರದ ಕೃಷಿ ಸಲಹಾ ಸಮಿತಿ ಸೂಚಿಸಿರುವ ಬೆಂಬಲ ಬೆಲೆ ದರಕ್ಕಿಂತ ಹೆಚ್ಚಿನ ದರವನ್ನು ಕೃಷಿ ಸಚಿವಾಲಯವು ಪ್ರಸ್ತಾಪಿಸಿತ್ತು ಎಂದು ಮೂಲಗಳು ತಿಳಿಸಿವೆ .

2017-18ರ ಕೃಷಿ ವರ್ಷ(2017ರ ಜುಲೈಯಿಂದ 2018ರ ಜೂನ್‌ವರೆಗೆ) ಭಾರತವು 279.51 ಮಿಲಿಯನ್ ಟನ್‌ಗಳಷ್ಟು ಪ್ರಮಾಣದ ಆಹಾರಧಾನ್ಯವನ್ನು ಉತ್ಪಾದಿಸಿದ್ದು, ಇದು ನೂತನ ದಾಖಲೆಯಾಗಿದೆ. ಈ ಬಾರಿ ಮುಂಗಾರು ಮಳೆ ಸಾಮಾನ್ಯ ಮಟ್ಟದಲ್ಲಿರಲಿದೆ ಎಂಬ ಮುನ್ಸೂಚನೆಯ ಹಿನ್ನೆಲೆಯಲ್ಲಿ ಈ ಬಾರಿಯೂ ಆಹಾರಧಾನ್ಯ ಉತ್ಪನ್ನ ಗರಿಷ್ಟ ಪ್ರಮಾಣದಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ರೈತರ ಬೆಳೆಗಳಿಗೆ ಉತ್ಪನ್ನ ವೆಚ್ಚದ 1.5ರಷ್ಟು ಪ್ರಮಾಣದ ದರ ಒದಗಿಸುವುದಾಗಿ 2014ರ ಲೋಕಸಭಾ ಚುನಾವಣೆ ಸಂದರ್ಭ ಬಿಜೆಪಿ ಭರವಸೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News